ರಾಜ್ಯದ ಅಡಿಕೆ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಭರವಸೆ
Arecanut Growers: ಅಕ್ರಮ ಅಡಿಕೆ ಆಮದಿನಿಂದ ದೇಶದ ಅಡಿಕೆ ಬೆಳೆಗಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇಡಲಾಗಿದ್ದ ಪ್ರಸ್ತಾವನೆಗೆ ಕೆಂದ್ರ ಸರ್ಕಾರ ಸ್ಪಂದಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶೀಯ ಮಾರುಕಟ್ಟೆಯಲ್ಲಿ ಅಕ್ರಮ ಅಡಿಕೆ ಆಮದಿನಿಂದಾಗಿ ದೇಶದ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯದ ಪ್ರಮುಖ ಜನಪ್ರತಿನಿಧಿಗಳು ಹಾಗೂ ಅಡಿಕೆ ನಿಯೋಗವು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಯಾರೆಲ್ಲಾ ಅಮಿತ್ ಶಾ ಭೇಟಿಯಾಗಿದ್ದರು?
ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ತೆರಳಿದ್ದ ಈ ನಿಯೋಗದಲ್ಲಿ ಬಿಜೆಪಿ ಸಂಸದರಾದ ಬಿ.ವೈ.ರಾಘವೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಹಾಗೂ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಸತೀಶ್ ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಸೇರಿದಂತೆ ಕರ್ನಾಟಕ ಹಾಗೂ ಇತರ ಅಡಿಕೆ ಬೆಳೆಯುವ ರಾಜ್ಯಗಳ ಪ್ರಮುಖ ಪ್ರತಿನಿಧಿಗಳು ಹಾಜರಿದ್ದರು.
ಅಡಿಕೆ ಬೆಳೆಗಾರರ ಪ್ರಮುಖ ಮನವಿಗಳು
* ವಿದೇಶಗಳಿಂದ ಗಡಿಗಳು, ಬಂದರುಗಳು ಮತ್ತು ವಿವಿಧ ರಹಸ್ಯ ಮಾರ್ಗಗಳ ಮೂಲಕ ಅಕ್ರಮವಾಗಿ ದೇಶದೊಳಗೆ ತರಲಾಗುತ್ತಿರುವ ಅಡಿಕೆ ಹಾಗೂ ವ್ಯಾಪಾರದ ದಾಖಲೆಗಳಲ್ಲಿನ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
* ರೋಗಬಾಧೆ, ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ಹಾಗೂ ಉತ್ಪಾದಕತೆಯ ಕುಸಿತದಿಂದ ಕಂಗಾಲಾಗಿರುವ ಲಕ್ಷಾಂತರ ಅಡಿಕೆ ಬೆಳೆಗಾರರ ಕುಟುಂಬಗಳಿಗೆ ಈ ಅಕ್ರಮ ಆಮದು ವ್ಯಾಪಾರವು ಇನ್ನಷ್ಟು ಕಂಟಕವಾಗಿ ಪರಿಣಮಿಸಿದೆ.
* ಸುಂಕ ವಿನಾಯಿತಿ ಪಡೆಯಲು ಬೇರೆ ದೇಶದ ಸರಕುಗಳೆಂದು ಸುಳ್ಳು ದಾಖಲೆ ಸೃಷ್ಟಿಸಿ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಐಟಿಸಿ 2008-1991ರ ಅಡಿಯಲ್ಲಿ 'ಒಣಹಣ್ಣುಗಳು ಮತ್ತು ಬೀಜಗಳು' ಎಂದು ಘೋಷಿಸಿ ತರಲಾಗುವ ಸರಕುಗಳ ಬಗ್ಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು.
* ಪ್ರತಿ ಕೆ.ಜಿ.ಗೆ 351 ರೂಪಾಯಿ ಕನಿಷ್ಠ ಆಮದು ಬೆಲೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೂ ಅದರ ರಕ್ಷಣೆ ಸರಿಯಾಗಿ ಸಿಗುತ್ತಿಲ್ಲ. ಆಮದು ಮಾಡಿಕೊಳ್ಳುವ ಸರಕಿನ ಘೋಷಿತ ಮೌಲ್ಯ ಹಾಗೂ ಮೂಲ ದೇಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಡಿಕೆ ಬೆಳೆಗಾರರ ಮನವಿಗೆ ಸ್ಪಂದಿಸಿದ ಕೇಂದ್ರ
ಅಲ್ಲದೆ, ದೇಶೀಯ ಮಾರುಕಟ್ಟೆಯನ್ನು ರಕ್ಷಿಸಲು ಪ್ರವೇಶ ಸ್ಥಳಗಳಲ್ಲಿ ಕಣ್ಗಾವಲು ಬಲಪಡಿಸಬೇಕು. ಇದಕ್ಕಾಗಿ ವಾಣಿಜ್ಯ ಮತ್ತು ಕೈಗಾರಿಕೆ, ಹಣಕಾಸು ಹಾಗೂ ಪರೋಕ್ಷ ತೆರಿಗೆಗಳ ಮಂಡಳಿ, ಸಿಬಿಐಸಿ, ಕಸ್ಟಮ್ಸ್ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯಗಳನ್ನು ಒಳಗೊಂಡ ಬಲವಾದ ಜಂಟಿ ಕಾರ್ಯತಂತ್ರ ಮತ್ತು ವ್ಯವಸ್ಥಿತ ನಿಯಮಗಳನ್ನು ರೂಪಿಸಬೇಕೆಂದು ನಿಯೋಗವು ಸಚಿವರಿಗೆ ವಿನಂತಿಸಿದೆ. ಇನ್ನೂ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರವು ತಕ್ಷಣವೇ ಸ್ಪಂದಿಸಿ ಅಗತ್ಯ ಕ್ರಮಗಳನ್ನು ಜಾರಿಗೆ ತರಲಿದೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications
