India And European Union: ಭಾರತ ಮತ್ತು ಯುರೋಪ್ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ, ಭರ್ಜರಿ ಲಾಭದ ನಿರೀಕ್ಷೆ
ಭಾರತ ಮತ್ತು ಯುರೋಪ್ ಒಕ್ಕೂಟದ ನಡುವೆ ಇದೀಗ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಚರ್ಚೆ ನಡೆಯುತ್ತಿದ್ದು, ಮಾತುಕತೆ ಅಂತಿಮ ಹಂತ ಪ್ರವೇಶ ಮಾಡಿದೆ. ಭಾರತಕ್ಕೆ ಯುರೋಪ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ಅವರು ಹಾಗೂ ಯುರೋಪ್ ಒಕ್ಕೂಟದ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರು ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ. ಇದೇ ಸಮಯದಲ್ಲಿ ಮಹತ್ವದ ವ್ಯಾಪಾರ ಒಪ್ಪಂದ ಕೂಡ ಅಂತಿಮ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ಸಮಯದಲ್ಲಿ ಈ ಒಪ್ಪಂದ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಹಾಗಾದರೆ ಭಾರತಕ್ಕೆ ಮತ್ತು ಯುರೋಪ್‌ಗೆ ಇದು ಎಷ್ಟು ಮುಖ್ಯ? ಭವಿಷ್ಯದ ದೃಷ್ಟಿಯಿಂದ ಏನೆಲ್ಲಾ ಲಾಭ ಈ ಒಪ್ಪಂದದಿಂದ? ಬನ್ನಿ ತಿಳಿಯೋಣ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರತ ಮತ್ತು ಯುರೋಪಿಯನ್ ಒಕ್ಕೂಟದ ವ್ಯಾಪಾರ ಒಪ್ಪಂದ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಪ್ರಮುಖ ಚರ್ಚೆಗಳು, ಮಾತುಕತೆ ಶುರುವಾಗಿದೆ. ಸುಮಾರು 20 ವರ್ಷಗಳ ಮಾತುಕತೆ ನಂತರ ಎರಡೂ ಒಕ್ಕೂಟಗಳ ಮಧ್ಯೆ ಒಪ್ಪಂದ ಅಂತಿಮ ಹಂತಕ್ಕೆ ಬಂದಿದೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ಶೃಂಗಸಭೆಯಲ್ಲಿ ಈ ಬಗ್ಗೆ ಮಾತುಕತೆ ನಡೆದು, ಅಧಿಕೃತವಾಗಿ ಇಂದು ಘೋಷಣೆ ಆಗಲಿದೆ ವ್ಯಾಪಾರ ಒಪ್ಪಂದ. ಇದೇ ಕಾರಣಕ್ಕೆ ಈಗ ಇಡೀ ಜಗತ್ತಿನ ಗಮನ ನವದೆಹಲಿ ಕಡೆಗೆ ನೆಟ್ಟಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷರಾದ ಟ್ರಂಪ್ ಅವರ ಗಮನ ಕೂಡ ಇಲ್ಲೇ ನೆಟ್ಟಿದೆ.

ಒಪ್ಪಂದ ಜಾರಿಗೆ ಬರುವುದು ಯಾವಾಗ?
ಮಾತುಕತೆ ಯಶಸ್ವಿಯಾಗಿದ್ದು, ಒಪ್ಪಂದ ಕೂಡ ಅಂತಿಮಗೊಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದು. ಇನ್ನೇನು ಕೆಲವೇ ಕ್ಷಣಗಳಲ್ಲಿ ಈ ಒಪ್ಪಂದ ಅಂತಿಮ ರೂಪ ಪಡೆದರೂ, ಒಪ್ಪಂದ ಜಾರಿಗೆ ಒಂದಷ್ಟು ಸಮಯ ಬೇಕಾಗಲಿದೆ. ಏಕೆಂದರೆ ಭಾರತದ ಕೇಂದ್ರ ಸಚಿವ ಸಂಪುಟ ಹಾಗೂ ಯುರೋಪ್ ಒಕ್ಕೂಟದ ಪಾರ್ಲಿಮೆಂಟ್ ಈ ಒಪ್ಪಂದವನ್ನು ಅನುಮೋದಿಸಬೇಕು. ಆ ನಂತರ ಈ ಒಪ್ಪಂದ ಅಧಿಕೃತವಾಗಿ ಜಾರಿ ಆಗಲಿದ್ದು, ಎಲ್ಲಾ ಪ್ರಕ್ರಿಯೆ ಮುಗಿಯಲು ಒಂದಷ್ಟು ತಿಂಗಳು ಬೇಕಾಗಬಹುದು ಎನ್ನಲಾಗಿದೆ. ಇನ್ನು ಭಾರತಕ್ಕೆ ಈ ಒಪ್ಪಂದ ಹಲವು ಲಾಭಗಳನ್ನು ತಂದುಕೊಡಲಿದ್ದು, ಯುರೋಪ್ ಕೂಡ ಲಾಭದಲ್ಲಿ ದೊಡ್ಡ ಪಾಲು ಪಡೆಯಲಿದೆ.
76 ಬಿಲಿಯನ್ ಡಾಲರ್ ವಹಿವಾಟು
ನವದೆಹಲಿ ಶೃಂಗಸಭೆ ಹಾಗೂ ವ್ಯಾಪಾರ ಒಪ್ಪಂದ ಜಗತ್ತಿನ ಗಮನ ಸೆಳೆಯಲು ಪ್ರಮುಖ ಕಾರಣ ಇದೆ. ಭಾರತಕ್ಕೆ ವ್ಯಾಪಾರದ ದೃಷ್ಟಿಯಿಂದ ಯುರೋಪ್ ಒಕ್ಕೂಟದ ಜೊತೆಗೆ ಈ ಒಪ್ಪಂದ ಮಾಡಿಕೊಳ್ಳುವುದು ಬಹುಮುಖ್ಯ, ಏಕೆಂದರೆ ಯುರೋಪ್ ಒಕ್ಕೂಟ ಭಾರತದ ಜೊತೆಯಲ್ಲಿ ವ್ಯಾಪಾರ ನಡೆಸಲು ತೆರಿಗೆಯಲ್ಲಿ ವಿನಾಯಿತಿ ನೀಡುತ್ತಾ ಬಂದಿದೆ. ಹೀಗಾಗಿಯೇ 2025ರ ಆರ್ಥಿಕ ವರ್ಷದಲ್ಲಿ ಭಾರತ ಮತ್ತು ಯುರೋಪ್ ಒಕ್ಕೂಟದ ನಡುವೆ ಬರೋಬ್ಬರಿ 76 ಬಿಲಿಯನ್ ಡಾಲರ್ ಮೊತ್ತದ ವ್ಯಾಪಾರ ನಡೆದಿದೆ. ಹೀಗಾಗಿ ಮುಂದೆ ಭಾರತ ಮತ್ತು ಯುರೋಪ್ ದೇಶಗಳ ನಡುವೆ ಇನ್ನಷ್ಟು ದೊಡ್ಡ ಮಟ್ಟದ ಒಪ್ಪಂದಗಳು ನಡೆಯುವ ನಿರೀಕ್ಷೆ ಇದೆ.












Click it and Unblock the Notifications