India Weather: ದೆಹಲಿಯಲ್ಲಿ ದಟ್ಟ ಮಂಜು: ಕಡಿಮೆ ಗೋಚರತೆ- ದೇಶದ ಈ ಭಾಗಗಳಲ್ಲಿ ಭಾರೀ ಮಳೆ
ದೆಹಲಿಯಲ್ಲಿ ದಟ್ಟವಾದ ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿದ್ದು ವಿಮಾನಗಳು ಮತ್ತು ರೈಲುಗಳ ಸಂಚಾರದ ಮೇಲೆ ಭಾರೀ ಪರಿಣಾಮ ಬೀರಿದೆ. ಜೊತೆಗೆ ದೇಶದ ಹಲವೆಡೆ ಮಳೆ ಎಚ್ಚರಿಕೆಯನ್ನೂ ನೀಡಲಾಗಿದೆ. ಹಾಗಾದರೆ ದೇಶದ ಯಾವ ಭಾಗಗಳಲ್ಲಿ ಮಳೆ, ಮಂಜು, ಬಿಸಿಲು ಮುಂದುವರೆಯಲಿದೆ ಎಂದು ಈಗ ತಿಳಿಯೋಣ.
ಚಳಿಗಾಲ ಕಳೆದು ಬೇಸಿಗೆ ಕಾಲ ಆರಂಭವಾಗುತ್ತಿದೆ. ಆದರೂ ಕೂಡ ಅಲ್ಲಲ್ಲಿ ಮಳೆ ಮಂಜು ಮುಂದುವರೆದಿದೆ. ಫೆಬ್ರವರಿ ಅಂತ್ಯದವರೆಗೂ ಅಲ್ಲಲ್ಲಿ ದಟ್ಟ ಮಂಜು ಮುಂದುವರೆಯಲಿದ್ದು, ಇನ್ನೂ ಹಲವೆಡೆ ಶೀತದ ಅಲೆ, ಒಣಹವೆ ಮುಂದುವರೆಯಲಿದೆ. ಕೆಲವೆಡೆ ಮಳೆಯ ಮುನ್ಸೂಚನೆ ಕೂಡ ಇದೆ.

ಇಂದು (ಜನವರಿ 15) ದೆಹಲಿ ನೋಯ್ಡಾ ಮತ್ತು ಎನ್‌ಸಿಆರ್‌ನ ಹಲವು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿತ್ತು. ಚಳಿ ಮತ್ತು ಶೀತ ಅಲೆಗಳಿಂದಾಗಿ ಗೋಚರತೆ ಬಹುತೇಕ ಶೂನ್ಯಕ್ಕೆ ಇಳಿದಿದೆ. ಇದು ಸಂಚಾರ ವಿಮಾನ ಮತ್ತು ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಗೋಚರತೆ ಕಡಿಮೆ ಆಗಿದ್ದರಿಂದ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ. ಅಲ್ಲದೆ ಹವಾಮಾನ ಇಲಾಖೆ (ಐಎಂಡಿ) ಇಂದು ದಿನವಿಡೀ ಹಗುರ ಮಳೆ ಮತ್ತು ಮೋಡ ಕವಿದ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ.
ದಟ್ಟ ಮಂಜು ಪ್ರಯಾಣದ ಮೇಲೆ ಪರಿಣಾಮ
ಬೆಳಗಿನ ಮಂಜಿನಿಂದಾಗಿ ಪಾಲಂ ಮತ್ತು ಇತರ ಪ್ರದೇಶಗಳಲ್ಲಿ ಗೋಚರತೆ ತುಂಬಾ ಕಡಿಮೆಯಾಗಿದೆ. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಚರತೆ ಶೂನ್ಯವಾಗಿದ್ದರೆ, ಸಫ್ದರ್ಜಂಗ್‌ನಲ್ಲಿ 100 ಮೀಟರ್ ದೂರದವರೆಗೂ ಗೋಚರತೆ ಕಡಿಮೆಯಾಗಿರುವುದು ದಾಖಲಾಗಿದೆ. ಈ ಪರಿಸ್ಥಿತಿಯು ಸಂಚಾರ ಮತ್ತು ವಿಮಾನ ವಿಳಂಬದ ಅಪಾಯವನ್ನು ಹೆಚ್ಚಿಸಿದೆ.
ದೆಹಲಿಯಲ್ಲಿ ಮಳೆ ಮತ್ತು ಶೀತ ಪರಿಸ್ಥಿತಿ
ಬುಧವಾರ ಹಗುರ ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆ ಇದ್ದು, ದಿನವಿಡೀ ಮೋಡ ಕವಿದ ವಾತಾವರಣವಿರಲಿದೆ. ಅಲ್ಲದೆ ಸಂಜೆ ಲಘು ಮಂಜು ಬೀಳುವ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳಲ್ಲಿ ತಾಪಮಾನವು ಕ್ರಮೇಣ 2-3°C ರಷ್ಟು ಹೆಚ್ಚಾಗಬಹುದು ಎಂದು ಐಎಂಡಿ ಹೇಳಿದೆ.
ಉತ್ತರ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಹವಾಮಾನ ಪರಿಸ್ಥಿತಿ
ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ದಟ್ಟವಾದ ಮಂಜಿನ ಎಚ್ಚರಿಕೆ ಇದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಹಗುರ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜನವರಿ 16 ರವರೆಗೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಹವಾಮಾನ ತಂಪಾಗಿರುತ್ತದೆ. ಮಂಜಿನಿಂದ ಕೂಡಿರಲಿದೆ.
ದಟ್ಟವಾದ ಮಂಜು ಆವರಿಸಿರುವ ಜಿಲ್ಲೆಗಳು
ಲಕ್ನೋ, ಕಾನ್ಪುರ, ಗಾಜಿಯಾಬಾದ್, ಮೀರತ್, ಆಗ್ರಾ, ಬರೇಲಿ, ವಾರಣಾಸಿ ಮತ್ತು ಪಕ್ಕದ ಪ್ರದೇಶಗಳಲ್ಲಿ ದಟ್ಟವಾದ ಮಂಜು ಇರಲಿದೆ. ಅಲ್ಲದೆ ಅಲಿಗಢ, ಮಥುರಾ, ಆಗ್ರಾ, ಜೌನ್‌ಪುರ, ಪ್ರಯಾಗ್‌ರಾಜ್‌ನಂತಹ ಪ್ರದೇಶಗಳಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಇನ್ನೂ ದೆಹಲಿಯಲ್ಲಿ ಚಳಿ ಹೆಚ್ಚಾಗಿದ್ದು ನಿರಾಶ್ರಿತರು ರಾತ್ರಿ ಆಶ್ರಯಗಳಲ್ಲಿ ಆಶ್ರಯ ಪಡೆಯುತ್ತಿರುವುದು ಕಂಡುಬಂದಿದೆ. ಸರ್ಕಾರ ಒದಗಿಸಿದ ಕಂಬಳಿಗಳು ಮತ್ತು ಸೌಲಭ್ಯಗಳು ಅವರಿಗೆ ಚಳಿಯಿಂದ ಪರಿಹಾರ ನೀಡಿದೆ.
ಆರ್ದ್ರತೆ ಮತ್ತು ತಾಪಮಾನದ ಮಟ್ಟಗಳು
ಜನವರಿ 14 ರಂದು ದೆಹಲಿಯಲ್ಲಿ ಕನಿಷ್ಠ ತಾಪಮಾನ 8.9°C ಮತ್ತು ಗರಿಷ್ಠ ತಾಪಮಾನ 21.2°C ದಾಖಲಾಗಿತ್ತು. ಗಾಳಿಯಲ್ಲಿನ ಆರ್ದ್ರತೆಯ ಮಟ್ಟವು 59% ರಿಂದ 100% ರ ನಡುವೆ ಇತ್ತು.












Click it and Unblock the Notifications