ಹಿಂದಿ ಬಿಟ್ಟು ಇಂಗ್ಲಿಷ್ ಪದ ಬಳಸಿದ ಮೋದಿ , ಸ್ವಾತಂತ್ರ್ಯ ಭಾಷಣದಲ್ಲೂ ಯುವಕರೇ ಟಾರ್ಗೆಟ್
ನವದೆಹಲಿ: 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ ತಮ್ಮ ಸಾಂಪ್ರದಾಯಿಕ ಭಾಷಣವನ್ನು ಪ್ರಾರಂಭಿಸಿದ್ದಾರೆ. ಅವರು ದೇಶವಾಸಿಗಳಿಗೆ ಶುಭಾಶಯ ಕೋರಿದರು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ 80ನೇ ಸ್ವಾತಂತ್ರ್ಯೋತ್ಸವದ ಕೆಂಪುಕೋಟೆ ಭಾಷಣದಲ್ಲಿ ಯುವಜನತೆ, ಶಿಕ್ಷಣ ಮತ್ತು ಡಿಜಿಟಲ್ ಯುಗದ ಭಾರತದ ಭವಿಷ್ಯ ಪ್ರಮುಖ ವಿಷಯಗಳಾಗುವ ಸಾಧ್ಯತೆ ಕಂಡುಬಂದಿದೆ. ಸಾಮಾನ್ಯವಾಗಿ ಹಿಂದಿ ಹಾಗೂ ಸಂಸ್ಕೃತನಿಷ್ಠ ಪದಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವ ಪ್ರಧಾನಿ ಮೋದಿ ಅವರ ಭಾಷಣದ ಶೈಲಿಯಲ್ಲಿ ಈ ಬಾರಿ ಗಮನಾರ್ಹ ಬದಲಾವಣೆ ಕಾಣಿಸಿಕೊಂಡಿದ್ದು, ಆಗಾಗ್ಗೆ ಇಂಗ್ಲಿಷ್ ಪದಗಳ ಬಳಕೆಯೂ ಕಂಡುಬಂದಿದೆ.

ಯುವಶಕ್ತಿ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ತಂತ್ರಜ್ಞಾನ ಹಾಗೂ ಡಿಜಿಟಲ್ ಭಾರತದಂತಹ ವಿಷಯಗಳಿಗೆ ಭಾಷಣದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯುವಕರೇ ಭಾರತದ ಭವಿಷ್ಯದ ಶಕ್ತಿ ಎಂಬ ಸಂದೇಶವನ್ನು ಪ್ರಧಾನಿ ಪುನರುಚ್ಚರಿಸಿದ್ದು, ಹೊಸ ಪೀಳಿಗೆಯ ಆಶಯಗಳು ಮತ್ತು ಆಧುನಿಕ ಭಾರತದ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಭಾಷಣದ ನಿರೂಪಣೆ ಮಾಡಲಾಗಿದೆ.
ಸಾಮಾನ್ಯವಾಗಿ ಕೆಂಪುಕೋಟೆಯಿಂದ ಮಾಡುವ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹಿಂದಿ ಭಾಷೆಯ ಪ್ರಾಬಲ್ಯ ಹೆಚ್ಚಾಗಿ ಕಾಣಿಸುತ್ತಿತ್ತು. ಆದರೆ ಈ ಬಾರಿ ಇಂಗ್ಲಿಷ್ ಪದಗಳ ಪದೇಪದೇ ಬಳಕೆ ಭಾಷಣವನ್ನು ಹೆಚ್ಚು ಸಮಕಾಲೀನವಾಗಿಸಿದೆ. ಡಿಜಿಟಲ್ ಯುಗದಲ್ಲಿ ಬೆಳೆದಿರುವ ಯುವಜನತೆಗೆ ಸುಲಭವಾಗಿ ತಲುಪುವ ಉದ್ದೇಶದಿಂದಲೇ ಈ ರೀತಿಯ ಭಾಷಾಶೈಲಿ ಬಳಸಲಾಗಿದೆ ಎಂಬ ಚರ್ಚೆ ಇದೀಗ ಆರಂಭವಾಗಿದೆ. 'ಯುವಶಕ್ತಿ-ವಿಕಸಿತ ಭಾರತ'ದ ಸಂದೇಶದ ಜತೆಗೆ ಭಾಷೆಯಲ್ಲೂ ಹೊಸ ಪ್ರಯೋಗ ಮಾಡುವ ಮೂಲಕ ಪ್ರಧಾನಿ ಮೋದಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಭಾಷಣವನ್ನು ಯುವಜನತೆಯತ್ತ ಹೆಚ್ಚು ಕೇಂದ್ರೀಕರಿಸಿದಂತೆ ಕಂಡುಬಂದಿದೆ.
ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ
ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿಹರ್ ಘರ್ ತಿರಂಗಾ, ಹರ್ ಮನ್ ತಿರಂಗಾಎಂದ ಪ್ರಧಾನಿ ಮೋದಿ, ಇಂದು ಪ್ರತಿಯೊಂದು ಹೃದಯದ ಬಡಿತದಲ್ಲೂ 'ವಂದೇ ಮಾತರಂ' ಜಪ ಪ್ರತಿಧ್ವನಿಸುತ್ತಿದೆ. ಇಂದು ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವಿದೆ, ಪ್ರತಿಯೊಂದು ಮನದಲ್ಲೂ ತ್ರಿವರ್ಣ ಧ್ವಜವಿದೆ. ದೇಶವು ಇಂದು ಹೊಸ ಸಂಕಲ್ಪಗಳೊಂದಿಗೆ, ಅತ್ಯಂತ ಉತ್ಸಾಹ ಮತ್ತು ಉಲ್ಲಾಸದಿಂದ ಮುಂದೆ ಸಾಗುತ್ತಿದೆ ಎಂದು ಹೇಳಿದರು.
ಇನ್ನೂ ವೋಕಲ್ ಫಾರ್ ಲೋಕಲ್' (ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ) ಆಶಯದೊಂದಿಗೆ ಜನರು ಒಂದಾಗುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಈಗ ವೋಕಲ್ ಫಾರ್ ಲೋಕಲ್ ಮತ್ತು ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸುತ್ತಿದ್ದಾನೆ. ಆತ್ಮನಿರ್ಭರ ಆಗುವ ಪ್ರಯತ್ನದ ಭಾಗವಾಗಿ ಭಾರತವು ಸೆಮಿಕಂಡಕ್ಟರ್ ಪ್ಲಾಂಟ್‌ಗಳನ್ನು ಸ್ಥಾಪಿಸಿದ್ದು, ಉತ್ಪಾದನೆ ಈಗಾಗಲೇ ಪ್ರಾರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ನಮ್ಮ ಸರ್ಕಾರವು 25 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ. ಕಳೆದ 12 ವರ್ಷಗಳಲ್ಲಿ ದೇಶವು ತನ್ನ ಅಭಿವೃದ್ಧಿಯನ್ನು ವೇಗಗೊಳಿಸಿದೆ ಎಂದು ಅವರು ಹೇಳಿದರು. ಅಭಿವೃದ್ಧಿಯತ್ತ ಸಂಕಲ್ಪದೊಂದಿಗೆ ಸಾಗುತ್ತಿರುವ 140 ಕೋಟಿ ಭಾರತೀಯರನ್ನು ತಡೆಯುವುದು ಈಗ ಅಸಾಧ್ಯ. ಇಂದು ಭಾರತವು ಅತ್ಯಂತ ದೊಡ್ಡ ಕನಸನ್ನು ಕಂಡಿದೆ. ಹೊಸ ಎತ್ತರವನ್ನು ತಲುಪುವ ಗುರಿಯೊಂದಿಗೆ, ಬಲವಾದ ಸಂಕಲ್ಪದೊಂದಿಗೆ ಈ ಕನಸನ್ನು ಕಾಣಲಾಗಿದೆ. ಆ ಕನಸೆಂದರೆ 2047ರ ವೇಳೆಗೆ, ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲಿದ್ದೇವೆ ಎಂದರು.


Click it and Unblock the Notifications
