Indian Railway Electrified: ದೇಶದಲ್ಲಿ ಒಟ್ಟು ಎಷ್ಟು ಕಿಮೀ ರೈಲ್ವೆ ಟ್ರ್ಯಾಕ್ ವಿದ್ಯುದೀಕರಣಗೊಂಡಿದೆ?, ಅಂಕಿ-ಸಂಖ್ಯೆ, ವಿವರ
ಬೆಂಗಳೂರು, ಜನವರಿ 09: ಭಾರತೀಯ ರೈಲ್ವೆಯು ತನ್ನ ಸಾರಿಗೆ ಸಂಪರ್ಕ ಜಾಲದಲ್ಲಿ ಸುಸ್ಥಿರ, ತ್ವರಿತ ಮತ್ತು ಶಕ್ತಿ-ಸಮರ್ಥ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಬ್ರಾಡ್ ಗೇಜ್ ಟ್ರ್ಯಾಕ್‌ಗಳು ಬಹುತೇಕ ವಿದ್ಯುದೀಕರಣಗೊಂಡು ಬದಲಾಗುತ್ತಿವೆ. ಹಾಗಾದರೆ ದೇಶದಲ್ಲಿ ಎಷ್ಟು ಕಿಲೋ ಮೀಟರ್ ರೈಲ್ವೆ ಲೈನ್ ವಿದ್ಯುತ್ ಕರಣಗೊಂಡಿದೆ, ಪ್ರಗತಿಯ ಪೂರ್ಣ ಮಾಹಿತಿ ಇಲ್ಲಿದೆ.
ಭಾರತೀಯ ರೈಲ್ವೆ ಇಲಾಖೆಯು ತನ್ನ ಬದ್ಧತೆಯ ಭಾಗವಾಗಿ ಬ್ರಾಡ್ ಗೇಜ್ ಟ್ರ್ಯಾಕ್‌ಗಳನ್ನು ಸಂಪೂರ್ಣ ವಿದ್ಯುದೀಕರಣ ಮಾಡುವಲ್ಲಿ ನಿರತವಾಗಿದೆ. 2023ರ ಒಂದು ವರ್ಷದಲ್ಲಿ ದೇಶದಲ್ಲಿ 6,577 ಕಿಲೋಮೀಟರ್ ರೈಲ್ವೆ ಮಾರ್ಗವು ಯಶಸ್ವಿಯಾಗಿ ವಿದ್ಯುದೀಕರಣಗೊಂಡಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ರೈಲ್ವೆ ಇಲಾಖೆಯ ಶೇ. 93.83 ಸಾಧನೆ
ಕಳೆದ ವರ್ಷದ ಕೊನೆಯ ತಿಂಗಳು ಡಿಸೆಂಬರ್ ವೇಳೆಗೆ ಒಟ್ಟು ವಿದ್ಯುದೀಕರಣವು ಈವರೆಗೆ ಒಟ್ಟು 61,508 ಕಿಲೋ ಮೀಟರ್ ತಲುಪಿದೆ. ಅಂದರೆ ಈ ಮೂಲಕ ಭಾರತೀಯ ರೈಲ್ವೇ ಒಟ್ಟು ಬ್ರಾಡ್ ಗೇಜ್ ಮಾರ್ಗ ಜಾಲದ (65,556 ರೈಲ್ವೆ ಕಿಲೋ ಮೀಟರ್) ಪೈಕಿ ಶೇಕಡಾ 93.83ರಷ್ಟು ವಿದ್ಯುದೀಕರಣಗೊಂಡಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ 2014 ರ ವರೆಗೆ ಬ್ರಾಡ್ ಗೇಜ್ ನೆಟ್‌ವರ್ಕ್‌ನ 21,801 ಕಿಮೀ ಮಾತ್ರ ವಿದ್ಯುದ್ದೀಕರಿಸಲ್ಪಟ್ಟಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.
ರೈಲ್ವೆ ವಿದ್ಯುದ್ದೀಕರಣದ ಪ್ರಯೋಜನಗಳೇನು?
ರೈಲ್ವೆ ಟ್ರ್ಯಾಕ್ ವಿದ್ಯುದೀಕರಣದಿಂದ ರೈಲು ಸೇವಾ ಕಾರ್ಯಾಚರಣೆಯ ವೆಚ್ಚದಲ್ಲಿ ಇಳಿಕೆ ಆಗುತ್ತದೆ. ವಿದ್ಯುತ್ ಸಹಾಯದಿಂದ ರೈಲು ಸಂಚರಿಸಿದರೆ ಯಾವುದೇ ಮಾಲಿನ್ಯ ಉಂಟಾಗುವುದಿಲ್ಲ. ಇದು ಸಂಪೂರ್ಣ ಪರಿಸರ ಸ್ನೇಹಿ ಸಾರಿಗೆ ಆಗಿದೆ ಎಂದು ರೈಲ್ವೆ ಸಚಿವಾಲಯವು ಪ್ರತಿಪಾದಿಸಿದೆ.
ಇದರೊಂದಿಗೆ ಎಲೆಕ್ಟ್ರಿಫಿಕೇಶನ್ ಎಲೆಕ್ಟ್ರಿಕ್ ರೈಲು ಇಂಜಿನ್‌ಗಳ ಉನ್ನತ ಕಾರ್ಯಾಚರಣೆಯ ಸಾಮರ್ಥ್ಯ ಹೊಂದಿರುತ್ತವೆ. ಈ ಕಾರಣದಿಂದಾಗಿ ಭಾರವಾದ ಸರಕು ಮತ್ತು ದೀರ್ಘ ಪ್ರಯಾಣಿಕ ರೈಲುಗಳನ್ನು ಚಲಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವಿದ್ಯುದ್ದೀಕರಣವು ಆಮದು ಮಾಡಿಕೊಂಡ ಕಚ್ಚಾ ತೈಲದ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ನೀಡಲು ಸಹಾಯವಾಗುತ್ತದೆ.

ಹಸಿರು ಹಳಿಯಲ್ಲಿ ಭಾರತೀಯ ರೈಲ್ವೆ
ಭಾರತೀಯ ರೈಲ್ವೆ ಸಚಿವಾಲಯವು ಮಹತ್ತರ ಉದ್ದೇಶದೊಂದಿಗೆ ಇದೇ ವರ್ಷ ಜೂನ್ 14 ರಂದು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್/ಇಂಡಿಯಾ (ಯುಎಸ್‌ಎಐಡಿ/ಇಂಡಿಯಾ) ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಇತ್ತೀಚೆಗೆ ತಿಳಿಸಿದೆ.
ಈ ಪಾಲುದಾರಿಕೆ ಮೂಲಕ ಭಾರತೀಯ ರೈಲ್ವೆಯ ಉದ್ದೇಶ ಸಾಕಾರಗೊಳಿಸುವಲ್ಲಿ ಸಹಾಯವಾಗುವುದರ ಜೊತೆಗೆ 2030 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆ ಸಾಧಿಸುವ ಮಹತ್ವಾಕಾಂಕ್ಷೆ ಗುರಿ ಸಾಧಿಸುವುದಾಗಿದೆ.
ಕರ್ನಾಟಕದ ವಿದ್ಯುದೀಕರಣ ಮಾಹಿತಿ
ಇನ್ನೂ ಕರ್ನಾಟಕದ ಮಟ್ಟಿಗೆ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು ಈವರೆಗೆ ಶೇಕಡಾ 85ರಷ್ಟು ರೈಲ್ವೆ ಟ್ರ್ಯಾಕ್‌ಗಳನ್ನು ವಿದ್ಯುದೀಕರಿಸಲಾಗಿದೆ. ಕೇವಲ ಶೇಕಡಾ 15ರಷ್ಟು ವಿದ್ಯುದೀಕರಣ ಮಾಡುವುದು ಬಾಕಿ ಇದೆ. ಈ ಮೂಲಕ ದೇಶದಲ್ಲಿ ರೈಲ್ವೆ ಟ್ರ್ಯಾಕ್‌ಗಳಲ್ಲಿ ಒಂದಷ್ಟು ರಾಜ್ಯಗಳು ಶೇಕಡಾ 100ರಷ್ಟು ಪ್ರಗತಿ ಸಾಧಿಸಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ಕರ್ನಾಟಕದ ಎಲ್ಲ ರೈಲ್ವೆ ಲೈನ್‌ಗಳು ಸಂಪೂರ್ಣ ವಿದ್ಯುದೀಕರಣಗೊಳ್ಳಲಿವೆ ಎಂದು SWR ತಿಳಿಸಿದೆ.












Click it and Unblock the Notifications