ಇದೇ ಮಾಸಾಂತ್ಯಕ್ಕೆ ಇಸ್ರೋದಿಂದ ಹೊಸ ಉಪಗ್ರಹ ಉಡಾವಣೆ
ಇದೇ ಮಾಸಾಂತ್ಯಕ್ಕೆ ಹೊಸತೊಂದು ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು. ಐ ಇನ್ ದ ಸ್ಕೈ ಬಿರುದಾಂಕಿತ ಉಪಗ್ರಹ ಉಡಾವಣೆ. ಕಾರ್ಟೋ ಸ್ಯಾಟ್ ಸರಣಿಯ 4ನೇ ಉಪಗ್ರಹವಿದು.
ನವದೆಹಲಿ, ಜೂನ್ 8: ಇತ್ತೀಚೆಗಷ್ಟೇ, ಭಾರೀ ತೂಕದ 'ಬಾಹುಬಲಿ' ಜಿಎಸ್ ಎಲ್ ವಿ- ಎಂಕೆ 3 ರಾಕೆಟ್ ಅನ್ನು ಉಡಾಯಿಸಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ), ಇದೇ ಮಾಸಾಂತ್ಯಕ್ಕೆ ಮತ್ತೊಂದು ವಿಶೇಷ ಉಪಗ್ರಹವನ್ನು ಉಡಾಯಿಸುವ ಯೋಜನೆ ಹಮ್ಮಿಕೊಂಡಿದೆ. ಈ ಉಪಗ್ರಹಕ್ಕೆ 'eye in the sky' ಎಂದೂ ಇದನ್ನು ಕರೆಯಲಾಗುತ್ತದೆ.
ಕಾರ್ಟೋ ಸ್ಯಾಟ್ ಸರಣಿಯಲ್ಲಿ ಈವರೆಗೆ ಉಡಾವಣೆಗೊಂಡಿರುವ ಉಪಗ್ರಹಗಳ ಪೈಕಿ 4ನೇ ಉಪಗ್ರಹ ಇದಾಗಿದ್ದು, ಪಿಎಸ್ ಎಲ್ ವಿ - ಸಿ38 ರಾಕೆಟ್ ನ ಮೂಲಕ ಆಂಧ್ರಪ್ರದೇಶ ಶ್ರೀ ಹರಿಕೋಟಾದಲ್ಲಿರುವ ರಾಕೆಟ್ ಉಡಾವಣಾ ಕೇಂದ್ರದಿಂದ ಹಾರಿಬಿಡಲಾಗುತ್ತಿದೆ.

ಈ ಉಪಗ್ರಹವು ಸೂರ್ಯ ಮತ್ತು ಚಂದ್ರರ ಪಥಕ್ಕೆ ಹೋಗಿ ಸೇರಿಕೊಳ್ಳುವುದರ ಜತೆಗೆ ಪ್ರತಿ 126 ದಿನಗಳಲ್ಲಿ ಭೂಮಿಯನ್ನು 1867 ಬಾರಿ ಪ್ರದಕ್ಷಿಣೆ ಹಾಕಿ ಬರುತ್ತದೆ.
ಭಾರತದಲ್ಲಿನ ನೀರಿನ ಹಂಚಿಕೆ, ಭೂಪಟ ತಯಾರಿ, ಭಾರತದ ಗಡಿಗಳ ಭೂ ಪ್ರದೇಶದಲ್ಲಿ ಏನಾದರೂ, ಬದಲಾವಣೆಗಳಾದರೆ ಅದನ್ನು ತಕ್ಷಣಕ್ಕೆ ಪತ್ತೆ ಹಚ್ಚುವುದು, ಹಲವಾರು ಭೂ ಭಾಗಗಳ ಬಗ್ಗೆ ತ್ವರಿತ ಮಾಹಿತಿ - ಇವೇ ಮೊದಲಾದ ಉದ್ದೇಶಗಳಿಗಾಗಿ ಈ ಉಪಗ್ರಹವನ್ನು ಹಾರಿಬಿಡಲಾಗುತ್ತಿದೆ.












Click it and Unblock the Notifications