India Rain Alert: 3ನೇ ಹಂತದ ಚುನಾವಣೆಯ ಈ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ: ಜನರಿಗೆ ರಿಲೀಫ್
ನವದೆಹಲಿ ಮೇ 07: ಸಾರ್ವತ್ರಿಕ ಲೋಕಸಭಾ ಚುನಾವಣೆ ಮೂರನೇ ಹಂತದ ಮತದಾನ ದೇಶದ 93 ಕ್ಷೇತ್ರಗಳಲ್ಲಿ ನಡೆಯಲಿದೆ. ಈ ಮಧ್ಯೆ ದೇಶದ ಈಶಾನ್ಯ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ ಬರುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಬಿಸಲಿ ಬೇಗೆಗೆ ಹೇಗೆ ಮತದಾನ ಮಾಡಲು ತೆರಳಬೇಕು ಎಂದುಕೊಂಡಿದ್ದ ಈ ರಾಜ್ಯಗಳ ಜನರಿಗೆ ಮಳೆ ತೆಂಪೆರೆಯಲಿದೆ.
ಪಶ್ಚಿಮ ಬಂಗಾಳದ ಒಣಹವೆ ಮುಂದುವರೆದಿದ್ದು 40 ಡಿಗ್ರಿ ಸೆಲ್ಸಿಯಸ್ ಅಧಿಕ ತಾಪಮಾನ ದಾಖಲಾಗಿದೆ. ಒಂದೆರಡು ಜಿಲ್ಲೆಗಳಲ್ಲಿ ಸೋಮವಾರ ಹಗುರ ಮಳೆ ಆಗಿದ್ದು, ಬಿಟ್ಟರೆ ಜೋರು ಮಳೆ ಆಗಿಲ್ಲ. ಮುಂದಿನ ನಾಲ್ಕರಿಂದ ಐದು ದಿನಗಳ ಕಾಲ ಮೂರನೇ ಹಂತದ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಭಾರೀ ಮಳೆ ಬರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಮೇ 10 ರವರೆಗೆ ಬಿರುಗಾಳಿ ಸಹಿತ ಮಳೆ
ಹವಾಮಾನ ನೀಡಿದ ಈ ಮುನ್ಸೂಚನೆಯಿಂದ ರಾಜ್ಯದಲ್ಲಿ ಶಾಖದ ಅಲೆ ಇಳಿಕೆಯ ನಿರೀಕ್ಷೆಗಳು ಹೆಚ್ಚಾಗಿವೆ. ಮೇ 10 ರವರೆಗೆ ಪಶ್ಚಿಮ ಬಂಗಾಳ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಬಿರುಗಾಳಿ ಮತ್ತು ಗುಡುಗು-ಮಿಂಚು ಸಹಿತವಾಗಿ ಮಳೆ ಆರ್ಭಟ ಕಂಡು ಬರಲಿದೆ.
ಇನ್ನೂ ಮತದಾನ ದಿನ ಅಸ್ಸಾಂ ನಲ್ಲಿ ಜೋರು ಮಳೆ ಬಾರದ ಲಘು ಮಳೆ ಬರಬಹದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವೈಪರಿತ್ಯದಿಂದ ಮಳೆ
ಹೀಗೆ ದಿಢೀರ್ ಮಳೆ ಬರಲು ಚಂಡಮಾರುತ ಪರಿಚಲನೆ ಕಾರಣ ಎನ್ನಲಾಗಿದೆ. ಬಂಗಾಳಕೊಲ್ಲಿ ಸಮುದ್ರದ ಆಗ್ನೇಯ ಭಾಗದಲ್ಲಿ ತೇವಾಂಶ ಭರತಿ ಜೋರು ಗಾಳಿಯು ಪೂರ್ವ ದಿಕ್ಕಿನತ್ತ ಸಾಗಿದೆ. ಇದರಿಂದ ಮುಂದಿನ ಒಂದು ವಾರ ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಅಸ್ಸಾಂ ಇನ್ನಿತರ ಈಶಾನ್ಯ ರಾಜ್ಯಗಳಿಗೆ ಮಳೆ ಎಚ್ಚರಿಕೆ ಕೊಡಲು ಕಾರಣವಾಗಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ಬಿಸಿಲಿನ ಮಧ್ಯೆ ಒಡಿಶಾದಲ್ಲಿ ಮಳೆ ಸಂಭವ
ಅಸ್ಸಾಂನ ದಿಬ್ರುಗಢ್‌ನ ವಿವಿಧ ಕಡೆಗಳಲ್ಲಿ ಭಾನುವಾರ ಭಾರೀ ಮಳೆ ಸುರಿದಿದೆ. ಇದು ತೀವ್ರ ಶಾಖದ ಅಲೆಗೆ ಮುಕ್ತಿ ನೀಡಿತು. ಮೇ 8ರವರೆಗೂ ಅಸ್ಸಾಂನಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಂಭವವಿದೆ. ಕರಾವಳಿ ರಾಜ್ಯವಾದ ಒಡಿಶಾದಲ್ಲಿ ಮೇ 10 ರವರೆಗೆ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ. ಇಲ್ಲಿ ಸಹ ಬಿಸಿಲ ಝಳ ತಾಂಡವವಾಡುತ್ತಿದೆ. ಜನರು ಹೈರಾಣಾಗಿದ್ದಾರೆ.
ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಒಡಿಶಾ ಹಾಗೂ ಜಾರ್ಖಂಡ್‌ನಲ್ಲಿ ಶಾಖದ ಅಲೆ ಮುಂದುವರಿಯಲಿದೆ. ಈ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಮಾತ್ರ ಮಳೆಯ ವಾತಾವರಣ ಕಂಡು ಬರಲಿದೆ. ಈ ರಾಜ್ಯಗಳಲ್ಲಿ ನೆನ್ನೆ ಸೋಮವಾರ ವಾಡಿಕೆಗಿಂತ ಅಧಿಕ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಐಎಂಡಿ ವರದಿ ಮಾಹಿತಿ ನಿಡಿದೆ.
ಕರ್ನಾಟಕದಲ್ಲಿ ತೀವ್ರ ತಾಪಮಾನ: ಕೆಲವೆಡೆ ಮಳೆ
ಕರ್ನಾಟಕದಲ್ಲಿ ತೀವ್ರ ತಾಪಮಾನ ಕಾರಣಕ್ಕಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೀಟ್ ವೇವ್ ಆರೆಂಜ್ ಅಲರ್ಟ್ ನೀಡಲಾಗಿದೆ. ಇಲ್ಲಿ 42 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ತಾಪಮಾನ ದಾಖಲಾಗಿದೆ. ಇನ್ನೂ ಒಂದೆರಡು ದಿನ ಇದೇ ರೀತಿಯ ವಾತಾವರಣ ಕಂಡು ಬರಲಿದೆ. ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ನಿರೀಕ್ಷೆ ಇದೆ.
ಇಂದು ಮತದಾನ: 1,300 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಮೂರನೇ ಹಂತ ಲೋಕಸಭಾ ಚುನಾವಣೆಯಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ. 1,300 ಅಭ್ಯರ್ಥಿಗಳು ಸ್ಪರ್ಧಾಳುಗಳಾಗಿದ್ದು, ಕೇಂದ್ರ ಸಚಿವರಾದ ಅಮಿತ್ ಶಾ, ಜ್ಯೋತಿರಾದಿತ್ಯ ಸಿಂಧಿಯಾ, ಮನ್ಸುಖ್ ಮಾಂಡವಿಯಾ ಇನ್ನಿತರ ಕೇಂದ್ರ ಬಿಜೆಪಿ ಘಟಾನುಘಟಿ ನಾಯಕರ ಕ್ಷೇತ್ರದಲ್ಲಿ ಮತದಾನ ಮೇ 7 ರಂದು ಜರುಗಿದೆ.












Click it and Unblock the Notifications