India Rain: ನವೆಂಬರ್ 26ರವರೆಗೂ ದೇಶದ ಈ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ, ಎಲ್ಲೆಲ್ಲಿ ಗೊತ್ತಾ?
India rain update:ಇದೀಗ ಹಿಂಗಾರು ಚುರುಕು ಪಡೆದಿದ್ದು, ದೇಶದ ಹಲವು ರಾಜ್ಯಗಳಲ್ಲಿ ಅಬ್ಬರದ ಮಳೆಯಾಗುತ್ತಿದೆ. ಇನ್ನು ಕೆಲವೆಡೆ ಬಿಸಿಲಿನ ವಾತಾವರಣ ಮುಂದುವರೆದಿದೆ. ಮತ್ತೊಂದೆಡೆ ಭಾರತೀಯ ಹವಾಮಾನ ಇಲಾಖೆಯು ನವೆಂವರ್ 26ರವರೆಗೆ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ. ಹಾಗಾದರೆ ಎಲ್ಲೆಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಶುಕ್ರವಾರ (ನವೆಂಬರ್ 24) ತಮಿಳುನಾಡಿನ ಪುದುಚೇರಿ, ಕಾರೈಕಲ್, ಕರ್ನಾಟಕದ ದಕ್ಷಿಣ ಒಳನಾಡಿನ ಭಾಗಗಳಲ್ಲಿ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಇಂದು ತಮಿಳುನಾಡು, ಪುದುಚೇರಿ, ಕಾರೈಕಲ್, ಕರ್ನಾಟಕ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಂಡಮಾನ್-ನಿಕೋಬಾರ್ ದ್ವೀಪಗಳು, ಕೊಂಕಣ-ಗೋವಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಉತ್ತರ ಒಳಭಾಗದಲ್ಲಿ ಗುಡುಗು ಸಹಿತ ಚದುರಿದ ಮಳೆಯಾಗುವ ನಿರೀಕ್ಷೆಯಿದೆ. ಇನ್ನು ಒಡಿಶಾ, ಗುಜರಾತ್, ಮಧ್ಯ ಮಹಾರಾಷ್ಟ್ರ, ಛತ್ತೀಸ್‌ಗಢದಲ್ಲಿ ಗುಡುಗು ಸಹಿತ ಪ್ರತ್ಯೇಕ ಮಳೆಯಾಗುವ ಮುನ್ಸೂಚನೆ ಇದೆ.
ನವೆಂಬರ್ 26ರವರೆಗೆ ಭಾರೀ ಮಳೆ
ಇನ್ನು ತೆಲಂಗಾಣದ ಕೆಲವು ಭಾಗಗಳಲ್ಲಿ ಇಂದಿನಿಂದ ನವೆಂಬರ್ 26ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಹಾಗೆಯೇ ಹೈದರಾಬಾದ್‌ನ ಸೆರಿಲಿಂಗಂಪಲ್ಲಿ, ಚಾರ್‌ಮಿನಾರ್, ಖೈರತಾಬಾದ್, ಸಿಕಂದರಾಬಾದ್, ಎಲ್‌ಬಿ ನಗರ, ಕುಕಟ್‌ಪಲ್ಲಿಯಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಬೀಳಲಿದೆ ಎಂದು ತಿಳಿಸಿದೆ.
ನಿನ್ನೆ (ನವೆಂಬರ್ 22) ಸೈದಾಬಾದ್‌ನಲ್ಲಿ ಅತಿ ಹೆಚ್ಚು ಅಂದರೆ 2.3 ಮಿಲಿ ಮೀಟರ್ ಮಳೆಯಾಗಿದೆ. ಇನ್ನು ಕೆಲವೆಡೆ ಬಿಸಿಲಿನ ವಾತಾವರಣ ಮುಂದುವರೆದಿದೆ. ಹೈದರಾಬಾದ್‌ನ ಶೇಕ್‌ಪೇಟ್ ಪ್ರದೇಶದಲ್ಲಿ ಬುಧವಾರ ಸಾಧಾರಣ ಮಳೆಯಾಗಿದ್ದು, ನಲ್ಗೊಂಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 37.3 ಮಿ.ಮೀ. ಮಳೆಯಾಗಿದೆ ಎಂದು ತಿಳಿದುಬಂದಿದೆ.
ಕೇರಳದ ಹಲವೆಡೆ ಭಾರೀ ಮಳೆ
ಕೇರಳದ ಪತ್ತನಂತಿಟ್ಟ, ತಿರುವನಂತಪುರ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಭಾರೀ ಮಳೆಯಾಗಿದೆ. ಇನ್ನು ಇಂದು (ನವೆಂಬರ್ 23) ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರದ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನು ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಬುಧವಾರ (ನವೆಂಬರ್ 22) ರಾತ್ರಿ ಕೇರಳದ ಕೆಲ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಎಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಪತ್ತನಂತಿಟ್ಟ ಜಿಲ್ಲಾಧಿಕಾರಿ ಎ.ಶಿಬು ಅವರು ನವೆಂಬರ್ 24ರವರೆಗೆ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ ಪ್ರಯಾಣ ಮತ್ತು ಪ್ರವಾಸಿ ಚಟುವಟಿಕೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಇದು ಶಬರಿಮಲೆ ಯಾತ್ರೆಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪಥನಂತಿಟ್ಟ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಿಗೆ ರಾತ್ರಿ 7ರಿಂದ ಬೆಳಗ್ಗೆ 6 ರವರೆಗೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಕಯಾಕಿಂಗ್ ಮತ್ತು ಬೋಟಿಂಗ್‌ನಂತಹ ಮನರಂಜನಾ ಚಟುವಟಿಕೆಗಳನ್ನು ನವೆಂಬರ್ 24ರವರೆಗೆ ನಿಷೇಧಿಸಲಾಗಿದೆ.
ಭಾರೀ ಮಳೆಗೆ ಪಥನಂತಿಟ್ಟ ಜಿಲ್ಲೆಯ ನಾರಂಗನಂ ಬಳಿ 71ವರ್ಷದ ಮಹಿಳೆಯೊಬ್ಬರು ಹೊಳೆಯಲ್ಲಿ ಕೊಚ್ಚಿ ಹೋಗಿದ್ದು, ಮಹಿಳೆ ನದಿಯಲ್ಲಿ ಸ್ನಾನಕ್ಕೆಂದು ತೆರಳಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೊಟ್ಟಾಯಂ ಜಿಲ್ಲೆಯ ಭರಣಂಗನಂನಲ್ಲಿ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಶಾಲಾ ವಿದ್ಯಾರ್ಥಿಯೊಬ್ಬರು ನಾಪತ್ತೆಯಾಗಿದ್ದಾರೆ. 13 ವರ್ಷದ ಹೆಲೆನ್ ಅಲೆಕ್ಸ್ ಶಾಲೆಯಿಂದ ಹಿಂತಿರುಗುತ್ತಿದ್ದಾಗ ನಾಪತ್ತೆಯಾಗಿದ್ದಳು. ದಾರಿಯಲ್ಲಿ ಭಾರೀ ಪ್ರಮಾಣದ ನೀರಿನ ಹರಿವಿನಿಂದ ಆಕೆ ಮುಳುಗಿದಳು ಎಂದು ತಿಳಿದುಬಂದಿದೆ.
ತಿರುವನಂತಪುರಂನ ಹಲವೆಡೆ ಜಲಾವೃತ
ಗುರುವಾರ (ನವೆಂಬರ್ 23) ಬೆಳಗ್ಗೆ ತಿರುವನಂತಪುರಂನಲ್ಲಿ ಸುರಿದ ಧಾರಾಕಾರ ಮಳೆಗೆ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ತಿರುವನಂತಪುರಂನ ಪತ್ತಂ, ಮುರಿಂಜಪಾಲಂ, ಕನ್ನಮೂಲ ಮತ್ತು ತೆಕ್ಕುಮ್ಮೂಡುಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಹಾಗೂ ಇಲ್ಲಿರುವ ಕಾಸ್ಮೋ ಆಸ್ಪತ್ರೆಯ ನೆಲ ಮಹಡಿಯು ಭಾರೀ ಮಳೆಯಿಂದ ಜಲಾವೃತಗೊಂಡಿದೆ. ಇದೀಗ ಮಳೆಯ ತೀವ್ರತೆ ತಗ್ಗಿದ್ದು, ಇಲ್ಲಿನ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications