16ನೇ ವಯಸ್ಸಿಗೆ ಸ್ವಂತ ಕಂಪನಿ ಸ್ಥಾಪನೆ: ತಂದೆಗೆ ತಿಂಗಳಿಗೆ 2 ಲಕ್ಷ ರೂ. ಸಂಬಳ ನೀಡುತ್ತಿರುವ 'ಭಾರತದ AI ಕಿಡ್'
ಸಾಮಾನ್ಯವಾಗಿ 16 ವರ್ಷದ ಮಕ್ಕಳು ತಮ್ಮ ಪಾಕೆಟ್ ಮನಿಗಾಗಿ ಅಥವಾ ದಿನನಿತ್ಯದ ಖರ್ಚುಗಳಿಗಾಗಿ ತಂದೆ ತಾಯಿಯ ಬಳಿ ಹಣ ಕೇಳುವುದು ಸಹಜ. ಆದರೆ, ಇಲ್ಲೊಬ್ಬ 16 ವರ್ಷದ ಬಾಲಕ ತಾನೇ ಸ್ವಂತ ಕಂಪನಿ ಕಟ್ಟಿ, ಅದರಲ್ಲಿ ತನ್ನ ತಂದೆಗೇ ಕೆಲಸ ಕೊಟ್ಟು, ಪ್ರತಿ ತಿಂಗಳು ಬರೋಬ್ಬರಿ 2 ಲಕ್ಷ ರೂಪಾಯಿ ಸಂಬಳ ನೀಡುತ್ತಿದ್ದಾನೆ ಎಂದರೆ ನೀವು ನಂಬಲೇಬೇಕು.
ಹೌದು, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಕೇರಳದ ಕೊಚ್ಚಿಯ ರಾಹುಲ್ ಜಾನ್ ಅಜು ಎಂಬ 16 ವರ್ಷದ ಬಾಲಕನೇ ಈ ಸಾಧಕ. ಪ್ರಸ್ತುತ ಜಗತ್ತಿನಾದ್ಯಂತ 'ಭಾರತದ ಎಐ ಕಿಡ್' ಎಂದೇ ಜನಪ್ರಿಯನಾಗಿರುವ ಈತ, ತಂತ್ರಜ್ಞಾನ ಲೋಕದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾನೆ.

ಕೊಚ್ಚಿಯ ಕುನ್ನಂಪುರಂನ ನಾರ್ತ್ ಎಡಪಲ್ಲಿ ಜಿಹೆಚ್ಎಸ್ಎಸ್ ಶಾಲೆಯಲ್ಲಿ 12ನೇ ತರಗತಿಯ ಕಾಮರ್ಸ್ ವಿದ್ಯಾರ್ಥಿಯಾಗಿರುವ ರಾಹುಲ್, ಶಾಲಾ ಓದಿನ ಜೊತೆಗೇ ಜಾಗತಿಕ ಮಟ್ಟದ ಯಶಸ್ವಿ ಕೃತಕ ಬುದ್ಧಿಮತ್ತೆ ಸ್ಟಾರ್ಟ್‌ಅಪ್ ಮುನ್ನಡೆಸುತ್ತಿದ್ದಾನೆ.
ಎಐ ಲೋಕದಲ್ಲಿ ಭಾರತದ ಎಐ ಕಿಡ್ ಕ್ರಾಂತಿ
ತನ್ನದೇ ಆದ 'ಎಐ ಟೆಕ್ನಾಲಜೀಸ್' ಎಂಬ ಕಂಪನಿಯನ್ನ ಕಟ್ಟಿಬೆಳೆಸಿದ ರಾಹುಲ್, ಅದರ ಅಡಿಯಲ್ಲಿ 'ಥಿಂಕ್‌ಕ್ರಾಫ್ಟ್ ಅಕಾಡೆಮಿ' ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾನೆ. ಈ ಅಕಾಡೆಮಿಯಲ್ಲಿ ಐಐಟಿ, ಐಐಎಂ , ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಉದ್ಯೋಗಿಗಳು ಅತ್ಯಂತ ಸರಳವಾಗಿ ಎಐ ಕೌಶಲ್ಯಗಳನ್ನ ಕಲಿಯುತ್ತಿದ್ದಾರೆ.
ಇದುವರೆಗೂ ವಿಶ್ವದಾದ್ಯಂತ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈತ ಕೃತಕ ಬುದ್ಧಿಮತ್ತೆ ತರಬೇತಿ ನೀಡಿದ್ದಾನೆ. ಕೇವಲ ತರಬೇತಿಯಷ್ಟೇ ಅಲ್ಲದೆ, ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ RESQ AI, MeBot, ZapGap, Investo AI ಮತ್ತು FeedFye ಸೇರಿದಂತೆ ಒಟ್ಟು 15 ಅತ್ಯಾಧುನಿಕ ಎಐ ಪರಿಕರಗಳನ್ನ ಈ 'ಭಾರತದ ಎಐ ಕಿಡ್' ಅಭಿವೃದ್ಧಿಪಡಿಸಿದ್ದಾನೆ.
2 ಲಕ್ಷ ರೂ. ವೇತನದೊಂದಿಗೆ ತಂದೆಗೆ ಕೆಲಸ ನೀಡಲು ಕಾರಣವೇನು?
ರಾಹುಲ್ ಕಂಪನಿಯಲ್ಲಿ ಪ್ರಪಂಚದ ವಿವಿಧ ಮೂಲೆಗಳಿಂದ 15 ಮಂದಿ ಉದ್ಯೋಗಿಗಳು ರಿಮೋಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಅಚ್ಚರಿಯ ವಿಷಯವೆಂದರೆ, ರಾಹುಲ್ ತಂದೆ ಕೂಡ ಮಗನ ಕಂಪನಿಯಲ್ಲೇ ಉದ್ಯೋಗಿಯಾಗಿದ್ದು, ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ.
ಈ ಬಗ್ಗೆ ಸ್ವತಃ ಮಾತನಾಡಿರುವ ರಾಹುಲ್, "ನಾನು ಫೋನ್‌ನಿಂದ ಎಷ್ಟು ಬೇಕಾದರೂ ಜ್ಞಾನವನ್ನು ಪಡೆದುಕೊಳ್ಳಬಹುದು, ಆದರೆ ನನಗೆ ನನ್ನ ತಂದೆಯಷ್ಟು ಅನುಭವವಿಲ್ಲ. ಅವರು ಅಮೆಜಾನ್, ಅಡೋಬ್, ವಿಪ್ರೊ ಮತ್ತು ಐಬಿಎಂನಂತಹ ಜಾಗತಿಕ ಕಂಪನಿಗಳಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಹಾಗಾಗಿ ನಾನು ಅವರಿಂದ ಸಾಕಷ್ಟು ಕಲಿಯಬಹುದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರನ್ನು ಕಂಪನಿಗೆ ನೇಮಿಸಿಕೊಂಡಿದ್ದು ನನ್ನ ಕಂಪನಿಯ ಮಾರ್ಕೆಟಿಂಗ್‌ಗೆ ಕೂಡ ಬಹಳ ಸಹಾಯವಾಯಿತು" ಎಂದು ಹೆಮ್ಮೆಯಿಂದ ಹೇಳುತ್ತಾನೆ.
ಕೃತಕ ಬುದ್ಧಿಮತ್ತೆ ಸ್ಟಾರ್ಟ್‌ಅಪ್ ಶುರುವಾಗಿದ್ದು ಹೇಗೆ?
ರಾಹುಲ್‌ನ ಈ ಪ್ರಯಾಣವು ಆತನ ಒಂಬತ್ತನೇ ವಯಸ್ಸಿನಲ್ಲೇ ಶುರುವಾಯಿತು. ವಿಡಿಯೋ ಎಡಿಟಿಂಗ್ ಮೂಲಕ ತಂತ್ರಜ್ಞಾನದ ಬಗ್ಗೆ ತೀವ್ರ ಆಸಕ್ತಿ ಬೆಳೆಸಿಕೊಂಡ ರಾಹುಲ್, ಆತನ ತಂದೆಗೆ ಅಡೋಬ್ ಕಂಪನಿಯಲ್ಲಿ ಕೆಲಸ ಸಿಕ್ಕಾಗ ಪ್ರೀಮಿಯಂ ಟೂಲ್‌ಗಳನ್ನ ಉಚಿತವಾಗಿ ಬಳಸುವ ಅವಕಾಶ ಪಡೆದುಕೊಂಡ. ಅಲ್ಲಿಂದ ಎಐ ಬಗ್ಗೆ ಆಳವಾಗಿ ಕಲಿಯಲು ಆರಂಭಿಸಿದ ಆತ, ಶಾಲೆಯ ವಿಜ್ಞಾನ ಪ್ರಾಜೆಕ್ಟ್‌ಗಾಗಿ 'ಮೀಬಾಟ್' ಎಂಬ ರೋಬೋಟ್ ಸೃಷ್ಟಿಸಿದ. ಅಂದು ಶುರುವಾದ ಆಸಕ್ತಿ ಇಂದು ಅವನನ್ನ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಉದ್ಯಮಿಯಾಗಿ ಬೆಳೆಸಿದೆ.
ಕೇವಲ 16ನೇ ವಯಸ್ಸಿನಲ್ಲಿ ಓದಿನ ಜೊತೆಗೆ ಜಾಗತಿಕ ಮಟ್ಟದ ಕಂಪನಿಯನ್ನು ಮುನ್ನಡೆಸುತ್ತಿರುವ ರಾಹುಲ್ ಜಾನ್ ಅಜು, ಇಂದಿನ ಯುವ ಪೀಳಿಗೆಗೆ ನಿಜಕ್ಕೂ ದೊಡ್ಡ ಸ್ಫೂರ್ತಿ ಎನ್ನಬಹುದು. ಕೇವಲ ತರಗತಿಯ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ, ಹೊಸ ತಂತ್ರಜ್ಞಾನವನ್ನ ಕಲಿತು, ಅದನ್ನು ಸಕಾರಾತ್ಮಕವಾಗಿ ಬಳಸಿದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದನ್ನು ಈ ಕೇರಳದ ಬಾಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ.


Click it and Unblock the Notifications
