Haryana: ಹರಿಯಾಣ ಸೋಲಿನ ಬೆನ್ನಲ್ಲೇ ಪ್ರತಿ ಬೂತ್‌ನಿಂದ ವರದಿ ಕೇಳಿದ ಕಾಂಗ್ರೆಸ್
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್, ಮತದಾನದ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದೆ. ಈ ಹಿನ್ನೆಲೆ ಹರಿಯಾಣದ ಪ್ರತಿ ಬೂತ್‌ನಿಂದಲೂ ವರದಿ ಸಂಗ್ರಹಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಕಾಂಗ್ರೆಸ್ ಪಕ್ಷ ವಿಶ್ಲೇಷಿಸುತ್ತಿದೆ. ಅಲ್ಲಿನ ಸೋಲಿಗೆ ಕಾರಣವೇನು ಎಂಬುದನ್ನು ನಿರ್ಧರಿಸಲು ಪ್ರತಿ ಬೂತ್‌ನಿಂದ ವರದಿಯನ್ನು ಕೇಳಿದೆ ಎಂದು ಖರ್ಗೆ ಹೇಳಿದ್ದಾರೆ.

ಹರಿಯಾಣದಲ್ಲಿ ಕಾಂಗ್ರೆಸ್ ಸೋಲಾಗಿರುವ ಬಗ್ಗೆ ನಾವು ವಿಶ್ಲೇಷಣೆ ಮಾಡುತ್ತಿದ್ದೇವೆ. ಈ ವಿಚಾರ ಕುರಿತಾಗಿ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಇತರ ನಾಯಕರೊಂದಿಗೆ ಈಗಾಗಲೇ ಸಭೆ ನಡೆಸಿದ್ದೇನೆ. ಸೋಲಿಗೆ ಕಾರಣಗಳನ್ನು ಪತ್ತೆ ಹಚ್ಚಲು ಎಲ್ಲ ಬೂತ್‌ಗಳಿಂದ ವರದಿ ಸಂಗ್ರಹಿಸುತ್ತಿದ್ದೇವೆ ಎಂದಿದ್ದಾರೆ.
ಹರಿಯಾಣದಲ್ಲಿ ನಮ್ಮ ಕಾರ್ಯಕರ್ತರಿಂದ ಎಷ್ಟು ತಪ್ಪಾಗಿದೆ? ಇದರಲ್ಲಿ ನಮ್ಮ ನಾಯಕರ ಪಾತ್ರವೇನು? ಹೇಗೆ ಸೋಲಾಯಿತು? ಎಂಬ ಹಿನ್ನೆಲೆಯಲ್ಲಿ ಬೂತ್‌ವಾರು ವರದಿ ಪಡೆಯುತ್ತಿದ್ದೇವೆ. ಅದರ ಆಧಾರದ ಮೇಲೆ ನಾವು ಚರ್ಚಿಸಿ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದರು. ಹರಿಯಾಣ ವಿಧಾನಸಭೆ ಚುನಾವಣೆಯ ಅನಿರೀಕ್ಷಿತ ಫಲಿತಾಂಶದ ಬಗ್ಗೆ ನಮ್ಮ ಕಾಂಗ್ರೆಸ್ ಪಕ್ಷ ಅವಲೋಕನ ಮಾಡಲಿದೆ ಎಂದು ರಾಹುಲ್ ಹೇಳಿದ್ದರು. ನಾವು ಹರಿಯಾಣದ ಅನಿರೀಕ್ಷಿತ ಫಲಿತಾಂಶದ ಬಗ್ಗೆ ಅವಲೋಕನ ನಡೆಸುತ್ತೇವೆ. ಅಲ್ಲಿ ವಿವಿಧ ಕ್ಷೇತ್ರಗಳಿಂದ ದೂರುಗಳು ಬಂದಿದ್ದು, ಇದರ ಬಗ್ಗೆಯೂ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುತ್ತೇವೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಹರಿಯಾಣದ ಜನರ ಬೆಂಬಲಕ್ಕೆ ಹಾಗೂ ಬಿಡುವಿಲ್ಲದೆ ಪಕ್ಷಕ್ಕಾಗಿ ದುಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದಗಳನ್ನೂ ರಾಹುಲ್ ಹೇಳಿದ್ದರು. ನಾವು ಎಂದಿನಂತೆ ದೇಶದ ಜನರ ಹಕ್ಕುಗಳು, ಸತ್ಯಕ್ಕಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುತ್ತೇವೆ ಎಂದಿದ್ದರು.
ಮೊದಲಿಗೆ ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ಹರಿಯಾಣದಲ್ಲಿ ಕಾಂಗ್ರೆಸ್ ಗದ್ದುಗೆಯೇರುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದವು. ಅದರಂತೆ ಮತ ಎಣಿಕೆ ಆರಂಭದಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಬರೋಬ್ಬರಿ 90 ಸದಸ್ಯ ಬಲದ ಹರಿಯಾಣ ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಇನ್ನೇನು ಕಾಂಗ್ರೆಸ್ ಗೆಲ್ಲುವುದು ಖಚಿತ ಎನ್ನುವಷ್ಟರಲ್ಲಿ ಅಂಕಿಗಳು ತಲೆಕೆಳಗಾಗಿದ್ದವು. ಅಂತಿಮವಾಗಿ ಹರಿಯಾಣದಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಗೆದ್ದು ಬೀಗಿತು. ಕಾಂಗ್ರೆಸ್ ಕೇವಲ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಮತ್ತೊಂದೆಡೆ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಿಜೆಪಿ ನೂತನ ಸರ್ಕಾರ ರಚನೆಗೆ ಭರದ ಸಿದ್ಧತೆ ನಡೆಸುತ್ತಿದೆ. ಇದೇ ಅಕ್ಟೋಬರ್ 15ರಂದು ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಕಾರ್ಯಕ್ರಮ ನೆರವೇರಲಿದೆ.
ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈಗಾಗಲೇ ಸೈನಿ ಅವರು ದೆಹಲಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಪ್ರಮಾಣವಚನದಲ್ಲಿ ಮೋದಿ ಕೂಡ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications