ಮುಂದಿನ 2-3 ದಿನ ಈ ರಾಜ್ಯಗಳಲ್ಲಿ ಅತ್ಯಧಿಕ ಮಳೆ ಸೂಚನೆ
ನವದೆಹಲಿ, ಜೂನ್ 18: ದೇಶದ ಬಹುಪಾಲು ಭಾಗಗಳಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ಹಲವು ರಾಜ್ಯಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಅತ್ಯಧಿಕ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ನೈಋತ್ಯ ಬಿಹಾರ, ಆಗ್ನೇಯ ಉತ್ತರ ಪ್ರದೇಶ ಹಾಗೂ ದಕ್ಷಿಣ ಬಾಂಗ್ಲಾದೇಶದಲ್ಲಿ ಗಾಳಿಯ ಒತ್ತಡದ ಪ್ರಭಾವದಿಂದ ಅತಿ ಹೆಚ್ಚಿನ ಮಳೆಯಾಗುವುದಾಗಿ ತಿಳಿಸಿದೆ. ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ, ಉತ್ತರ ಪ್ರದೇಶ, ಈಶಾನ್ಯ ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಮುಂದಿನ 3-4 ದಿನಗಳು ಹೆಚ್ಚಿನ ಮಳೆಯಾಗುತ್ತದೆ ಎಂದು ಮುನ್ಸೂಚನೆ ನೀಡಿದೆ.
ಕೊಂಕಣ ಪ್ರದೇಶ, ಗೋವಾ, ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳು, ಗುಜರಾತ್, ಮಧ್ಯ ಮಹಾರಾಷ್ಟ್ರದಲ್ಲಿ ಮುಂದಿನ 2-3 ದಿನಗಳ ಕಾಲ ಅತ್ಯಧಿಕ ಮಳೆಯಾಗುವ ಎಚ್ಚರಿಕೆ ನೀಡಿದೆ. ಶುಕ್ರವಾರ ಗುಜರಾತ್ ಹಾಗೂ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಅತಿ ಹೆಚ್ಚಿನ ಮಳೆಯಾಗುವುದಾಗಿ ಸೂಚನೆ ನೀಡಿ, ರೆಡ್ ಅಲರ್ಟ್ ಘೋಷಣೆ ಮಾಡಿದೆ. ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮುಂದಿನ ಮೂರ್ನಾಲ್ಕು ದಿನಗಳ ಕಾಲ ಉತ್ತರಾಖಂಡ ಹಾಗೂ ಉತ್ತರ ಪ್ರದೇಶದ ಪಶ್ಚಿಮ ಭಾಗ ಹೆಚ್ಚಿನ ಮಳೆ ಪಡೆಯುವುದಾಗಿ ತಿಳಿಸಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಡ, ಬಿಹಾರ, ಜಾರ್ಖಂಡ್‌ನಲ್ಲಿ ಶುಕ್ರವಾರ ಹಾಗೂ ಶನಿವಾರ ಗುಡುಗು ಸಹಿತ ಮಳೆಯಾಗುವುದಾಗಿ ಎಚ್ಚರಿಕೆ ನೀಡಿದೆ.
ವಾಯವ್ಯ ಭಾಗಗಳಲ್ಲಿ ಎರಡು ದಿನಗಳ ನಂತರ ತಾಪಮಾನ ಏರಿಕೆಯಾಗುವುದು ಎಂದು ತಿಳಿಸಿದೆ.












Click it and Unblock the Notifications