India Weather Alert: ಹವಾಮಾನ ವೈಪರೀತ್ಯ ತೀವ್ರ: ಈ ಭಾಗಗಳಲ್ಲಿ ಸೆ.29ರವರೆಗೆ ರಣಮಳೆ
India Rain Forecast: ಮುಂಗಾರು ಮಳೆ ಸುರಿಸುವ ಮಾರುತುಗಳು ಕೆಲವು ಕಡೆಗಳಲ್ಲಿ ಸಕ್ರಿಯವಾಗಿವೆ. ಮತ್ತೆ ಕೆಲವೆಡೆ ದುರ್ಬಲವಾಗಿವೆ. ಇದೀಗ ಹವಾಮಾನ ವೈಪರೀತ್ಯಗಳು ಘಟಿಸಿದ್ದರಿಂದ ಉತ್ತರ, ವಾಯುವ್ಯ ಹಾಗೂ ದಕ್ಷಿಣ ಭಾಗದ ರಾಜ್ಯಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ಜೋರು ಬಿರುಗಾಳಿ ಮಳೆ ಆಗುವ ಲಕ್ಷಣಗಳು ಗೋಚರಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಬಂಗಾಳ ಕೊಲ್ಲಿಯ ಉತ್ತರ ಭಾಗದ ಸಮುದ್ರ ಮೇಲ್ಮೈನಲ್ಲಿ ಕಡಿಮೆ ಒತ್ತಡದ ಪ್ರದೇಶ ಉಂಟಾಗಿದೆ. ಸೆಪ್ಟೆಂಬರ್ 23 ರಂದು ಬೆಳಗ್ಗೆ ವಾಯುವ್ಯ ಬಂಗಾಳ ಕೊಲ್ಲಿ ಮತ್ತು ಪಶ್ಚಿಮ ಬಂಗಾಳ-ಉತ್ತರ ಒಡಿಶಾದ ಪಕ್ಕದ ಕರಾವಳಿ ಪ್ರದೇಶಗಳಲ್ಲಿ ಅದು ನೆಲೆಗೊಂಡಿದೆ. ಈ ಚಂಡಮಾರುತ ಪ್ರಸರಣವು ಸಮುದ್ರ ಮಟ್ಟಕ್ಕಿಂತ 5.8 ಕಿಲೋ ಮೀಟರ್ ಎತ್ತರವರೆಗೆ ವಿಸ್ತರಣೆ ಆಗಿದೆ.

ಸೆಪ್ಟೆಂಬರ್ 25ರ ಹೊತ್ತಿಗೆ ಪೂರ್ವ, ಮಧ್ಯ ಮತ್ತು ಪಕ್ಕದ ಉತ್ತರ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಹೊಸ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ಪಶ್ಚಿಮ-ವಾಯುವ್ಯಕ್ಕೆ ಚಲಿಸಬಹುದೆಂದು ಹೇಳಲಾಗುತ್ತದೆ. ಅದೇ ರೀತಿ ಸೆಪ್ಟೆಂಬರ್ 26 ಸುಮಾರಿಗೆ ದಕ್ಷಿಣ ಒಡಿಶಾ-ಉತ್ತರ ಆಂಧ್ರಪ್ರದೇಶದ ಕರಾವಳಿಯಿಂದ ವಾಯುವ್ಯ ಮತ್ತು ಪಕ್ಕದ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ದುರ್ಬಲಗೊಳ್ಳುವ ನಿರೀಕ್ಷೆ ಇದೆ. ಇದರ ಪ್ರಭಾವ ಒಡಿಶಾ ಹಾಗೂ ಆಂಧ್ರ ಪ್ರದೇಶ ಭಾಗದಲ್ಲಿ ಉಂಟಾಗಲಿದೆ.
ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ಉಂಟಾಗಿದ್ದ ವಾಯು ಚಂಡಮಾರುತ ಪ್ರಸರಣವು ಒಡಿಶಾದಾದ್ಯಂತ ಸಾಗಿ ತೆಲಂಗಾಣದತ್ತ ಸಾಗಲಿದೆ. ಇದು ಸಮುದ್ರ ಮಟ್ಟದಿಂದ 3.1 ಮತ್ತು 5.8 ಕಿ.ಮೀ ನಡುವೆ ವಿಸ್ತರಿಸಿದೆ. ಆಂಧ್ರಪ್ರದೇಶದ ಕರಾವಳಿ ಭಾಗದ ಸಮೀಪ 5 ಕಿ.ಮೀ ಎತ್ತರದಲ್ಲಿ ಮತ್ತೊಂದು ವಾಯು ಚಂಡಮಾರುತದ ಪರಿಚಲನೆ ಇದ್ದು, ಇವೆರಡು ವಿಲೀನಗೊಳ್ಳುವ ಸಂಭವವಿದೆ.
ಎಲ್ಲೆಲ್ಲಿ ಧಾರಾಕಾರ ಮಳೆ ಆಗಲಿದೆ?
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು ಹಾಗೂ ನೆರೆಹೊರೆಗಳಲ್ಲಿ ಹವಾಮಾನ ವೈಪರೀತ್ಯಗಳ ಪ್ರಭಾವ ಹೆಚ್ಚಾಗಿದೆ. ಈ ಕಾರಣದಿಂದಾಗಿ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಆಗಲಿದೆ. ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ನ ಕೆಲವು ಭಾಗಗಳು, ಉತ್ತರ ಪ್ರದೇಶ, ದೆಹಲಿ, ಹಿಮಾಚಲ ಪ್ರದೇಶಗಳಲ್ಲಿ ಮಳೆ ಪ್ರಮಾಣ ತಗ್ಗಿದೆ.
ಮುಂದಿನ 07 ದಿನಗಳ ಪೈಕಿ ಮೊದಲು ಎರಡು ದಿನ (ಸೆ.25ರವರೆಗೆ) ಒಡಿಶಾ, ಛತ್ತಿಸ್‌ಗಢ, ಪಶ್ಚಿಮ ಬಂಗಾಳ, ಜಾರ್ಖಂಡ, ಬಿಹಾರ, ಮಹಾರಾಷ್ಟ್ರ, ನಾಗಾಲ್ಯಾಂಡ್, ಮಣಿಪುರ ಭಾಗಗಳಲ್ಲಿ ಧಾರಾಕಾರ ಮಳೆ ಆಗಲಿದೆ. ನಂತರದ ನಾಲ್ಕು ದಿನಗಳಲ್ಲಿ ಕೊಂಕಣ-ಗೋವಾ, ಮರಾಠವಾಡ, ಮಿಜೋರಾಂ, ಮೇಘಾಲಯ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕದ ಒಳನಾಡು ಜಿಲ್ಲೆಗಳು ಸೇರಿದಂತೆ ಅನೇಕ ಭಾಗಗಳಲ್ಲಿ ಸಾಧರಣದಿಂದ ಭಾರಿ ಮಳೆ, ಒಂದಷ್ಟು ಕಡೆ ಅತ್ಯಧಿಕ ಮಳೆ ಮುಂದುವರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications