ಭಾರತದ ಸೇನೆಯ ಬತ್ತಳಿಕೆ ಸೇರಿದ ಖಂಡಾಂತರ ಕ್ಷಿಪಣಿ ಪೃಥ್ವಿ-2
ಚಂಡೀಪುರ್, ಜೂನ್ 2: ಪೃಥ್ವಿ 2 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಒಡಿಶಾದ ಚಂಡೀಪುರ್ ನಲ್ಲಿರುವ ಉಡಾವಣಾ ಕೇಂದ್ರದಿಂದ ಇಂದು ಮುಂಜಾನೆ 10.40 ಗಂಟೆಗೆ ಭಾರತೀಯ ಸೇನೆ ಇದರ ಉಡಾವಣೆ ನಡೆಸಿದ್ದು ಯಶಸ್ವಿಯಾಗಿದೆ. ಇದೀಗ ಸೇನೆಯ 333-ಮಿಸೈಲ್ ರೆಜಿಮೆಂಟ್ ಗೆ ಸೇರ್ಪಡೆಯಾಗಲಿದೆ.
1,000 ಕೆಜಿ ತೂಕದ ಸಿಡಿತಲೆಗಳನ್ನು ಹೊತ್ತುಯ್ಯುವ ಸಾಮರ್ಥ್ಯವನ್ನು ಈ ಖಂಡಾಂತರ ಕ್ಷಿಪಣಿ ಹೊಂದಿದೆ. ಒಂದೊಮ್ಮೆ ಸಿಡಿತಲೆಯ ತೂಕವನ್ನು ಅರ್ಧದಷ್ಟು ಕಡಿಮೆಗೊಳಿಸಿದಲ್ಲಿ ಮತ್ತಷ್ಟು ದೂರವನ್ನು ಈ ಕ್ಷಿಪಣಿ ಕ್ರಮಿಸಲಿದೆ.

ಈ ಕ್ಷಿಪಣಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು ನಿರ್ಧಿಷ್ಟ ಗುರಿಯನ್ನು ಕರಾರುವಕ್ಕಾಗಿ ತಲುಪುವ ಸಾಮರ್ಥ್ಯ ಇದಕ್ಕಿದೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್'ಡಿಒ) ವಿಜ್ಞಾನಿಗಳ ಸತತ ಪ್ರಯತ್ನ ಮತ್ತು ಶ್ರಮದಿಂದ ಇದೀಗ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ದೇಶದ ಕ್ಷಿಪಣಿಗಳ ಪಟ್ಟಿಗೆ ಮತ್ತಷ್ಟು ಬಲ ಬಂದಿದೆ.
ಇನ್ನು ಪೃಥ್ವಿ-2ನ್ನು ನವೆಂಬರ್ 21, 2016ರಲ್ಲಿ ಮೊದಲ ಬಾರಿಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ 9 ಮೀಟರ್ ಉದ್ದ, ದ್ರವ ರೂಪದ ಇಂಧನದಲ್ಲಿ ಕಾರ್ಯಾಚರಿಸುವ ಪೃಥ್ವಿ-2ನ್ನು ಡಿಆರ್'ಡಿಒ ತನ್ನ ಇಂಟೆಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್ಮೆಂಟ್ ಪ್ರೋಗ್ರಾಮ್ ಅಡಿಯಲ್ಲಿ ಅಭಿವೃದ್ಧಿ ಪಡಿಸಿ ಯಶಸ್ವಿಯಾಗಿ ಪ್ರಯೋಗಕ್ಕೆ ಒಳಪಡಿಸಿದೆ.
ಈ ಯಶಸ್ಸಿನೊಂದಿಗೆ ಖಂಡಾಂತರ ಕ್ಷಿಪಣಿಗಳನ್ನು ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಭಾರತ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.












Click it and Unblock the Notifications