IMD Weather Forecast: ಮುಂದಿನ ನಾಲ್ಕೈದು ದಿನ ಈ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಇದೀಗ ರಣಬಿಸಿಲು ಮುಂದುವರೆದಿದೆ. ಈ ನಡುವೆಯೇ ಹಲವೆಡೆ ಮಳೆಯಾಗುತ್ತಿದೆ. ಹಾಗೆಯೇ ಮುಂದಿನ ನಾಲ್ಕೈದು ದಿನಗಳ ಕಾಲ ಈ ಭಾಗಗಳಲ್ಲಿ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಹಲವು ದಿನಗಳ ಕಾಲ ಒಡಿಶಾದಾದ್ಯಂತ ತೀವ್ರ ಶಾಖದ ಅಲೆಯ ಪರಿಸ್ಥಿತಿ ಮುಂದುವರೆಯಲಿದೆ. ಅಲ್ಲದೆ, ಜಾರ್ಖಂಡ್, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತು ಉತ್ತರ ತೆಲಂಗಾಣ ಸೇರಿದಂತೆ ಹಲವೆಡೆ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ಎಚ್ಚರಿಕೆ ಸಂದೇಶವನ್ನು ಹವಾಮಾನ ಇಲಾಖೆ ರವಾನಿಸಿದೆ. ಈ ನಡುವೆಯೂ ಮುಂದಿನ ಹಲವೆಡೆ ಮಳೆಯಾಗಲಿದೆ ಅಂತಲೂ ತಿಳಿಸಿದೆ.

ಈಗಾಗಲೇ ಹಲವು ರಾಜ್ಯಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗುತ್ತಲೇ ಇದೆ. ಒಡಿಶಾದ ಜಾರ್ಸುಗುಡದಲ್ಲಿ ಗರಿಷ್ಠ 41.8°C ತಾಪಮಾನ ದಾಖಲಾಗಿದೆ. ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ತಾಪಮಾನದಲ್ಲಿ ಸ್ವಲ್ಪ ಇಳಿಕೆ ಕಂಡುಬಹುದು. ಆದರೆ ನಂತರ ಮತ್ತೆ ಮುಂದಿನ ದಿನಗಳಲ್ಲಿ ಕ್ರಮೇಣ ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಗುಡುಗು ಸಹಿತ ಮಳೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಅಲ್ಲದೆ, ಮುಂದಿನ ನಾಲ್ಕೈದು ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ ಸೇರಿದಂತೆ ಈಶಾನ್ಯ ಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರುತದ ಪರಿಚಲನೆ ಹಿನ್ನೆಲೆ ಇಂದು ಈಶಾನ್ಯ ರಾಜಸ್ಥಾನ, ಈಶಾನ್ಯ ಅಸ್ಸಾಂನಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ, ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ನಂತರ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಈ ವೇಳೆ ನವದೆಹಲಿಯಲ್ಲಿ ಗಾಳಿಯ ವೇಗ ಗಂಟೆಗೆ 25-35 ಕಿಲೋ ಮೀಟರ್ ತಲುಪಲಿದೆ ಎಂದು ತಿಳಿಸಿದೆ.
ನವದೆಹಲಿ ಹವಾಮಾನ ಮುನ್ಸೂಚನೆ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾರ್ಚ್ 16ರಿಂದ 18ರ ವರೆಗೆ ನವದೆಹಲಿಯಲ್ಲಿ ಹವಾಮಾನದಲ್ಲಿ ಏರಿಳಿತಗಳಾಗುವ ಸಾಧ್ಯತೆಯಿದೆ. ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಾಪಮಾನದ ವಿವರ: ಮುಂದಿನ ಎರಡು ಮೂರು ದಿನಗಳ ಕಾಲ ವಾಯುವ್ಯ ಭಾರತದಲ್ಲಿ ಗರಿಷ್ಠ ತಾಪಮಾನವು 2-3°Cರಷ್ಟು ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ. ನಂತರ 2-4°Cರಷ್ಟು ಏರಿಕೆಯಾಗಲಿದೆ ಎಂದು ತಿಳಿಸಿದೆ. ಮುಂದಿನ ಎರಡು ದಿನಗಳಲ್ಲಿ ಪೂರ್ವ ಭಾರತದಲ್ಲಿ ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗಲಿದ್ದು, ಮಧ್ಯ ಭಾರತದಲ್ಲಿ ಮುಂದಿನ ದಿನಗಳಲ್ಲಿ ತಾಪಮಾನದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.












Click it and Unblock the Notifications