ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗೆ ಬಂದಿತಾ ಅಂತ್ಯ ಕಾಲ!?
ನವದೆಹಲಿ, ಆಗಸ್ಟ್ 24: ಭಾರತವು ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಂತ್ಯ ಕಾಲಕ್ಕೆ ಬಂದು ನಿಂತಿರುವಂತೆ ಗೋಚರಿಸುತ್ತಿದೆ. ದೇಶದಲ್ಲಿ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ದಿ ವೈರ್ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಕೊವಿಡ್-19 ಅಂತಿಮ ಹಂತಕ್ಕೆ ಬಂದು ತಲುಪಿರುವ ಸಂದರ್ಭದಲ್ಲಿ ದೇಶದ ಜನರು ರೋಗಾಣುವಿನ ಮಧ್ಯೆ ಬದುಕುವುದು ಹೇಗೆ ಎಂಬುದನ್ನು ಸರಿಯಾಗಿ ಅರಿತುಕೊಂಡಿದ್ದಾರೆ. ಇಡೀ ದೇಶದ ಜನಸಂಖ್ಯೆ ಆವರಿಸುವುದಕ್ಕಿಂತಲೂ ಈ ಹಂತವು ಸಾಕಷ್ಟು ಭಿನ್ನವಾಗಿರುತ್ತದೆ ಎಂದಿದ್ದಾರೆ.
ಭಾರತದಲ್ಲಿ ಜನಸಂಖ್ಯೆ ಮತ್ತು ಸೋಂಕು ಹರಡುವಿಕೆಯ ವಿವಿಧ ಪ್ರದೇಶಗಳು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿವೆ. ಈ ಪ್ರದೇಶಗಳಿಗೆ ಅನುಗುಣವಾಗಿ ಜನರಲ್ಲಿ ಪ್ರತಿರಕ್ಷಣಾ ಶಕ್ತಿ ವ್ಯತ್ಯಾಸವಿರುತ್ತದೆ. ದೇಶದ ಜನರು ಅತಿವೇಗವಾಗಿ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಇದೇ ಸ್ಥಿತಿ ಮುಂದುವರಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯು ಕನಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ಡಾ. ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.

ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ಇಳಿಮುಖ
"ಕಳೆದ ಕೆಲ ತಿಂಗಳಿಗೆ ಹೋಲಿಕೆ ಮಾಡಿ ನೋಡಿದರೆ ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಸೋಂಕು ಹರಡುವಿಕೆ ಸಂಖ್ಯೆಯು ಕಡಿಮೆ ಅಥವಾ ಮಧ್ಯಮ ಹಂತದಲ್ಲಿದೆ. ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಜಗತ್ತಿನ ಎರಡನೇ ರಾಷ್ಟ್ರ ಎನಿಸಿರುವ ಭಾರತದಲ್ಲಿ ಮಟ್ಟಿಗೆ ನೋಡುವುದಾದರೆ ಕೊವಿಡ್-19 ಸೋಂಕು ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ಪರಿಣಾಮವನ್ನು ತೋರಿಸಿದೆ. ವೈವಿಧ್ಯಮಯ ಪ್ರದೇಶ ಹಾಗೂ ವೈವಿಧ್ಯಮಯ ಜನರನ್ನು ಹೊಂದಿರುವ ರಾಷ್ಟ್ರದಲ್ಲಿ ಪ್ರತಿರಕ್ಷಣಾ ಶಕ್ತಿಯೂ ವಿಭಿನ್ನವಾಗಿದೆ. ದೇಶದ ಹಲವೆಡೆ ಕೊೊರೊನಾವೈರಸ್ ಸೋಂಕಿತರು ಶೀಘ್ರದಲ್ಲೇ ಗುಣಮುಖರಾಗಿದ್ದಾರೆ. ಹೀಗಾಗಿ ಸೋಂಕಿತರ ಸಂಖ್ಯೆ ಕೆಲವು ಪ್ರದೇಶಗಳಲ್ಲಿ ತೀರಾ ಕಡಿಮೆಯಾಗಿದ್ದರೆ, ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಕೊವಿಡ್-19 ಅಂತ್ಯವಾಗಬಹುದು ಇಲ್ಲವೇ ಗರಿಷ್ಠ ಮಟ್ಟಕ್ಕೆ ಹೆಚ್ಚಾಗುವ ಅಪಾಯವೂ ಇದೆ," ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಶೇಕಡಾ 70ರಷ್ಟು ಮಂದಿಗೆ ಕೊರೊನಾವೈರಸ್ ಲಸಿಕೆ
ಭಾರತದಲ್ಲಿ 2022ರ ಹೊತ್ತಿಗೆ ಶೇ.70ರಷ್ಟು ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಿರುವ ಬಗ್ಗೆ ಆಶಾವಾದವನ್ನು ಇಟ್ಟುಕೊಳ್ಳಲಾಗಿದೆ ಎಂದು ಡೌ.ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 221 ದಿನಗಳಾಗಿದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆಗೆ 54,67,551 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ಈವರೆಗೂ 59,47,65,751 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೊರೊನಾವೈರಸ್ ಸೋಂಕಿನ ಬಗ್ಗೆ ಮಕ್ಕಳಿಗೆ ಭಯ ಬೇಕಿಲ್ಲ
ವಿದೇಶಗಳ ಸೆರೋ ಸಮೀಕ್ಷೆಗಳನ್ನು ಪರಿಶೋಧನೆ ನಡೆಸಿದಾಗ ಮಕ್ಕಳಿಗೂ ಕೂಡಾ ಕೊರೊನಾವೈರಸ್ ಸೋಂಕು ಅಂಟಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ. ಮಕ್ಕಳಿಂದ ಸೋಂಕು ಹರಡುವ ನಿರೀಕ್ಷೆಯಿದ್ದು, ಅದೃಷ್ಟವಶಾತ್ ಮಕ್ಕಳಲ್ಲಿ ಸೂಕ್ಷ್ಮ ಲಕ್ಷಣಗಳು ಗೋಚರಿಸುತ್ತವೆ. ಕೊವಿಡ್-19 ಸೋಂಕಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾದ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆಯಲ್ಲಿ ವಯಸ್ಕರೇ ಹೆಚ್ಚಾಗಿದ್ದಾರೆ. ಅದಾಗ್ಯೂ, ಮಕ್ಕಳ ಚಿಕಿತ್ಸೆಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಆಸ್ಪತ್ರೆಗಳು, ಮಕ್ಕಳ ತಜ್ಞರು, ನವಜಾತ ಶಿಶು ಕೇಂದ್ರ, ನವಜಾತ ಶಿಶುಗಳ ತುರ್ತು ನಿಗಾ ಘಟಕ, ಮಕ್ಕಳ ತುರ್ತು ನಿಗಾ ಘಟಕ ಸೇರಿದಂತೆ ಮಕ್ಕಳ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳನ್ನು ತಯಾರಿಯಲ್ಲಿ ಇಟ್ಟುಕೊಳ್ಳುವುದು ಸೂಕ್ತ ಎಂದು ಸೌಮ್ಯ ಸ್ವಾಮಿನಾಥನ್ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕೊಂಚ ಇಳಿಮುಖವಾಗುತ್ತಿದೆ. ಒಂದು ದಿನದಲ್ಲಿ 25,467 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 39,486 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 354 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,35,110 ಏರಿಕೆಯಾಗಿದೆ. ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,24,74,773ಕ್ಕೆ ಏರಿಕೆಯಾಗಿದೆ. ಈವರೆಗೂ 3,17,20,112 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 3,19,551 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications