ಮುಂದಿನ 4 ದಿನ ಈ ರಾಜ್ಯಗಳಲ್ಲಿ ಅತ್ಯಧಿಕ ಮಳೆ ಸೂಚನೆ
ನವದೆಹಲಿ, ಆಗಸ್ಟ್ 21: ದೇಶದಲ್ಲಿ ಕಳೆದ ಐದಾರು ದಿನಗಳಿಂದ ಮುಂಗಾರು ಮತ್ತೆ ಚುರುಕಾಗಿದ್ದು, ಹಲವು ರಾಜ್ಯಗಳು ಅಧಿಕ ಮಟ್ಟದಲ್ಲಿ ಮಳೆ ಪಡೆಯುತ್ತಿವೆ. ಇನ್ನೂ ಕೆಲವು ದಿನಗಳ ಕಾಲ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬಿಹಾರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಆಗಸ್ಟ್ 25ರವರೆಗೂ ಅತಿ ಹೆಚ್ಚಿನ ಮಳೆಯಾಗುವುದಾಗಿ ತಿಳಿಸಿದೆ.
ಇದೇ ಅವಧಿಯಲ್ಲಿ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಶನಿವಾರ ಹೆಚ್ಚಿನ ಮಳೆಯಾಗಲಿದೆ ಎಂದು ತಿಳಿಸಿದೆ. ದೆಹಲಿಯಲ್ಲಿ ಶುಕ್ರವಾರ ಅಧಿಕ ಮಳೆಯಾಗಿದ್ದು, ಶನಿವಾರ ಹಾಗೂ ಭಾನುವಾರ ಗುಡುಗುಮಿಂಚು ಸಹಿತ ಭಾರೀ ಮಳೆಯಾಗುವುದಾಗಿ ತಿಳಿಸಿದೆ.
ಜುಲೈ ದ್ವಿತೀಯಾರ್ಧದಲ್ಲಿ ಭಾರೀ ಮಳೆಯಾದ ನಂತರ ದೇಶದ ಹಲವು ರಾಜ್ಯಗಳಲ್ಲಿ ಮಳೆ ಚಟುವಟಿಕೆ ಕ್ಷೀಣಿಸಿತ್ತು. ಮಳೆಯಿಂದ ಬಿಡುವು ಪಡೆದುಕೊಂಡಿದ್ದ ಹಲವು ರಾಜ್ಯಗಳಲ್ಲಿ ಮತ್ತೆ ಮಳೆ ಚಟುವಟಿಕೆ ಆರಂಭವಾಗಲಿದೆ ಎಂದು ತಿಳಿಸಿದೆ. ಮುಂದೆ ಓದಿ...

ದೆಹಲಿಯಲ್ಲಿ ಮತ್ತೆ ಆರಂಭವಾದ ಮಳೆ
ದೆಹಲಿಯಲ್ಲಿ ಶುಕ್ರವಾರದಿಂದ ಮತ್ತೆ ಹೆಚ್ಚಿನ ಮಳೆಯಾಗುತ್ತಿದೆ. ಸ್ವಲ್ವ ದಿನಗಳ ಕಾಲ ಬಿಡುವು ಪಡೆದುಕೊಂಡಿದ್ದ ಮಳೆ ಮತ್ತೆ ಆರಂಭವಾಗಿದೆ. ಗುರುಗ್ರಾಮ, ನೊಯ್ಡಾ, ಆಜಾದ್‌ಪುರ, ಕನ್ನೌಟ್‌ನಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಿದೆ. ಶನಿವಾರ ಕೂಡ ರಾಜ್ಯದಲ್ಲಿ ಅಧಿಕ ಮಳೆ ಸೂಚನೆ ನೀಡಲಾಗಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಒಂದೇ ದಿನದಲ್ಲಿ ದೆಹಲಿಯಲ್ಲಿ 138.8 ಎಂಎಂ ಮಳೆಯಾಗಿದ್ದು, ಈ ಅವಧಿಯಲ್ಲಿ ದಾಖಲಾದ ಅತಿ ಹೆಚ್ಚಿನ ದಿನನಿತ್ಯದ ಮಳೆ ಪ್ರಮಾಣ ಇದಾಗಿದೆ. ಭಾರೀ ಮಳೆಯಿಂದಾಗಿ ದೆಹಲಿಯಲ್ಲಿ ಹಲವು ಪ್ರದೇಶಗಳು, ರಸ್ತೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಮುಂದಿನ ನಾಲ್ಕು ದಿನಗಳವರೆಗೂ ಈ ರಾಜ್ಯಗಳಲ್ಲಿ ಅಧಿಕ ಮಳೆ
ಮುಂದಿನ 24 ಗಂಟೆಗಳಲ್ಲಿ ಹಿಮಾಚಲ, ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಗುಡುಗು ಸಹಿತ ತೀವ್ರ ಮಳೆ, ಬಿರುಗಾಳಿ ಸಂಭವಿಸುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ ನಾಲ್ಕು ದಿನಗಳ ಕಾಲ ಉತ್ತರಾಖಂಡ, ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ವಾರಾಂತ್ಯದಲ್ಲಿ ಹರಿಯಾಣ, ಚಂಡೀಗಢ, ಪಂಜಾಬ್, ಪೂರ್ವ ರಾಜಸ್ಥಾನದಲ್ಲಿ ಹೆಚ್ಚಿನ ಮಳೆಯಾಗಲಿದೆ. ಈ ಪ್ರದೇಶಗಳಲ್ಲಿ ಮುಂದಿನ ನಾಲ್ಕೈದು ದಿನಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.

ಚಂಡಮಾರುತ ಪ್ರಭಾವದಿಂದ ಈ ಪ್ರದೇಶಗಳಲ್ಲಿ ಮಳೆ
ಈಶಾನ್ಯ ಮಧ್ಯಪ್ರದೇಶದಲ್ಲಿ ಚಂಡಮಾರುತ ಸೃಷ್ಟಿಯಾಗಿದೆ. ವಿದರ್ಭಾದಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗಲಿದ್ದು, ಮಳೆ ಸಾಧ್ಯತೆ ಅತಿ ಹೆಚ್ಚಾಗಿದೆ ಎಂದು ತಿಳಿಸಿದೆ. ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ಶನಿವಾರ ವ್ಯಾಪಕ ಮಳೆಯಾಗಲಿದೆ. ಮಧ್ಯಪ್ರದೇಶದಲ್ಲಿ ಭಾನುವಾರ ಅಧಿಕ ಮಳೆಯಾಗಿ, ನಂತರ ಈ ಪ್ರದೇಶಗಳಲ್ಲಿ ಮಳೆ ತಗ್ಗಲಿದೆ ಎಂದು ತಿಳಿಸಿದೆ.
ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಆಗಸ್ಟ್ 23-24ರಂದು ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಅತ್ಯಧಿಕ ಮಳೆಯಾಗಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯದಲ್ಲಿ ಆಗಸ್ಟ್ 23ರಂದು, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರಾದಲ್ಲಿ ಕೂಡ ಮಳೆಯಾಗಲಿದೆ ಎಂದು ತಿಳಿಸಿದೆ.
ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಮಳೆ
ದಕ್ಷಿಣ ಭಾರತದಲ್ಲಿ ಮುಂದಿನ ಐದು ದಿನಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ 23ರವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ಆಗಸ್ಟ್ 22ರಂದು ಕೇರಳ ಹಾಗೂ ಮಾಹೆ, ಆಗಸ್ಟ್ 23, 24ರಂದು ರಾಯಲ್ ಸೀಮೆ ಹಾಗೂ ಆಗಸ್ಟ್ 21ರಂದು ಆಂಧ್ರದ ಕರಾವಳಿ ಪ್ರದೇಶ, ಯಾನಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಈ ಅವಧಿಯಲ್ಲಿ ಕರ್ನಾಟಕದಲ್ಲಿಯೂ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಆಗಸ್ಟ್ 24ರ ವರೆಗೆ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದ್ದು, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ. ಉತ್ತರ ಒಳನಾಡಿನಲ್ಲಿ ಇನ್ನೆರಡು ದಿನ ಚದುರಿದಂತೆ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.











Click it and Unblock the Notifications