ಡಿಸೆಂಬರ್ 10: ಲೋಕ ಸಭೆಯಲ್ಲಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ ಮಂಡನೆ
ನವದೆಹಲಿ, ಡಿಸೆಂಬರ್ 10: ಇಂದು ಲೋಕ ಸಭೆಯಲ್ಲಿ ದೆಹಲಿ ವಿಶೇಷ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಮಂಡನೆ ಆಗುವ ಸಾಧ್ಯತೆ ಇದೆ. ರಾಜ್ಯ ಸಭೆಯಲ್ಲಿ ಇಂದು ಯಾವುದೇ ಮಸೂದೆಗಳು ಮಂಡನೆ ಆಗುವ ಸಾಧ್ಯತೆ ಇಲ್ಲ.
ಭಾರತೀಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ಸಿಂಗ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿ ಜನರಲ್ ಬಿಪಿನ್ ರಾವತ್ ಮತ್ತು ಇತರ 12 ಮಂದಿ ಸಾವನ್ನಪ್ಪಿದ ಘಟನೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದರು.
ಲೋಕ ಸಭೆ ಹಾಗೂ ರಾಜ್ಯಸಭೆಯಲ್ಲಿ ಬಿಪಿನ್ ಸಿಂಗ್ ರಾವತ್ ಹಾಗೂ ಮಡಿದ ಎಲ್ಲಾ ಅಧಿಕಾರಿಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಗಿದೆ. ಲೋಕಸಭೆಯಲ್ಲಿ ನ್ಯಾಯಾಧೀಶರ ವೇತನಕ್ಕೆ ಸಂಬಂಧಿಸಿದ ಮಸೂದೆಯು ಅಂಗೀಕಾರವಾಗಿದೆ. ರಾಜ್ಯಸಭೆಯಲ್ಲಿ ಎಆರ್‌ಟಿ ಮಸೂದೆಯನ್ನು ಅಂಗೀಕಾರ ಮಾಡಲಾಗಿದೆ.

ಲೋಕಸಭೆಯಲ್ಲಿ ಇಂದು ಏನು ನಡೆಯಲಿದೆ?
ರಾಷ್ಟ್ರಪತಿಗಳು ಘೋಷಿಸಿದ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಸುಗ್ರೀವಾಜ್ಞೆ, 2021 (2021 ರ 10) ಅನ್ನು ಮಂಡನೆ ಮಾಡಲಾಗುತ್ತದೆ. ಈ ಮಸೂದೆಯನ್ನು ವಿರೋಧ ಪಕ್ಷದ ಕೆಲವು ನಾಯಕರುಗಳು ಅಂಗೀಕಾರ ಮಾಡಬಹುದು. ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ, 1946 (ತಿದ್ದುಪಡಿ) ಮಸೂದೆಯನ್ನು ಡಾ. ಜಿತೇಂದ್ರ ಸಿಂಗ್ ಮಂಡನೆ ಮಾಡಲಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ಏನು ನಡೆಯಲಿದೆ?
ರಾಜ್ಯ ಸಭೆಯಲ್ಲಿ ಇಂದು ಯಾವುದೇ ಮಸೂದೆಗಳು ಮಂಡನೆ ಆಗುವುದಿಲ್ಲ ಹಾಗೂ ಅಂಗೀಕಾರವೂ ಆಗುವುದಿಲ್ಲ. ಜನಸಂಖ್ಯೆ ಮತ್ತು ಕುಟುಂಬ ಯೋಜನೆಗೆ ಸಂಬಂಧಿಸಿದ ಹಲವಾರು ನಿರ್ಣಯಗಳನ್ನು ಮಾತ್ರ ಅಂಗೀಕಾರ ಮಾಡಲಾಗುತ್ತದೆ.
ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಗುರುವಾರ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಮಧುಲಿಕಾ ರಾವತ್ ಹಾಗೂ ಅಗಲಿದ ಒಟ್ಟು 13 ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿರೋಧ ಪಕ್ಷದ ನಾಯಕರು 12 ಮಂದಿ ರಾಜ್ಯಸಭಾ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇಂದು ಬಿಪಿನ್ ರಾವತ್ ಅವರ ನಿಧನದಿಂದಾಗಿ ಒಂದು ದಿನ ಪ್ರತಿಭಟನೆಯನ್ನು ಕೈಬಿಟ್ಟಿದ್ದರು.
ಘಟನೆಯ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಅತ್ಯಂತ ಭಾರವಾದ ಹೃದಯದಿಂದ ನಿನ್ನೆ ಸಂಭವಿಸಿದ ಮಿಲಿಟರಿ ಹೆಲಿಕಾಪ್ಟರ್ ದುರಂತದ ಸುದ್ದಿಯ ವಿವರವನ್ನು ಸದನದ ಮುಂದಿಡುತ್ತಿದ್ದೇನೆ. ಜನರಲ್ ಬಿಪಿನ್ ರಾವತ್ ಅವರು ತಮಿಳು ನಾಡಿನ ವೆಲ್ಲಿಂಗ್ಟನ್ ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಭಾರತೀಯ ವಾಯುಪಡೆಯ ಮಿ 17 ವಿ 5 ಹೆಲಿಕಾಪ್ಟರ್ ಸೂಲೂರ್ ವಾಯುನೆಲೆಯಿಂದ ನಿನ್ನೆ ಬೆಳಗ್ಗೆ 11.48ಕ್ಕೆ ಟೇಕ್ ಆಫ್ ಆಯಿತು. ವೆಲ್ಲಿಂಗ್ಟನ್ ನಲ್ಲಿ ಮಧ್ಯಾಹ್ನ 12.15ಕ್ಕೆ ಲ್ಯಾಂಡ್ ಆಗಬೇಕಾಗಿತ್ತು. ಸೂಲೂರ್ ವಾಯುನೆಲೆಯ ವಾಯುಸಂಚಾರ ನಿಯಂತ್ರಣ ಕೇಂದ್ರ ನಿನ್ನೆ ಮಧ್ಯಾಹ್ನ 12.8ಕ್ಕೆ ಸಂಪರ್ಕ ಕಳೆದುಕೊಂಡಿತು," ಎಂದು ತಿಳಿಸಿದ್ದಾರೆ. ಹಾಗೆಯೇ ಆ ಹೆಲಿಕಾಪ್ಟರ್‌ನಲ್ಲಿ ಇದ್ದವರ ಹೆಸರುಗಳನ್ನು ಕೂಡ ತಿಳಿಸಿದ್ದಾರೆ.
ಈ ಪೈಕಿ ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಆರೊಗ್ಯ ಸ್ಥಿತಿಯು ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಕೂಡಾ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ತಮ್ಮ ಮಗನ ಆರೋಗ್ಯ ಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ತಂದೆ ನಿವೃತ್ತ ಕರ್ನಲ್ ಕೆಪಿ ಸಿಂಗ್, "ಅದರ ಬಗ್ಗೆ ನಾನು ಏನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ, ನನಗೆ ಭರವಸೆ ಇಲ್ಲ. ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿದೆ ನಿಜ, ಆದರೆ ಸ್ಥಿರವಾಗಿದೆ," ಎಂದಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications