'ಚುನಾವಣಾ ನಿರಂಕುಶಾಧಿಕಾರ'ದತ್ತ ಸಾಗುತ್ತಿರುವ ಪ್ರಜಾಪ್ರಭುತ್ವಗಳ ಪಟ್ಟಿಯಲ್ಲಿ ಭಾರತ
ನವದೆಹಲಿ, ಮಾರ್ಚ್ 12: ಜಗತ್ತು ದಿನದಿಂದ ದಿನಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. 1970 ಮತ್ತು 1980ರ ದಶಕಗಳಿಗೆ ಹೋಲಿಸಿದರೆ ವಿಶ್ವದ ಪ್ರಜಾಸತ್ತಾತ್ಮಕ ಮೌಲ್ಯ ಸಾಕಷ್ಟು ಕಡಿಮೆಯಾಗಿದೆ. ಆದರೆ ಕಳೆದ ದಶಕದಲ್ಲಿ ಜಗತ್ತಿನಾದ್ಯಂತ ಇರುವ ಪ್ರಜಾಪ್ರಭುತ್ವವಾದಿ ದೇಶಗಳ ಸಂಖ್ಯೆಯಲ್ಲಿ ತೀವ್ರ ಕುಸಿತದ ದುಸ್ಥಿತಿ ಉಂಟಾಗಿದೆ.
2020ರಲ್ಲಿ ಭಾರತದಲ್ಲಿ ಪ್ರಮುಖ ಬದಲಾವಣೆಯನ್ನು ಗುರುತಿಸಲಾಗಿದೆ. ಭಾರತವು ಸ್ವತಂತ್ರ ಪ್ರಜಾಪ್ರಭುತ್ವದಿಂದ ಚುನಾವಣಾ ನಿರಂಕುಶತತೆಗೆ ಜಾರುತ್ತಿದೆ ಎಂದು ಸ್ವೀಡನ್ ಮೂಲದ ವೆರೈಟೀಸ್ ಆಫ್ ಡೆಮಾಕ್ರಸಿ (ವಿ-ಡೆಮ್) ಸಂಸ್ಥೆಯ ವರದಿ ತಿಳಿಸಿದೆ.
ಚುನಾವಣಾ ನಿರಂಕುಶತತೆಯ ಮಟ್ಟಕ್ಕೆ ಕುಸಿತವು ಭಾರತಕ್ಕೆ ಮಾತ್ರ ಅನ್ವಯಿಸಿಲ್ಲ. ಇದು ಏಷ್ಯಾ-ಪೆಸಿಫಿಕ್, ಪೂರ್ವ ಯುರೋಪ್, ಕೇಂದ್ರ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳವಣಿಗೆ ಕಾಣುತ್ತಿದೆ ಎಂದು 'ಆಟೊಕ್ರಟೈಸೇಷನ್ ಗೋಸ್ ವೈರಲ್' ಎಂಬ ಶೀರ್ಷಿಕೆಯ 2021 ಪ್ರಜಾಪ್ರಭುತ್ವ ವರದಿ ತಿಳಿಸಿದೆ.
2020ರಲ್ಲಿ ಜಾಗತಿಕ ನಾಗರಿಕರ ಪ್ರಜಾಪ್ರಭುತ್ವ ಸ್ವಾತಂತ್ರ್ಯದ ಸರಾಸರಿ ಮಟ್ಟವು 1990ರ ದಶಕದಲ್ಲಿ ಇದ್ದಂತಹ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ವಿ-ಡೆಮ್ ವರದಿ ಹೇಳಿದೆ. ಮುಂದೆ ಓದಿ.

ಭಾರತದಲ್ಲಿ ಪ್ರಜಾಪ್ರಭುತ್ವದ ಸ್ಥಿತಿ
ಭಾರತದ ನಿರಂಕುಶಾಧಿಕಾರದ ಪ್ರಕ್ರಿಯೆಯು ಕಳೆದ ಹತ್ತು ವರ್ಷಗಳಲ್ಲಿ 'ಮೂರನೇ ಅಲೆಯ' ದೇಶಗಳಲ್ಲಿನ ಒಂದು ನಮೂನೆಯ ಮಾದರಿಯನ್ನು ವ್ಯಾಪಕವಾಗಿ ಅನುಸರಿಸಲಾಗುತ್ತಿದೆ. ಭಾರತದಲ್ಲಿನ ಮುಕ್ತ ಪ್ರಜಾಪ್ರಭುತ್ವವು 2013ರಲ್ಲಿ ಅದರ ಅತ್ಯಧಿಕ ಎಂದರೆ ಶೇ 0.57ರಷ್ಟಿದ್ದರೆ, 2020ರ ಅಂತ್ಯಕ್ಕೆ ಶೇ 0.34ಕ್ಕೆ ದೊಡ್ಡ ಕುಸಿತ ಕಂಡಿದೆ.

ಭಾರತದಲ್ಲಿ ನಾಟಕೀಯ ಕುಸಿತ
ಭಾರತದಲ್ಲಿ 0 ರಿಂದ 1 ವರೆಗಿನ 'ಸ್ವತಂತ್ರ ಪ್ರಜಾಪ್ರಭುತ್ವ ಸೂಚ್ಯಂಕ (ಎಲ್‌ಡಿಐ) ಪ್ರಮಾಣದಲ್ಲಿ 23ರಷ್ಟು ಶೇಕಡಾವಾರಿ ಅಂಕಗಳ ಇಳಿಕೆಯಾಗಿದೆ. ಈ ಮೂಲಕ ಕಳೆದ 10 ವರ್ಷಗಳಲ್ಲಿಯೇ ಜಗತ್ತಿನ ಅತ್ಯಂತ ನಾಟಕೀಯ ಬದಲಾವಣೆ ಕಂಡ ದೇಶಗಳಲ್ಲಿ ಒಂದೆನಿಸಿಕೊಂಡಿದೆ. ಭಾರತದೊಂದಿಗೆ ಬ್ರೆಜಿಲ್, ಹಂಗೆರಿ ಮತ್ತು ಟರ್ಕಿ ದೇಶಗಳಿವೆ.
ಹಂಗೆರಿ ಮತ್ತು ಟರ್ಕಿಗಳು 2018 ಹಾಗೂ 2014ರಲ್ಲಿ ಚುನಾವಣಾ ಸರ್ವಾಧಿಕಾರತ್ವಕ್ಕೆ ಏರಿದ್ದರೆ, ಭಾರತ ಕೂಡ ಅವರು ಮಟ್ಟವನ್ನು ತಲುಪಿದೆ.

ನಿರಂಕುಶಾಧಿಕಾರದಲ್ಲಿ 68% ಜನಸಂಖ್ಯೆ
1.37 ಬಿಲಿಯನ್ ಜನಸಂಖ್ಯೆ ಇರುವ ಭಾರತವು ಚುನಾವಣಾ ನಿರಂಕುಶಾಧಿಕಾರಕ್ಕೆ ಸೇರ್ಪಡೆಯಾಗುವುದರೊಂದಿಗೆ, ಈಗ ಜಗತ್ತಿನ ಶೇ 68ರಷ್ಟು ಜನಸಂಖ್ಯೆ ಚುನಾವಣಾ ಹಾಗೂ ಮುಚ್ಚಿದ (ಸಂಪೂರ್ಣ) ಸರ್ವಾಧಿಕಾರದಲ್ಲಿ ಜೀವಿಸುತ್ತಿದೆ ಎಂದು ವರದಿ ತಿಳಿಸಿದೆ. ಜಗತ್ತಿನ 1/3ರಷ್ಟು, ಅಂದರೆ 2.6 ಬಿಲಿಯನ್ ಜನಸಂಖ್ಯೆಯನ್ನು ಹೊಂದಿರುವ 26 ದೇಶಗಳಲ್ಲಿ ನಿರಂಕುಶತ್ವದ ಅಲೆ ಹೆಚ್ಚುತ್ತಲೇ ಇದೆ ಎನ್ನುವುದನ್ನು ಇದು ತೋರಿಸಿದೆ.
ಭಾರತ, ಬ್ರೆಜಿಲ್, ಟರ್ಕಿ ಮತ್ತು ಅಮೆರಿಕದಂತಹ ವಿವಿಧ ಜಿ 20 ದೇಶಗಳು ಈ ಪ್ರವಾಹದ ಭಾಗವಾಗಿವೆ. ಬಾಂಗ್ಲಾದೇಶ, ಹಂಗೆರಿ, ಫಿಲಿಪ್ಪೀನ್ಸ್ ಮತ್ತು ತಾಂಜೇನಿಯಾದಂತಹ ಇತರೆ ಜನಸಾಂದ್ರತೆಯ, ಪ್ರಭಾವಿ ದೇಶಗಳು ಕೂಡ ಈ ನಿರಂಕುಶಾಧಿಕಾರಕ್ಕೆ ಸೇರುತ್ತಿವೆ. ಹಾಂಕಾಂಗ್ ಮತ್ತೊಂದು ಮಟ್ಟದಲ್ಲಿದೆ.

32 ದೇಶಗಳಲ್ಲಿ ಮಾತ್ರ ಮುಕ್ತ ಪ್ರಜಾಪ್ರಭುತ್ವ
ಕಳೆದ ಒಂದು ದಶಕದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭಾರಿ ಇಳಿಕೆ ಕಂಡ ದೇಶಗಳಲ್ಲಿ ಪೊಲಾಂಡ್ ಮೊದಲ ಸ್ಥಾನದಲ್ಲಿದೆ. ಪ್ರಮುಖ ನಿರಂಕುಶಾಧಿಕಾರಗಳಾಗಿ ಬೆನಿನ್, ಬೊಲಿವಿಯಾ ಮತ್ತು ಮಾರಿಷಸ್ ಹೊಸದಾಗಿ ಸೇರ್ಪಡೆಯಾದ ದೇಶಗಳಾಗಿವೆ.
ಹೀಗಿದ್ದರೂ ಜಗತ್ತಿನ ಶೇ 14ರಷ್ಟು ಜನಸಂಖ್ಯೆ ಮುಕ್ತ ಪ್ರಜಾಪ್ರಭುತ್ವದಲ್ಲಿ ವಾಸಿಸುತ್ತಿದ್ದಾರೆ. ಆದರೆ 2010ರಲ್ಲಿ ಇದ್ದ 41 ದೇಶಗಳ ಸಂಖ್ಯೆ 2020ರಲ್ಲಿ 32ಕ್ಕೆ ಕುಸಿದಿದೆ. ಇನ್ನೊಂದೆಡೆ, ಚುನಾವಣಾ ಪ್ರಜಾಪ್ರಭುತ್ವವು 60 ದೇಶಗಳಲ್ಲಿ, ಅಂದರೆ ಉಳಿದ ಶೇ 19ರಷ್ಟು ಜನಸಂಖ್ಯೆಗೆ ಸಿಗುತ್ತಿದೆ. 1789ರಿಂದ 2020ರ ಅವಧಿಯವರೆಗಿನ 202 ದೇಶಗಳ ಸುಮಾರು 30 ಮಿಲಿಯನ್ ಡೇಟಾಗಳಿರುವ ಪ್ರಜಾಪ್ರಭುತ್ವದ ಬೃಹತ್ ಜಾಗತಿಕ ದಾಖಲೆಗಳನ್ನು ತಯಾರಿಸುತ್ತಿರುವುದಾಗಿ ವಿ-ಡೆಮ್ ತಿಳಿಸಿದೆ.












Click it and Unblock the Notifications