IMD Weather Forecast: ಈ ಭಾಗಗಳಲ್ಲಿ 05 ದಿನ ತೀವ್ರ ಚಳಿ, ದಟ್ಟ ಮಂಜು ಮುನ್ಸೂಚನೆ
ನವದೆಹಲಿ: ದೇಶಾದ್ಯಂತ ತೀವ್ರ ಚಳಿ ವಾತಾವರಣ, ದಟ್ಟ ಮಂಜಿನ ಸ್ವರೂಪ ಬದಲಾಗಿಲ್ಲ. ಬಹುತೇಕ ಭಾಗಗಳಲ್ಲಿ ಶೀತ ಅಲೆ, ಚಳಿ ವಾತಾವರಣ ಮುಂದುವರಿದಿದೆ. ಕಾಶ್ಮೀರ ಮತ್ತಿತರ ಕಣಿವೆ ರಾಜ್ಯಗಳಲ್ಲಿ ತುಂತುರು ಮಳೆ ಮರೆಯಾಗಿದ್ದು, ಹಲವೆಡೆ ಹಿಮಪಾತ ಬೀಳುವ ಮುನ್ಸೂಚನೆ ನೀಡಲಾಗಿದೆ. ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಚಳಿ, ದಟ್ಟ ಮಂಜು ಹಾಗೂ ಶೀತ ಅಲೆ ಕಂಡು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ದೆಹಲಿಯಲ್ಲಿ ಚಳಿ ಹೆಚ್ಚಾಗಿದ್ದು, ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಈ ಮಹಾನಗರ ಸೇರಿದಂತೆ ಛತ್ತೀಸ್‌ಗಢ, ಪೂರ್ವ ರಾಜಸ್ಥಾನ, ಹರಿಯಾಣ, ಚಂಡೀಗಢ, ಪಂಜಾಬ್ ಹಾಗೂ ಜಾರ್ಖಂಡ್ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಚಳಿ ಹೆಚ್ಚಾಗಲಿದೆ. ಬೆಳಗ್ಗೆ ಅಧಿಕ ಮಂಜಿನ ವಾತಾವರಣ ಕಂಡು ಬರಲಿದೆ. ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳ-ಸಿಕ್ಕಿಂ ಪ್ರದೇಶಗಳಲ್ಲಿ ಮಧ್ಯಾಹ್ನದಲ್ಲೂ ಹೆಚ್ಚಿನ ಚಳಿ ಅನುಭವವಾಗಲಿದೆ. ಹೀಗಾಗಿ ಈ ಭಾಗಗಳಿಗೆ ಐದು ದಿನ ಶೀತ ಅಲೆಯ ಎಚ್ಚರಿಕೆ ನೀಡಲಾಗಿದೆ.

ದಟ್ಟ ಮಂಜು ಹಾಗೂ ತೀವ್ರ ಶೀತದ ಅಲೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಮೈಕೊರೆವ ಚಳಿಗೆ ಜನರು ತತ್ತರಿಸಿದ್ದಾರೆ. ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ರಾಜ್ಯಗಳ ಹಲವೆಡೆ ಹೆಚ್ಚು ಚಳಿ ಸೃಷ್ಟಿಯಾಗಲಿದೆ. ಈ ಭಾಗಗಳಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆ ಇದೆ.
ದಕ್ಷಿಣ ರಾಜ್ಯಗಳಲ್ಲಿ ಚಳಿ ಏರಿಕೆ ಸಾಧ್ಯತೆ
ದಕ್ಷಿಣ ರಾಜ್ಯಗಳ ಹೊರತಾಗಿ ಉತ್ತರ ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಚಳಿಯ ಪ್ರಭಾವ ಹೆಚ್ಚಿರಲಿದೆ. ದೆಹಲಿ, ಜಾರ್ಖಂಡ್, ಪಂಜಾಬ್, ಉತ್ತರ ಪ್ರದೇಶ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಭಾರೀ ಇಳಿಕೆ ಆಗಲಿದೆ. ಇದರಿಂದ ತೀವ್ರ ಮಂಜು ಕವಿಯಲಿದ್ದು, ಬೆಳಗ್ಗೆ ಚಳಿ ಬಾಧಿಸಲಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಓಡಿಶಾ ಭಾಗದಲ್ಲಿ ಚಳಿಗಾಲದಲ್ಲಿ ಸಾಮಾನ್ಯ ಮತ್ತು ವಾಡಿಕೆಯಷ್ಟು ಚಳಿ ದಾಖಲಾಗಿದೆ. ಹವಾಮಾನದಲ್ಲಿ ತೀವ್ರ ಬದಲಾವಣೆಗಳು ಉಂಟಾದಲ್ಲಿ ದಕ್ಷಿಣ ರಾಜ್ಯಗಳಲ್ಲೂ ಮತ್ತೊಮ್ಮೆ ಮೈಕೊರೆವ ಚಳಿ ವಾತಾವರಣ ಸೃಷ್ಟಿಯಾಗುವ ನಿರೀಕ್ಷೆ ಇದೆ. ಇದರ ಹೊರತು ಸದ್ಯಕ್ಕೆ ಗಂಭೀರ ಸ್ವರೂಪದ ಮುನ್ಸೂಚನೆಗಳು ಇ ಭಾಗಕ್ಕೆ ಇಲ್ಲ ಎಂದು ಐಎಂಡಿ ತಿಳಿಸಿದೆ.
ಹವಾಮಾನ ಬದಲಾವಣೆ, ವೈಪರಿತ್ಯಗಳ ಅಪ್ಡೇಟ್
ಶ್ರೀಲಂಕಾ ಕರಾವಳಿ ಭಾಗ, ಬಂಗಾಳಕೊಲ್ಲಿಯ ದಕ್ಷಿಣ ಭಾಗಗಳು, ಮನ್ನಾರ್ ಕೊಲ್ಲಿ ಹಾಗೂ ಕೊಮೋರಿನ್ ಪ್ರದೇಶಗಳಲ್ಲಿ ಗಂಟೆಗೆ ಗಾಳಿಯ ವೇಗ ಹೆಚ್ಚಾಗಿದೆ. ಪ್ರತಿ ಗಂಟೆಗೆ 35-45 ಕಿಲೋ ಮಿಟರ್ ವೇಗದಲ್ಲಿ ಕೆಲವೊಮ್ಮೆ 55 ಕಿಮೀ ವೇಗ ಬೀಸುತ್ತಿದೆ. ತೇವ ಭರಿತ ಗಾಳಿಯಿಂದ ಈ ಭಾಗದಲ್ಲಿ ಚಳಿ ಹೆಚ್ಚಾಗಿದೆ. ಸೋಮಾಲಿಯಾ ಕರಾವಳಿ ಮತ್ತು ಸಮೀಪದ ಸಮುದ್ರ ಪ್ರದೇಶಗಳಲ್ಲಿ 45-55 ಕಿ.ಮೀ ವೇಗದಲ್ಲಿ ಕೆಲವೊಮ್ಮೆ 65 ಕಿ.ಮೀ ವೇಗದಲ್ಲಿ ಬೀಸುವ ಬಿರುಗಾಳಿ ಸೃಷ್ಟಿಯಾಗಿದೆ. ಈ ಬದಲಾವಣೆಯಿಂದ ದಕ್ಷಿಣ ಭಾಗದ ರಾಜ್ಯಗಳ ಮೇಲೆ ಅಷ್ಟೇನು ಪರಿಣಾಮ ಉಂಟಾಗಲ್ಲ ಎಂದು ಹೇಳಲಾಗಿದೆ.












Click it and Unblock the Notifications