India Weather: ಮುಂದಿನ ನಾಲ್ಕೈದು ದಿನ ದೇಶದ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ
India Weather: ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆ ತಗ್ಗಿದ್ದು, ಇನ್ನೂ ಕೆಲವು ಭಾಗಗಳಲ್ಲಿ ಮಾತ್ರ ಅಬ್ಬರದ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ನಾಲ್ಕೈದು ದಿನಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಎಂದು ಇಲ್ಲಿ ತಿಳಿಯಿರಿ.
ಇನ್ನು ನವದೆಹಲಿಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಹಗುರವಾದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ನವದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ.

ಇನ್ನು ಹವಾಮಾನ ಇಲಾಖೆ ಪ್ರಕಾರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮುಂದಿನ 4-5 ದಿನಗಳಲ್ಲಿ ವ್ಯಾಪಕವಾದ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಲಿದೆ. ಅಲ್ಲದೆ ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಚಂಡೀಗಢ, ನವದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಹಾಗೆಯೇ ಕೇರಳ, ತಮಿಳುನಾಡು, ಕರ್ನಾಟಕದ ದಕ್ಷಿಣ ಒಳನಾಡಿನ ಪ್ರಮುಖ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ರಾಜಸ್ಥಾನದಲ್ಲಿ ಸೋಮವಾರ ಮತ್ತು ಮಂಗಳವಾರ ಭಾರೀ ಮಳೆಯಾಗಿದ್ದು, ಜೈಪುರದ ಹಲವೆಡೆ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಹಾಗೆಯೇ ಈ ಭಾಗದಲ್ಲಿ ಮುಂದಿನ ಎರಡ್ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಸ್ಥಳೀಯ ಹವಾಮಾನ ಸಂಸ್ಥೆಗಳು ಮುನ್ಸೂಚನೆ ನೀಡಿವೆ.
ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಭಾರೀ ಮಳೆಯಿಂದ ಅವಾಂತರಗಳೆ ಸೃಷ್ಟಿಯಾಗಿವೆ. ಇನ್ನು ಮಾರ್ಕಂಡೆ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮತ್ತೊಂದೆಡೆ ಮುಂದಿನ 5 ದಿನ ಭಾರೀ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ ಚಂಬಾ, ಕಂಗ್ರಾ, ಮಂಡಿ, ಸೋಲನ್, ಸಿರ್ಮೌರ್, ಶಿಮ್ಲಾ, ಉನಾ, ಬಿಲಾಸ್‌ಪುರ್ ಮತ್ತು ಹಮೀರ್‌ಪುರ್ ಭಾಗಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಇಂದು ಒಡಿಶಾದ, ಮಯೂರ್‌ಭಂಜ್, ಕಿಯೋಂಜಾರ್ ಮತ್ತು ಸುಂದರ್‌ಗಢದಂತಹ ಜಿಲ್ಲೆಗಳಿಗೂ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೆಯೇ ಹರಿಯಾಣ ಮತ್ತು ಬೆಂಗಳೂರು ಸೇರಿ ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ನೀರು ಮತ್ತು ವಿದ್ಯುತ್ ಕಡಿತವಾದ ಘಟನೆಗಳು ನಡೆದವು.












Click it and Unblock the Notifications