Happy New Year 2025: ಹೊಸ ಕನಸು, ಭರವಸೆಯೊಂದಿಗೆ ಹೊಸ ವರ್ಷ ಸ್ವಾಗತಿಸಿದ ಭಾರತ
ಹಲವು ಸಿಹಿ-ಕಹಿ ನೆನಪುಗಳ ಜೊತೆ 2024ರ ಹಳೆ ವರ್ಷಕ್ಕೆ ವಿದಾಯ ಹೇಳುತ್ತಾ ಹೊಸ ಕನಸು, ಭರವಸೆಗಳನ್ನು ಹೊತ್ತು 2025ರ ಹೊಸ ವರ್ಷಕ್ಕೆ ಭಾರತೀಯರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಜನ ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲೆಂಡ್ ಸೇರಿದಂತೆ ಹಲವು ದೇಶಗಳು ಈಗಾಗಲೇ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿವೆ.
ಆಸ್ಟ್ರೇಲಿಯಾ ಸಿಡ್ನಿಯಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ನಡೆಯಲಿರುವ ವಿಶ್ವ ಪ್ರಸಿದ್ಧ ಪಟಾಕಿ ಪ್ರದರ್ಶವನ್ನು ಸಾವಿರಾರು ಜನ ಕಣ್ತುಂಬಿಕೊಂಡರು. ಜಪಾನ್, ಚೀನಾ, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ಕೂಡ 2025ರ ಹೊಸ ವರ್ಷವನ್ನು ಸ್ವಾಗತಿಸಿದವು.

ಜಪಾನ್‌ನಲ್ಲಿ, 108 ಬಾರಿ ದೇವಾಲಯದ ಗಂಟೆಗಳನ್ನು ಹೊಡೆಯುವುದು, ಜೋಯಾ ನೋ ಕೇನ್ ಎಂದು ಕರೆಯಲ್ಪಡುವ ಆಚರಣೆಯ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಯಿತು.
ಭಾರತದಲ್ಲಿ ಸಂಭ್ರಮಾಚರಣೆ
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಲವು ನಗರಗಳಲ್ಲಿ ಹೊಸ ವರ್ಷಾಚರಣೆಗೆ ಅದ್ದೂರಿ ತಯಾರಿ ಮಾಡಿಕೊಳ್ಳಲಾಗಿತ್ತು. ಪ್ರಮುಖ ಪಟ್ಟಣಗಳಲ್ಲಿ ಸಾವಿರಾರು ಜನ ಗುಂಪು ಸೇರಿ ಹೊಸ ವರ್ಷವನ್ನು ಬರಮಾಡಿಕೊಂಡರು. ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ, ಕೊಚ್ಚಿ ಸೇರಿದಂತೆ ಪ್ರಮುಖ ನಗರಗಳು ಹೊಸ ವರ್ಷವನ್ನು ಸ್ವಾಗತಿಸಲು ದೀಪಾಲಂಕಾರದ ಜೊತೆ ಸಜ್ಜಾಗಿದ್ದವು.
ಡಿಜೆ, ಹಾಡು, ಕುಣಿತ ಸಾಮಾನ್ಯವಾಗಿತ್ತು. ಯುವಕ ಯುವತಿಯರು ಸಂಭ್ರಮದಿಂದ ಪಾಲ್ಗೊಂಡು ಹಾಡುಗಳಿಗೆ ಹೆಜ್ಜೆ ಹಾಕಿದರು. ಸರಿಯಾಗಿ 12 ಗಂಟೆಗೆ ಪಟಾಕಿ ಸಿಡಿಸುವ ಜೊತೆಗೆ ಹೊಸ ವರ್ಷವನ್ನು ಸ್ವಾಗತಿಸಿದರು. ಬಳಿಕ ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದರು.
ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹೊಸ ವರ್ಷವನ್ನು ಸ್ವಾಗತಿಸಲು ಮದುವಣಗಿತ್ತಿಯಂತೆ ಸಜ್ಜಾಗಿತ್ತು. ಸಾವಿರಾರು ಯುವಕ ಯುವತಿಯರು ಒಟ್ಟಿಗೆ ಸೇರಿ ಹೊಸ ವರ್ಷವನ್ನು ಸ್ವಾಗತಿಸಿದರು. ಸರಿಯಾಗಿ 12 ಗಂಟೆಗೆ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಲಾಯಿತು.
ಬೆಂಗಳೂರು ಮಾತ್ರವಲ್ಲದೆ ತುಮಕೂರು, ಕೋಲಾರ, ಚಿಕ್ಕಮಗಳೂರು, ಮಂಗಳೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೂಡ ಹೊಸ ವರ್ಷಾಚರಣೆ ಸಂಭ್ರಮ ಜೋರಾಗಿತ್ತು. ಗುಂಪಾಗಿ ಸೇರಿದ ಯುವ ಜನತೆ ಕೇಕ್ ಕತ್ತರಿಸಿ, ಸಿಹಿ ಹಂಚಿ ಹೊಸ ವರ್ಷದ ಶುಭಾಶಯ ಕೋರಿದರು. ಬಳಿಕ ಹಾಡು ಕುಣಿತ ಕೂಡ ಜೋರಾಗಿತ್ತು.
2024ರಲ್ಲಿ ಜಗತ್ತು ಅನೇಕ ಆತಂಕಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ. ರಷ್ಯಾ ಉಕ್ರೇನ್ ಯುದ್ಧ, ಇಸ್ರೇಲ್ ಸಂಘರ್ಷ ಜಗತ್ತನ್ನು ಆತಂಕಕ್ಕೆ ದೂಡಿವೆ. 2025ರ ವರ್ಷದಲ್ಲಿ ಜಗತ್ತಿನದ ಯುದ್ದದ ಕಾರ್ಮೋಡ ಸರಿದು, ಶಾಂತಿಯ ಬೆಳಕು ಮೂಡಲಿ, ಜಗತ್ತು ಅಭಿವೃತ್ತಿಯತ್ತ ಮುನ್ನಡೆಯಲಿ ಎಂದು ಆಶಿಸುತ್ತಾ ಹೊಸ ವರ್ಷವನ್ನು ಸ್ವಾಗತಿಸೋಣ.












Click it and Unblock the Notifications