IMD Weather Forecast: ಈ ಭಾಗಗಳಲ್ಲಿ ಸೆಪ್ಟೆಂಬರ್ 9ರವರೆಗೆ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಮತ್ತೆ ಮುಂಗಾರು ಚುರುಕು ಪಡೆದಿದೆ. ಭಾರೀ ಮಳೆಯಿಂದ ಹಲವೆಡೆ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಇನ್ನು ಈ ಭಾಗಗಳಲ್ಲಿ ಸೆಪ್ಟೆಂಬರ್ 9ರ ವರೆಗೂ ಅಂದರೆ, ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಹಲವು ದಿನಗಳವರೆಗೆ ಹಲವೆಡೆ ಸಾಧಾರಣ ಮಳೆಯಾದ್ರೆ, ಇನ್ನೂ ಕೆಲವೆಡೆ ಬಿರುಗಾಳಿ ಸಹಿತ ಸುನಾಮಿ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ಭಾರೀ ಮಳೆಯಿಂದಾಗಿ ಹಲವೆಡೆ ಜಲಪ್ರಳಯ ಸೃಷ್ಟಿಯಾಗಿ ಪ್ರಾಣಹಾನಿಗಳು ಸಂಭವಿಸಿವೆ. ಅಲ್ಲದೆ, ಜನರು ಮನೆ-ಮಠ ಕೃಷಿ ಭೂಮಿಗಳನ್ನು ಕಳೆದುಕೊಂಡು ಬೀದಿಗೆ ಬಂದಿರುವ ಘಟನೆಗಳು ನಡೆದಿವೆ.

ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಇಂದು (ಸೆಪ್ಟೆಂಬರ್ 4) ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಒಡಿಶಾ ಮತ್ತು ಪಂಜಾಬ್‌ನ ಕೆಲವು ಭಾಗಗಳಿಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಮಳೆ ಹೊಡೆತಕ್ಕೆ ಜನ ತತ್ತರ: ಇನ್ನು ಭಾರೀ ಮಳೆಯಿಂದ ನಿನ್ನೆ (ಸೆಪ್ಟೆಂಬರ್ 3) ಛತ್ತೀಸ್‌ಗಢದ ಬಲರಾಂಪುರ ಪ್ರದೇಶದಲ್ಲಿ ಸಣ್ಣ ಅಣೆಕಟ್ಟಿನ ಒಂದು ಭಾಗ ಕುಸಿದು ಪ್ರವಾಹ ಉಂಟಾಗಿದೆ. ಅಲ್ಲದೆ, ಹರಿಯಾಣದ ಹಲವೆಡೆ ಮನೆಯ ಮೇಲ್ಛಾವಣಿ ಕುಸಿದು ಜನರು ಗಾಯಗೊಂಡಿರುವ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ. ಹಾಗೆಯೇ ಇಂದು (ಸೆಪ್ಟೆಂಬರ್ 4) ಭಾರೀ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ.
ಸೆಪ್ಟೆಂಬರ್ ಪೂರ್ತಿ ಭಾರೀ ಮಳೆ: ಇನ್ನು ಇಂದು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮುಂದುವರೆಯಲಿದ್ದು, ಭೂಕುಸಿತ ಹಾಗೂ ಪ್ರವಾಹದ ವಾತಾವರಣ ನಿರ್ಮಾಣ ಆಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ. ಅದರಲ್ಲೂ ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಅಂತಲೂ ಎಚ್ಚರಿಕೆ ನೀಡಿದೆ.
ನವದೆಹಲಿ ಹವಾಮಾನದ ವಿವರ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರೀ ಮಳೆಯಿಂದ ದೊಡ್ಡ ದೊಡ್ಡ ಅವಾಂತರಗಳು ಸಂಭವಿಸಿವೆ. ಇಂದು ಸಹ ರಣ ಮುಂದುವರೆದಿದ್ದು, ಯಮುನಾ ನದಿ ಭಾಗದ ಹತ್ತಿರದಲ್ಲಿರುವ ನಿವಾಸಿಗಳು ಜೀವವನ್ನು ಕೈಯಲ್ಲಿಡಿದು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನವದೆಹಲಿಯಲ್ಲಿ ಈ ಋತುವಿನ ಒಟ್ಟು ಮಳೆ 1,000 ಮಿ.ಮೀ. ಮೀರಿದೆ. ಕಳೆದ ಕೆಲ ದಿನಗಳಿಂದ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ್ ಸೇರಿದಂತೆ ಎನ್‌ಸಿಆರ್‌ನಾದ್ಯಂತ ನಿರಂತರ ಮಳೆ ಮುಂದುವರೆದಿದೆ. ಪರಿಣಾಮ ಇಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ, ರಸ್ತೆಗಳು ನದಿಯಾಗಿ ಮಾರ್ಪಟ್ಟು ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನು ಭಾರೀ ಮಳೆ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿನ್ನೆ ಬುಧವಾರ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಭಾರೀ ಮಳೆಯಿಂದ ಶಾಲೆಗಳಿಗೆ ರಜೆ ಘೋಷಣೆ: ಭಾರೀ ಮಳೆ ಹಿನ್ನೆಲೆ ಪಂಜಾಬ್‌ನಲ್ಲಿ ಸರ್ಕಾರವು ಸೆಪ್ಟೆಂಬರ್ 7ರ ವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳು, ಕಾಲೇಜುಗಳು ಮತ್ತು ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಿದೆ. ಅಧಿಕಾರಿಗಳು ಹೇಳುವ ಪ್ರಕಾರ, ಪಂಜಾಬ್‌ನಲ್ಲಿ ಆಗಸ್ಟ್‌ನಲ್ಲಿ ರಾಜ್ಯದಲ್ಲಿ 25 ವರ್ಷಗಳಲ್ಲಿ ಕಂಡ ಮಳೆಗಿಂತ ಶೇಕಡ 74ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ, ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ಹಿನ್ನೆಲೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸೆಪ್ಟೆಂಬರ್ 4ರಿಂದ ಸೆಪ್ಟೆಂಬರ್ 6 ರವರೆಗೆ ಚಂಡೀಗಢ, ಪಟಿಯಾ ಮತ್ತು ರೂಪನಗರದಲ್ಲಿನ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ.
ರಾಜಸ್ಥಾನದಲ್ಲಿ ಸಹ ಭಾರೀ ಮಳೆ ಮುಂದುವರೆದಿದೆ. ಪರಿಣಾಮ ಇಲ್ಲಿನ ಕೆಲ ಭಾಗಗಳಲ್ಲಿ ಭೂಕುಸಿತ ಸಂಭವಿಸಿ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 7ಕ್ಕೆ ಏರಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯದ ಕೆಲವೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಸೆಪ್ಟೆಂಬರ್ 7ರ ವರೆಗೆ ಎಲ್ಲಾ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಈ ಭಾಗಗಳಲ್ಲಿ ಪ್ರವಾಹದಲ್ಲಿ ಪ್ರಾಣಹಾನಿ ಸಂಭವಿಸಿವೆ. ಮತ್ತೊಂದೆಡೆ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆ ಕಾರ್ಯ ಮುಂದುವರೆದಿದೆ. ಮುಂದಿನ ದಿನಗಳಲ್ಲೂ ಸಹ ಭಾರೀ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಕಾ ಮುನ್ಸೂಚನೆ ನೀಡಿದೆ.
ಭಾರೀ ಮಳೆಯಿಂದಾಗಿ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಎರಡನೇ ದಿನವೂ ಮುಚ್ಚಲ್ಪಟ್ಟಿತು. ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕಾಶ್ಮೀರದಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವು ಪಟ್ಟಣಗಳು ಮತ್ತು ಹಳ್ಳಿಗಳು ಜಲಾವೃತ ಆಗಿರುವ ಘಟನೆಗಳು ನಡೆದಿವೆ.
ವಾಯುವ್ಯ ಭಾರತದ ಹವಾಮಾನ: ಸೆಪ್ಟೆಂಬರ್ 9 ರವರೆಗೆ ಉತ್ತರಾಖಂಡದ ಅಲ್ಲಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 5ರಿಂದ 7ರ ವರೆಗೆ ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಲ್ಲೀ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಪಶ್ಚಿಮ ಭಾರತದ ಹವಾಮಾನ: ಸೆಪ್ಟೆಂಬರ್ 4 ಮತ್ತು 6ರ ವರೆಗೂ ಗುಜರಾತ್ ಮತ್ತು ಕರಾವಳಿ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಕೊಂಕಣ ಮತ್ತು ಗೋವಾದಲ್ಲಿಯೂ ರಣಭೀಕರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೆಪ್ಟೆಂಬರ್ 5 ರಂದು ಮಧ್ಯಪ್ರದೇಶ ಮತ್ತು ಒಡಿಶಾ, ಸೆಪ್ಟೆಂಬರ್ 6ರಿಂದ ಸಿಕ್ಕಿಂ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದ ಎಂದು ತಿಳಿಸಿದೆ. ಇನ್ನು ಈಶಾನ್ಯ ಭಾರತದ ಹವಾಮಾನವನ್ನು ನೋಡೋದಾದ್ರೆ, ಸೆಪ್ಟೆಂಬರ್ 7 ಮತ್ತು 9ರ ವರೆಗೆ ಅರುಣಾಚಲ ಪ್ರದೇಶ, ಸೆಪ್ಟೆಂಬರ್ 4ರಿಂದ ಮತ್ತು 8ರ ವರೆಗೂ ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ದಕ್ಷಿಣ ಭಾರತದ ಹವಾಮಾನ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ಹಲವು ದಿನಗಳ ಕಾಲ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 4ರ ವರೆಗೆ ತೆಲಂಗಾಣ, ಕೇರಳ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ, ಕರಾವಳಿ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಒಟ್ಟಿನಲ್ಲಿ ನೋಡೋದಾದ್ರೆ, ಈ ಬಾರಿ ಉತ್ತರ ಭಾರತದ ರಾಜ್ಯಗಳಲ್ಲೇ ಅತೀ ಹೆಚ್ಚು ಮಳೆಯಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications