IMD Weather Alert: ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಮಳೆ ಆರ್ಭಟ; ಈ ಭಾಗಗಳಲ್ಲಿ 4 ದಿನ ಭಾರೀ ಮಳೆ: ಐಎಂಡಿ
IMD Weather Alert: ಚಂಡಮಾರುತ ಪ್ರಸರಣ ಪ್ರಭಾವದಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಉತ್ತರ ಮ್ಯಾನ್ಮಾರ್ ಮತ್ತು ಪಕ್ಕದ ಮಿಜೋರಾಂ-ತ್ರಿಪುರಾ ಪ್ರದೇಶಗಳ ಮೇಲೆ, ಸರಾಸರಿ ಸಮುದ್ರ ಮಟ್ಟದಿಂದ 3.1 ರಿಂದ 5.8 ಕಿ.ಮೀ ಎತ್ತರದ ನಡುವೆ ಮೇಲ್ಮ ವಾಯು ಚಂಡಮಾರುತದ ಪರಿಚಲನೆ (upper air cyclonic circulation) ಮುಂದುವರಿದಿದೆ.
ಈಶಾನ್ಯ ಅರೇಬಿಯನ್ ಸಮುದ್ರದಿಂದ ಪಶ್ಚಿಮ-ಮಧ್ಯ ಅರೇಬಿಯನ್ ಸಮುದ್ರದವರೆಗೆ ಇದ್ದ 'ಟ್ರಫ್' (trough) ಈಗ ಪಶ್ಚಿಮ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ, ಸರಾಸರಿ ಸಮುದ್ರ ಮಟ್ಟದಿಂದ 1.5 ರಿಂದ 5.8 ಕಿ.ಮೀ ಎತ್ತರದ ನಡುವೆ ಚಂಡಮಾರುತದ ಪರಿಚಲನೆಯಾಗಿ ಕಂಡುಬರುತ್ತಿದೆ. ಹೀಗಾಗಿ, ಇನ್ನೂ ಮೂರರಿಂದ ನಾಲ್ಕು ದಿನಗಳ ಕಾಲ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಕೇರಳ ಕರಾವಳಿಯ ಆಚೆಗಿನ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ, ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಮೇಲ್ಮ ವಾಯು ಚಂಡಮಾರುತದ ಪರಿಚಲನೆಯು ನೆಲೆಗೊಂಡಿದೆ. ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಕರಾವಳಿಯ ಸಮೀಪ, ಆಗ್ನೇಯ ಅರೇಬಿಯನ್ ಸಮುದ್ರದಿಂದ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದವರೆಗೆ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ವಾಯುಭಾರ ಕುಸಿತದ ಪಟ್ಟಿ (trough) ವ್ಯಾಪಿಸಿದೆ.
ನೈಋತ್ಯ ಬಂಗಾಳ ಕೊಲ್ಲಿ ಮತ್ತು ಅದನ್ನು ಹೊಂದಿಕೊಂಡಿರುವ ಶ್ರೀಲಂಕಾ ಪ್ರದೇಶದ ಮೇಲೆ, ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿ ಮೇಲ್ಮ ವಾಯುಮಂಡಲದಲ್ಲಿ ಚಂಡಮಾರುತದಂತಹ ವಾಯು ಪರಿಚಲನೆ (cyclonic circulation)ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.
ಇನ್ನು ಒಡಿಶಾ, ಬಿಹಾರ, ಜಾರ್ಖಂಡ್, ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ಕೊಂಕಣ ಮತ್ತು ಗೋವಾ, ಮಹಾರಾಷ್ಟ್ರ ಮತ್ತು ಕೇರಳ, ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಮುಂಬರುವ ದಿನಗಳಲ್ಲಿ ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 5 ರಿಂದ 7 ರವರೆಗೆ ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಹೊಸ ಮಳೆಯಾಗುವ ಸಾಧ್ಯತೆ ಇದೆ. ದೆಹಲಿ, ಹರಿಯಾಣ, ಚಂಡೀಗಢ ಮತ್ತು ಉತ್ತರ ಪ್ರದೇಶಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.


Click it and Unblock the Notifications
