ಭಾರತದ ಷೇರು ಮಾರುಕಟ್ಟೆ ಈಗ ರೇಸ್ ಕುದುರೆ: ಹೂಡಿಕೆ ಮಾಡಿದವರಿಗೆ ಕೈತುಂಬಾ ಕಾಸು!
ಮುಂಬೈ: ಕಳೆದ 1 ವಾರದಿಂದ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಲಾಭ ಮಾಡುತ್ತಿದ್ದಾರೆ ಹೂಡಿಕೆದಾರರು. ಅದರಲ್ಲೂ ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾದ ಹೊತ್ತಲ್ಲೆ, ಭಾರತದ ಷೇರು ಮಾರುಕಟ್ಟೆ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇಂದು ಒಂದೇ ದಿನ ಸೆನ್ಸೆಕ್ಸ್ ಏರಿಕೆಯಾಗಿದ್ದು ಎಷ್ಟು ಅಂಕ ಗೊತ್ತಾ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಪ್ರಮುಖ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ (BSE Sensex) ಹಾಗೂ ಎನ್ಎಸ್ಇ ನಿಫ್ಟಿ (ನಿಫ್ಟಿ 50 ಎಂದು ಕೂಡ ಕರೆಯಲಾಗುತ್ತದೆ) ದಾಖಲೆ ಬರೆದಿವೆ. ಬಿಎಸ್ಇ ಸೆನ್ಸೆಕ್ಸ್ 803 ಅಂಕ ಏರಿಕೆ ಕಂಡು 64,718 ತಲುಪಿದರೆ, ಎನ್ಎಸ್ಇ ನಿಫ್ಟಿ ಅಥವಾ ನಿಫ್ಟಿ-50 216 ಅಂಕ ಗಳಿಸಿ 19,189 ಅಂಕದಲ್ಲಿ ವಹಿವಾಟು ಮುಗಿಸಿದೆ. ಅಲ್ಲದೆ ಬ್ಯಾಂಕ್ ನಿಫ್ಟಿ ಸುಮಾರು 419 ಅಂಕಗಳ ಏರಿಕೆಯೊಂದಿಗೆ 44,747ರ ಗಡಿಯನ್ನ ದಾಟಿದೆ. ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಕೂಡ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

19,000ದ ಗಡಿ ದಾಟಿತು ನಿಫ್ಟಿ!
ಭಾರತದ ಷೇರು ಮಾರುಕಟ್ಟೆಯಲ್ಲಿ ನಿಫ್ಟಿ 50 ಗ್ರೇಟ್ ವಾಲ್ ಇದ್ದಂತೆ. ಏಕೆಂದರೆ ಷೇರು ಪೇಟೆಯಲ್ಲಿ ಏನೇ ಹೆಚ್ಚು ಅಥವಾ ಕಮ್ಮಿ ಆದರೂ ನಿಫ್ಟಿ 50ಯ ಪರಿಣಾಮವೇ ಹೆಚ್ಚು. ನಿಫ್ಟಿ 50ಯಲ್ಲಿ ಬಲಿಷ್ಠವಾದ ಷೇರು ಸಂಸ್ಥೆಗಳು ನೊಂದಾಯಿಸಿಕೊಂಡಿವೆ. ಈ ಕಾರಣಕ್ಕೆ ಇಂದು ನಿಫ್ಟಿ 50 ಭರ್ತಿ 200ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ಕೊನೆಗೂ 19,000 ಗಡಿ ದಾಟಿ ಮುನ್ನುಗ್ಗಿದೆ. ಇದುವರೆಗೂ ನಿಫ್ಟಿ-50 19,000ದ ಗಡಿ ದಾಟಿರಲಿಲ್ಲ. ಇಂದು ನಿಫ್ಟಿ 50ಯ ಬಹುತೇಕ ಷೇರುಗಳು ಭರ್ಜರಿ ಲಾಭ ಗಳಿಸಿವೆ. ಹಾಗೇ ಸೋಮವಾರ ಕೂಡ ಇದೇ ರೀತಿಯ ಬಹುದೊಡ್ಡ ಬದಲಾವಣೆ ನಿರೀಕ್ಷೆ ಮಾಡಲಾಗುತ್ತಿದೆ.
ಎಚ್‌ಡಿಎಫ್‌ಸಿ ಷೇರುಗಳ ವಿಲೀನ ಪ್ರಕ್ರಿಯೆ
ಇನ್ನು ವಿಲೀನಕ್ಕೆ ಸಿದ್ಧವಾಗಿರುವ ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಕಂಪನಿಗಳ ಷೇರುಗಳಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈ ಪರಿಣಾಮ ಕೂಡ ಇಂದು ಷೇರುಪೇಟೆ ಮೇಲೆ ಆಗಿದ್ದು, ಭಾರತದ ಬಂಡವಾಳ ಮಾರುಕಟ್ಟೆ ಇಂದು ಹೊಸ ಇತಿಹಾಸವನ್ನೇ ಬರೆದಿದೆ. ಕಳೆದ ಜನವರಿ ಅಂತ್ಯದಲ್ಲಿ ಕೆಲವೊಂದು ಆಘಾತ ಎದುರಾಗಿ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿತ್ತು. ಆ ಘಟನೆಯ ಬಳಿಕ ನಿಧಾನವಾಗಿ ಸುಧಾರಿಸುತ್ತಾ ಬಂದಿದೆ ಷೇರು ಪೇಟೆಯ ಪರಿಸ್ಥಿತಿ. ಕಳೆದ 1 ವಾರದಲ್ಲಿ ಸ್ಥಿತಿಗತಿ ಸಂಪೂರ್ಣವಾಗಿ ಬದಲಾಗಿದ್ದು, ಭಾರಿ ಲಾಭ ಗಳಿಸುತ್ತಿದೆ ಭಾರತದ ಬಂಡವಾಳ ಮಾರುಕಟ್ಟೆ.
ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ
1) ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದ ಬಗ್ಗೆ 2022ರ ಏಪ್ರಿಲ್ 4ರಂದು ಘೋಷಣೆ.
2) ವಿಲೀನ ಪ್ರಕ್ರಿಯೆ ಮೂಲಕ ಶೇಕಡಾ 41ರಷ್ಟು ಪಾಲು ಪಡೆಯಲಿದೆ ಎಚ್‌ಡಿಎಫ್‌ಸಿ.
3) ವಿಲೀನದ ನಂತರ ಸಂಯೋಜಿತ ಕಂಪನಿ ಷೇರುಗಳು ಜುಲೈ 17ರಿಂದ ವಹಿವಾಟು ಆರಂಭ ಮಾಡಲಿವೆ.
4) ವಿಲೀನದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್‌ನ 42 ಷೇರುಗಳಿಗೆ ಸಿಗಲಿದೆ ಎಚ್‌ಡಿಎಫ್‌ಸಿಯ 25 ಷೇರುಗಳು.
5) ಜುಲೈ 1ರಿಂದ ಎಚ್‌ಡಿಎಫ್‌ಸಿ ವಿಲೀನ ಜಾರಿಗೆ ಬರುವ ಕುರಿತು ಸಮೂಹದ ಅಧ್ಯಕ್ಷರಿಂದ ಮಾಹಿತಿ.
ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಭಾರತದ ಷೇರು ಮಾರುಕಟ್ಟೆ ಕೂಡ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಹಾಗೇ ಎಚ್‌ಡಿಎಫ್‌ಸಿ ವಿಲೀನ ಜುಲೈ 1ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಈ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್ ಘಟಕ 12 ಕೋಟಿ ಗ್ರಾಹಕರನ್ನು ಹೊಂದಿರಲಿದೆ. ಇದರಿಂದ ಬ್ಯಾಂಕ್‌ನ ಶಾಖೆಯ ನೆಟ್‌ವರ್ಕ್ 8,300ಕ್ಕಿಂತ ಹೆಚ್ಚಿರಲಿದೆ. ಒಟ್ಟು 1,77,000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರಲಿದೆ. ಈ ಮೂಲಕ ಜಗತ್ತಿನ ಅತಿಮೌಲ್ಯಯುತ ಬ್ಯಾಂಕ್‌ಗಳ ಸಾಲಿಗೆ ಎಚ್‌ಡಿಎಫ್‌ಸಿ ಸೇರ್ಪಡೆಯೂ ಆಗಲಿದೆ. ಒಟ್ನಲ್ಲಿ ಭಾರತದ ಷೇರು ಪೇಟೆ ಇದೀಗ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಡುತ್ತಿದೆ.












Click it and Unblock the Notifications