ಪಾಕಿಸ್ತಾನದ ಕಂಟೆಂಟ್‌ಗಳನ್ನು ತೆಗೆದುಹಾಕಿ: ಒಟಿಟಿ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರದ ಆದೇಶ
ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ತಾರಕಕ್ಕೇರಿದೆ. ಕಳೆದ ತಿಂಗಳು ಪಾಕ್ ಮೂಲದ ಉಗ್ರರು ಕಾಶ್ಮೀರದ ಪೆಹಲ್‌ಗಾಮ್‌ನಲ್ಲಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಭಾರತದ 25 ಪ್ರವಾಸಿಗಳು ಹತರಾಗಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಭಾರತ ಆಪರೇಷನ್ ಸಿಂಧೂರ ಕೈಗೊಂಡಿದೆ. ಈ ಕಾರ್ಯಾಚರಣೆಯಲ್ಲಿ 70 ರಿಂದ 100 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
ಭಾರತದ ದಾಳಿಗೆ ಪ್ರತಿಯಾಗಿ ಯುದ್ಧ ನಿಯಮಗಳನ್ನು ಉಲ್ಲಂಘಿಸಿ ಪಾಕ್ ದಾಳಿ ನಡೆಸಿದೆ ಎಂದು ಭಾರತೀಯ ಸೇನಾ ವಕ್ತಾರರು ಹೇಳಿದ್ದಾರೆ. ಸೇನಾ ವಕ್ತಾರರ ಪ್ರಕಾರ, ಭಾರತದ ಗಡಿಯಲ್ಲಿ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದ್ದು, ಹದಿನೈದು ಭಾರತೀಯರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಸಾವಿಗೀಡಾದವರಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಪಾಕ್ ನಡೆಸಿದ ಅಪ್ರಚೋದಿತ ದಾಳಿಗೆ ಪ್ರತಿಯಾಗಿ ಭಾರತ ಸೇನೆ ಪಾಕಿಸ್ತಾನದ ಒಳಗೆ ನುಗ್ಗಿ ದಾಳಿ ನಡೆಸಿದೆ. ಲಾಹೋರ, ರಾವಲಪಿಂಡಿ, ಕರಾಚಿ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಭಾರತ ಡ್ರೋನ್ ದಾಳಿ ನಡೆಸಿದೆ. ಲಾಹೋರದ ಸೇನಾ ನೆಲೆಯನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿದೆ. ಸೇನಾ ನೆಲೆಯು ದ್ವಂಸಗೊಂಡಿದೆ ಎಂದು ಭಾರತ ಸೇನೆ ಹೇಳಿದೆ.
ಭಾರತದ ಹದಿನೈದು ನಗರಗಳ ಮೇಲೆಯೂ ಕ್ಷಿಪಣಿ ದಾಳಿ ಮಾಡಲು ಪಾಕಿಸ್ತಾನ ಯತ್ನ ನಡೆಸಿದೆ. ಆದರೆ, ಈ ದಾಳಿಗಳನ್ನು ವಿಫಲಗೊಳಿಸುವಲ್ಲಿ ನಮ್ಮ ಸೇನೆ ಯಶಸ್ವಿಯಾಗಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ. ಅಮೃತಸರ (ಪಂಜಾಬ್), ಕಪುರ್ತಲಾ (ಪಂಜಾಬ್), ಜಲಂಧರ್ (ಪಂಜಾಬ್), ಲುಧಿಯಾನ (ಪಂಜಾಬ್), ಆದಂಪುರ (ಪಂಜಾಬ್), ಭಟಿಂಡಾ (ಪಂಜಾಬ್), ಅವಂತಿಪುರ (ಜಮ್ಮು ಮತ್ತು ಕಾಶ್ಮೀರ) ಶ್ರೀನಗರ ( ಜಮ್ಮು ಮತ್ತು ಕಾಶ್ಮೀರ), ಜಮ್ಮು ( ಜಮ್ಮು ಮತ್ತು ಕಾಶ್ಮೀರ), ಪಠಾಣ್‌ಕೋಟ್ ( ಪಂಜಾಬ್), ಚಂಡೀಗಢ ( ಕೇಂದ್ರಾಡಳಿತ ಪ್ರದೇಶ ), ನಲ್ರಾ (ರಾಜಸ್ಥಾನ), ಫಲೋಡಿ (ರಾಜಸ್ಥಾನ), ಉತ್ತರಲೈ (ರಾಜಸ್ಥಾನ), ಭುಜ್ ( ಗುಜರಾತ್ ) ಗಳಲ್ಲಿ ದಾಳಿ ನಡೆಸಲು ಪಾಕಿಸ್ತಾನ ಸೇನೆ ಯತ್ನಿಸಿದೆ ಎಂದು ತಿಳಿದುಬಂದಿದೆ.
ಒಟಿಟಿ ಹಾಗೂ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರದ ಸೂಚನೆ
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಒಟಿಟಿಗಳಿಗೆ ಆದೇಶ ನೀಡಿದೆ. ಪಾಕಿಸ್ತಾನಕ್ಕೆ ಸಂಬಂಧಿಸಿದ, ಪಾಕ್ ಮೂಲದ ಯಾವುದೇ ಬಗೆಯ ಕಂಟೆಂಟ್ ಅನ್ನು ಪ್ಲಾಟ್‌ಪಾರ್ಮ್‌ನಿಂದ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಪಾಕಿಸ್ತಾನದಕ್ಕೆ ಸಂಬಂಧಿಸಿದ ವೆಬ್‌ಸಿರೀಸ್‌ಗಳು, ಸಿನಿಮಾಗಳು, ಹಾಡುಗಳು ಮತ್ತು ಪಾಡ್‌ಕ್ಯಾಸ್ಟ್‌ಗಳನ್ನು ಒಟಿಟಿಯಿಂದ ಡಿಲೀಟ್ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
'ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಒಟಿಟಿಗಳು ಹಾಗೂ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನಕ್ಕೆ ಸಂಬಂಧಿಸಿದ ವೆಬ್ ಸರಣಿಗಳು, ಸಿನಿಮಾಗಳು, ಹಾಡುಗಳು ಹಾಗೂ ಪಾಡ್‌ಕ್ಯಾಸ್ಟ್‌ಗಳಂತಹ ಕಂಟೆಂಟ್‌ಗಳನ್ನು ತೆಗೆದುಹಾಕಬೇಕು. ಇದು ತಕ್ಷಣ ಜಾರಿಗೆ ಬರಬೇಕು' ಎಂದು ವಾರ್ತಾ ಮತ್ತು ಪ್ರಸಾರ ಇಲಾಖೆ ಸಂದೇಶ ರವಾನಿಸಿದೆ.












Click it and Unblock the Notifications