ನಾಲ್ಕನೇ ಬಾರಿ ಲಕ್ಷದ ಗಡಿ ದಾಟಿದ ಕೊರೊನಾ; 1,31,968 ಹೊಸ ಪ್ರಕರಣ ದಾಖಲು
ನವದೆಹಲಿ, ಏಪ್ರಿಲ್ 9: ನಿರಂತರ ಮೂರನೇ ದಿನ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 1,31,968 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಗುರುವಾರ 61,899 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ 1,19,13,292 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 780 ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಸೋಂಕಿನಿಂದ 1,67,642 ಮರಣ ಪ್ರಕರಣ ದಾಖಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಬುಧವಾರ 1,31,968 ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,30,60,542ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ 9,79,608 ಸಕ್ರಿಯ ಪ್ರಕರಣಗಳಿವೆ.

ಜನವರಿ 16ರಿಂದ ಇದುವರೆಗೂ 9,43,34,262 ಜನರಿಗೆ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ವೇಗ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು 2 ರಿದಂ 3 ವಾರ ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಗುರುವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿರುವ ಅವರು, ಅತಿಹೆಚ್ಚು ಸೋಂಕು ಹರಡುವ ಅಪಾಯವಿರುವ ಪ್ರದೇಶಗಳನ್ನು ಮೈಕ್ರೋ ಕಂಟೇನ್ಮೆಂಟ್ ಝೋನ್ ಆಗಿ ಮಾಡುವುದು. ಈ ಪ್ರದೇಶಗಳಲ್ಲಿ ಅತಿಹೆಚ್ಚು ನಿಗಾ ವಹಿಸಬೇಕು. ಸೋಂಕಿನ ತಪಾಸಣೆಯನ್ನು ಮಾಡುವುದರ ಜೊತೆಗೆ ಕೊವಿಡ್-19 ಪಾಸಿಟಿವ್ ಪ್ರಮಾಣವನ್ನು ಶೇ.5ರಷ್ಟು ಕಡಿಮೆ ಮಾಡಬೇಕಿದೆ ಎಂದರು.
ಕೊರೊನಾವೈರಸ್ ಲಸಿಕೆ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಬೇಕಿದೆ. ಏಪ್ರಿಲ್ 11 ರಿಂದ ಏಪ್ರಿಲ್ 14ರವರೆಗೂ ಲಸಿಕೆ ಉತ್ಸವವನ್ನು ನಡೆಸಲಾಗುತ್ತದೆ. ನಾಲ್ಕು ದಿನಗಳಲ್ಲಿ ಅತಿಹೆಚ್ಚು ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ನೀಡಬೇಕಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಲಸಿಕೆ ಪಡೆದುಕೊಳ್ಳಬೇಕು. ಆ ಮೂಲಕ ಲಸಿಕೆಯು ವ್ಯರ್ಥವಾಗುವುದನ್ನು ತಡೆಯೋಣ ಎಂದು ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications