ಶಸ್ತ್ರಾಸ್ತ್ರಗಳ ಆಮದಿನಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ
ಶಸ್ತ್ರಾಸ್ತ್ರಗಳ ಆಮದಿನಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶ ಎನಿಸಿಕೊಂಡಿದೆ ಎಂದು ರಕ್ಷಣಾ ಉತ್ಪನ್ನಗಳ ಇಲಾಖೆಯ ಕಾರ್ಯದರ್ಶಿ ಅಜಯ್ ಕುಮಾರ್ ಶುಕ್ರವಾರ ಹೇಳಿದ್ದು, ಈ ಹಣೆಪಟ್ಟಿಯನ್ನು ದೇಶವು ಕಳಚಿಕೊಳ್ಳಬೇಕು ಎಂದಿದ್ದಾರೆ.
ರಕ್ಷಣೆ ವಿಚಾರದಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸಿ, ಶಸ್ತ್ರಾಸ್ತ್ರ ರಫ್ತು ಹೆಚ್ಚಿಸುತ್ತೇವೆ ಮತ್ತು ಕೆಲವು ಉತ್ಪನ್ನಗಳ ಪರವಾನಗಿ ವ್ಯವಸ್ಥೆಯನ್ನು ಸರಳಗೊಳಿಸುತ್ತೇವೆ. ಸದ್ಯಕ್ಕೆ ಭಾರತವು ಶಸ್ತ್ರಾಸ್ತ್ರಗಳ ಆಮದಿನಲ್ಲಿ ಜಗತ್ತಿನಲ್ಲೇ ನಂಬರ್ ಒನ್. ಈ ಹಿಂದೆ ಆ ಸ್ಥಾನದಲ್ಲಿ ಚೀನಾ ಇತ್ತು ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಭಾರತ್ ವಾಣಿಜ್ಯ ಮಂಡಳಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಚೀನಾ ದೇಶವು ಆಮದು ಪ್ರಮಾಣ ಇಳಿಸಲು ಸಾಧ್ಯವಾಗಿದೆ ಅಂದರೆ ಭಾರತಕ್ಕೆ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮೆಕ್ಸಿಕೋ ದೇಶವನ್ನು ಉದಾಹರಣೆಯಾಗಿ ನೀಡಿದ ಅವರು, ಆ ದೇಶವು ವೈಮಾನಿಕ ಉತ್ಪನ್ನಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಾ ಅಮೆರಿಕ ಹಾಗೂ ಯುರೋಪ್ ಗೆ ರಫ್ತು ಮಾಡುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಶಾಶ್ವತ ಸದಸ್ಯ ರಾಷ್ಟ್ರಗಳು ಜಾಗತಿಕ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ಶೇ 74ರಷ್ಟು ಪಾಲು ಹೊಂದಿವೆ ಎಂದಿದ್ದಾರೆ.
ವಾಯು ಸೇನೆ ಸಿಬ್ಬಂದಿ ಮಾಜಿ ಮುಖ್ಯಸ್ಥ ಅರುಪ್ ರಹಾ ಮಾತನಾಡಿ, ಉನ್ನತ ಶಸ್ತ್ರಾಸ್ತ್ರ ವ್ಯವಸ್ಥೆಗಾಗಿ ಆಮದು ಮಾಡಿಕೊಳ್ಳಲೇಬೇಕು. ಇದು ಭಾರತದ ಪಾಲಿಗೆ ದುರದೃಷ್ಟಕರ ಎಂದಿದ್ದಾರೆ.












Click it and Unblock the Notifications