Rain Update: ಮಾಸಿದ ಮಂಜು, ಸುಡುವ ಬಿಸಿಲನ ನಡುವೆ ಮಳೆಯ ಗುಂಗು: 15 ರಾಜ್ಯಗಳಲ್ಲಿ ಧರೆಗಿಳಿಯಲಿದ್ದಾನೆ ವರುಣ
ದೇಶದಲ್ಲಿ ಬೇಸಿಗೆಯ ಬಿಸಿಲು ನೆತ್ತಿ ಸುಡಲು ಆರಂಭಿಸಿದೆ. ಚಳಿಗಾಲದ ಮಂಜು ನಿಧಾನವಾಗಿ ಕಣ್ಮರೆಯಾಗುತ್ತಿದೆ. ಬೆಳಗ್ಗೆ 10 ಗಂಟೆಯಾದರೂ ಕಾಣದೆ ಮರೆಯಾಗಿರುತ್ತಿದ್ದ ಸೂರ್ಯ 8ರ ನಂತರ ಕಣ್ಣು ಕುಕ್ಕುತ್ತಿದ್ದಾನೆ. ಈ ನಡುವೆ ಹವಾಮಾನ ಇಲಾಖೆ ಹಲವೆಡೆ ಮಳೆಯಾಗುವ ಸೂಚನೆಯನ್ನು ನೀಡಿದೆ.
ಹೌದು... ಐಎಂಡಿ ಮಾಹಿತಿ ಪ್ರಕಾರ, ದೇಶದ 15 ರಾಜ್ಯಗಳಲ್ಲಿ ವರುಣ ಧರೆಗಿಳಿಯಲಿದ್ದಾನೆ. ಗಾಳಿಯ ಕಳಪೆ ಗುಣಮಟ್ಟದಿಂದ ಪ್ರತೀ ವರ್ಷ ಬಳಲುವ ರಾಷ್ಟ್ರ ರಾಜಧಾನಿ ದೆಹಲಿಗೆ ಇಂದು (ಫೆಬ್ರವರಿ 3) ಮತ್ತು ನಾಳೆ (ಫೆಬ್ರವರಿ 4) ಮಳೆರಾಯ ತಂಪೆರೆಯಲಿದ್ದಾನೆ. ಹೀಗಾಗಿ ಇಂದು ಮತ್ತು ನಾಳೆ ದೆಹಲಿಯಲ್ಲಿ ತಂಪಾದ ವಾತಾವರಣವನ್ನು ಜನ ಅನುಭವಿಸಲಿದ್ದಾರೆ. ಇದರೊಂದಿಗೆ ಇಂದು ಬಿಹಾರ, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶ ಹಾಗೂ ಪಂಜಾಬ್‌ನಲ್ಲೂ ಐಎಂಡಿ ಮಳೆ ಎಚ್ಚರಿಕೆಯನ್ನು ನೀಡಿದೆ.

ಹವಾಮಾನ ಇಲಾಖೆಯ ವರದಿ ಪ್ರಕಾರ, ಇಂದು ಬಿಹಾರ, ಹರಿಯಾಣ, ರಾಜಸ್ಥಾನ, ಚಂಡೀಗಢ, ಉತ್ತರಪ್ರದೇಶ ಹಾಗೂ ಪಂಜಾಬ್‌ನ ಹಲವೆಡೆ ಇಂದು ದಟ್ಟವಾದ ಮಂಜು ಆವರಿಸಿರಲಿದ್ದು, ಮಳೆಯಾಗಲಿದೆ. ಜೊತೆಗೆ ಫೆಬ್ರವರಿ 5ರವರೆಗೆ ಉತ್ತರಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿ ಹಗುರದಿಂದ ಸಾಧಾರಣ ಮಳೆಯೊಂದಿಗೆ ಹಿಮಪಾತವಾಗಲಿದೆ.
ದೇಶದ ಹಲವೆಡೆ ಹವಾಮಾನ ವೈಪರೀತ್ಯದಿಂದಾಗಿ ಇಂದು ಜೋರಾದ ಗಾಳಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಯನ್ನು ಹೆಚ್ಚಿಸಲಿದೆ. ಇನ್ನೂ ಮಳೆಗೂ ಮುನ್ನ ತಾಪಮಾನ ಹೆಚ್ಚಾಗಲಿದ್ದು ಬಳಿಕ ಮಳೆರಾಯ ಬಿಸಿಲಿನ ಬಿಸಿಯಿಂದ ಕೊಂಚ್ ರಿಲೀಫ್ ನೀಡಲಿದ್ದಾನೆ. ದೆಹಲಿಯಲ್ಲಿ ಮಳೆ ಮುಂದುವರೆಯಲಿದೆ.

ಇನ್ನೂ ರಾಜಸ್ಥಾನ ಮತ್ತು ಈಶಾನ್ಯ ಭಾರತದ ಪಶ್ಚಿಮ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳಲಿದೆ. ಜೊತೆಗೆ ಅರುಣಾಚಲ ಪ್ರದೇಶದಲ್ಲಿ ಇಂದು ಹಗುರ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಹವಾಮಾನ ಮಾಹಿತಿ ನೀಡಿದೆ.
ಪಶ್ಚಿಮ ಹಿಮಾಲಯದಲ್ಲಿ ಮಳೆ ಮತ್ತು ಹಿಮಪಾತ ಫೆಬ್ರವರಿ 3 ರಿಂದ ಮತ್ತೊಮ್ಮೆ ಪ್ರಾರಂಭವಾಗುವ ಸಾಧ್ಯತೆ ಇದೆ. ಇದರೊಂದಿಗೆ ತಮಿಳುನಾಡು, ದಕ್ಷಿಣ ಛತ್ತೀಸ್‌ಗಢ, ಕರಾವಳಿ ಆಂಧ್ರಪ್ರದೇಶದ ಒಂದೆರೆಡು ಸ್ಥಳಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆ ಇದೆ. ಜೊತೆಗೆ ಇಂದು (ಫೆಬ್ರವರಿ 3) ದೆಹಲಿ, ಪಂಜಾಬ್, ರಾಜಸ್ಥಾನ, ಪಶ್ಚಿಮ ಉತ್ತರಪ್ರದೇಶ ಹಾಗೂ ರಾಜಸ್ಥಾನದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಫೆಬ್ರವರಿ 4 ಮತ್ತು 5 ರಂದು ಉತ್ತರ ಮಧ್ಯಪ್ರದೇಶದಲ್ಲಿ ಲಘು ಮಳೆಯಾದರೆ ಫೆಬ್ರವರಿ 4 ರಂದು ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಮಳೆಯ ತೀವ್ರತೆ ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿದೆ. ಸೋಮವಾರದಿಂದ ಭಾರತದಲ್ಲಿ ಮಳೆಯ ಚಟುವಟಿಕೆಗಳು ಕಡಿಮೆಯಾಗುತ್ತವೆ.












Click it and Unblock the Notifications