ಉದ್ಯೋಗ ಬಿಟ್ಟು 40 ಲಕ್ಷ ಸಾಲ ಮಾಡಿ ಶಾಲೆ ತೆರೆದ ಟೆಕ್ಕಿ: ಇದು ಸಾವಿರಾರು ಬಡ ಮಕ್ಕಳ ಬದುಕಲ್ಲಿ ಬೆಳಕಾದ ಕುಶಾಲ್ ಕಥೆ
ಜೀವನ ಎನ್ನುವುದು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ತಿನ್ನವ ಒಂದು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿಯಿದ್ದರೆ ಇನ್ನು ಕೆಲವರು ಸಿಕ್ಕ ಅನ್ನವನ್ನ ಉಣ್ಣದೇ ಬಿಸಾಕುವವರಿದ್ದಾರೆ. ಹಾಗೆಯೇ ಶಿಕ್ಷಣವೂ ಕೂಡ. ಕೆಲವರಿಗೆ ಸುಲಭವಾಗಿ ಸಿಕ್ಕರೆ, ಇನ್ನೂ ಕೆಲವರಿಗೆ ಅದು ಕೇವಲ ಕನಸಾಗಿಯೇ ಉಳಿಯುತ್ತದೆ.
ಇಂತಹ ಸಾವಿರಾರು ಬಡ ಮಕ್ಕಳ ಓದುವ ಕನಸಿಗೆ ನೀರೆರೆದು ಪೋಷಿಸುತ್ತಿರುವ ಸಂಸ್ಥೆಯೇ ಲೋಟಸ್ ಪೆಟಲ್ ಫೌಂಡೇಶನ್. ಹೌದು, ಪ್ರತಿಷ್ಠಿತ ಕಂಪನಿಯಲ್ಲಿದ್ದ ಉನ್ನತ ಹುದ್ದೆಯನ್ನ ಬಿಟ್ಟು, ಸಮಾಜದ ಕಟ್ಟಕಡೆಯ ಮಕ್ಕಳಿಗಾಗಿ ಒಂದು ಶಾಲೆಯನ್ನ ನಿರ್ಮಿಸಿದ ಕುಶಾಲ್ ರಾಜ್ ಚಕ್ರವರ್ತಿ ಅವರ ಸಾಧನೆಯ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿ.

ಕುಶಾಲ್ ರಾಜ್ ಚಕ್ರವರ್ತಿ ಅವರ ಬದುಕು ಬದಲಿಸಿದ ಆ ಒಂದು ಘಟನೆ
ಕುಶಾಲ್ ಅವರು ರಾಂಚಿಯಲ್ಲಿ ಹುಟ್ಟಿ ಬೆಳೆದವರು. ಐಐಎಂ ಲಕ್ನೋದಲ್ಲಿ ಎಂಬಿಎ ಮುಗಿಸಿ, ಎಚ್‌ಸಿಎಲ್ , ಬಿಪಿಎಲ್, ಆಮ್ವೇ ಹಾಗೂ ಐಕಿಯಾದಂತಹ ಜಾಗತಿಕ ಕಂಪನಿಗಳಲ್ಲಿ ದಶಕಗಳ ಕಾಲ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದರು. 2011ರ ನವೆಂಬರ್‌ನ ಚಳಿಗಾಲದಲ್ಲಿ ಒಂದು ದಿನ ಬೆಳಿಗ್ಗೆ ಗುರುಗ್ರಾಮದಲ್ಲಿ ತಮ್ಮ ಮಕ್ಕಳನ್ನ ಶಾಲೆಗೆ ಬಿಡಲು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ, ಕುಶಾಲ್ ಅವರ ಬದುಕಿನ ದಿಕ್ಕೇ ಬದಲಾಯಿತು.
ಕುಶಾಲ್ ಅವರ ಪಕ್ಕದಲ್ಲಿ ಹಾದುಹೋಗುತ್ತಿದ್ದ ಇಬ್ಬರು ಬಡ ಮಕ್ಕಳು ಚಳಿಯಿಂದ ನಡುಗುತ್ತಿದ್ದರು. ಅವರ ಬಳಿ ಸ್ವೆಟರ್ ಇರಲಿಲ್ಲ, ಕಾಲಿಗೆ ಚಪ್ಪಲಿಯೂ ಇರಲಿಲ್ಲ. ಈ ದೃಶ್ಯ ಕುಶಾಲ್ ಅವರನ್ನ ತೀವ್ರವಾಗಿ ಕಾಡಿತು. ನಂತರ ಕುಶಾಲ್ ಆ ಮಕ್ಕಳನ್ನ ಹಿಂಬಾಲಿಸಿಕೊಂಡು ಹೋದರು. ಆಗ ಹತ್ತಿರದ ದೇವಸ್ಥಾನದಲ್ಲಿ ನಡೆಯುತ್ತಿದ್ದ ಶಾಲೆಯಲ್ಲಿ ಇಂತಹ 250ಕ್ಕೂ ಹೆಚ್ಚು ಮಕ್ಕಳಿರುವುದು ಕಂಡುಬಂತು. ತಕ್ಷಣವೇ ಆ ಮಕ್ಕಳಿಗೆ ಶೂ, ಸಾಕ್ಸ್ ಮತ್ತು ಸ್ವೆಟರ್‌ಗಳನ್ನು ಕೊಡಿಸಿದರು. ಆದರೆ, ಕೇವಲ ಬಟ್ಟೆ ಕೊಡುವುದರಿಂದ ಇವರ ಭವಿಷ್ಯ ಬದಲಾಗುವುದಿಲ್ಲ ಎಂಬ ಸತ್ಯ ಅವರಿಗೆ ಅರ್ಥವಾಯಿತು.
ಬಡ ಮಕ್ಕಳ ಶಿಕ್ಷಣಕ್ಕಾಗಿ 'ಲೋಟಸ್ ಪೆಟಲ್ ಫೌಂಡೇಶನ್' ಸ್ಥಾಪನೆ
ಆ ಶಾಲೆಗೆ ಭೇಟಿ ನೀಡಿದಾಗ 3ನೇ ತರಗತಿಯಲ್ಲಿ 12 ವರ್ಷದ ಹಾಗೂ 5ನೇ ತರಗತಿಯಲ್ಲಿ 15 ವರ್ಷದ ಮಕ್ಕಳಿದ್ದರು. ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣದಲ್ಲಿ ಹಿಂದುಳಿದಿದ್ದ ಈ ಮಕ್ಕಳನ್ನ ಮುಖ್ಯವಾಹಿನಿಗೆ ತರಲು ಕುಶಾಲ್ ನಿರ್ಧರಿಸಿದರು. ಇದಕ್ಕಾಗಿ 2013ರಲ್ಲಿ ಬಾಡಿಗೆ ಕೋಣೆಯೊಂದರಲ್ಲಿ ಕೇವಲ 6 ವಿದ್ಯಾರ್ಥಿಗಳೊಂದಿಗೆ ತಮ್ಮದೇ ಉಳಿತಾಯದ ಹಣ ಹಾಗೂ 40 ಲಕ್ಷ ರೂಪಾಯಿ ಸಾಲ ಮಾಡಿ ಲೋಟಸ್ ಪೆಟಲ್ ಫೌಂಡೇಶನ್ ಎಂಬ ಸಂಸ್ಥೆಯನ್ನ ಆರಂಭಿಸಿದರು.
ವಯಸ್ಸಿಗೆ ಮೀರಿದ ತರಗತಿಯಲ್ಲಿದ್ದ ಮಕ್ಕಳಿಗೆ 'ಫಾಸ್ಟ್ ಟ್ರ್ಯಾಕ್'ಕಲಿಕಾ ಮಾದರಿಯನ್ನ ಪರಿಚಯಿಸಿ, ಕೇವಲ 5 ವರ್ಷಗಳಲ್ಲಿ 12ನೇ ತರಗತಿ ಪೂರೈಸುವಂತಹ ವ್ಯವಸ್ಥೆಯನ್ನ ರೂಪಿಸಿದರು.
ಐಕಿಯಾ ಉದ್ಯೋಗ ಬಿಟ್ಟು ಪೂರ್ಣಪ್ರಮಾಣದ ಸೇವೆಗೆ ಇಳಿದ ಕುಶಾಲ್
2016ರಲ್ಲಿ ಈ ಶಾಲೆಯ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ ಯಶಸ್ಸು ಕುಶಾಲ್ ಅವರಲ್ಲಿ ಹೊಸ ಭರವಸೆ ಮೂಡಿಸಿತು. ತಕ್ಷಣವೇ ತಮ್ಮ ಐಕಿಯಾ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಪೂರ್ಣಪ್ರಮಾಣದಲ್ಲಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಲು ಆರಂಭಿಸಿದರು. 2017ರಲ್ಲಿ ಗುರುಗ್ರಾಮದಲ್ಲಿ ಸ್ವಂತ ಕ್ಯಾಂಪಸ್ ನಿರ್ಮಿಸಿದರು. ಇಂದು ಈ ಶಾಲೆಯಲ್ಲಿ 1,200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಇಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲದೆ, ದಿನಕ್ಕೆ ಎರಡು ಹೊತ್ತು ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ ಹಾಗೂ ಡಿಜಿಟಲ್ ಶಿಕ್ಷಣವನ್ನೂ ಸಹ ನೀಡಲಾಗುತ್ತಿದೆ. ಪೋಷಕರಲ್ಲಿ ಜವಾಬ್ದಾರಿ ಮೂಡಿಸಲು ತಿಂಗಳಿಗೆ ಕೇವಲ 1,500 ರೂ. ಶುಲ್ಕ ಪಡೆಯಲಾಗುತ್ತದೆ. ಆದರೆ, ಮಗು ಶಾಲೆಗೆ ನಿಯಮಿತವಾಗಿ ಬಂದು ಉತ್ತಮ ಪ್ರಗತಿ ಸಾಧಿಸಿದರೆ, ಆ ಶುಲ್ಕವನ್ನು ಸ್ಕಾಲರ್‌ಶಿಪ್ ರೂಪದಲ್ಲಿ ಪೋಷಕರಿಗೆ ಮರುಪಾವತಿಸುವ ವ್ಯವಸ್ಥೆಯನ್ನ ಸಹ ಕುಶಾಲ್ ಜಾರಿಗೆ ತಂದಿದ್ದಾರೆ.
'ವಿದ್ಯಾ ಸಹಯೋಗ್' ಮೂಲಕ 16 ರಾಜ್ಯಗಳಿಗೆ ವಿಸ್ತರಣೆ
ಕೋವಿಡ್-19 ಸಂದರ್ಭದಲ್ಲಿ ಸಂಸ್ಥೆಯು ವಿದ್ಯಾ ಸಹಯೋಗ್ ಎಂಬ ಡಿಜಿಟಲ್ ಲರ್ನಿಂಗ್ ಕಾರ್ಯಕ್ರಮವನ್ನ ಪ್ರಾರಂಭಿಸಿತು. ಇಂದು ಈ ಕಾರ್ಯಕ್ರಮದಡಿ ದೇಶದ 16 ರಾಜ್ಯಗಳ 275ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಈ ಸಂಸ್ಥೆಯ ಮೂಲಕ ಕಲಿತ ಆಶಿಶ್ ಇಂದು ಟೆಕ್ನಿಕಲ್ ಸಪೋರ್ಟ್ ಅಡವೈಸರ್ ಆಗಿ ಗುಡಿಯಾ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, 2013ರಲ್ಲಿ ಸೇರಿದ ಮೊದಲ ಆರು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ 2024ರಲ್ಲಿ ಎಂಬಿಬಿಎಸ್ ಮುಗಿಸಿ ಡಾಕ್ಟರ್ ಆಗಿದ್ದಾರೆ "ನಾವೇನಾದರೂ ಸಮಾಜಕ್ಕೆ ಮರಳಿ ನೀಡಬೇಕೆಂದರೆ, ಮೊದಲು ನಮ್ಮ ಸುತ್ತಲಿನ ಸಮಸ್ಯೆಗಳನ್ನ ಗಮನಿಸಬೇಕು, ನಂತರ ಕಾರ್ಯೋನ್ಮುಖರಾಗಬೇಕು," ಎನ್ನುವ ಕುಶಾಲ್ ರಾಜ್ ಚಕ್ರವರ್ತಿ ಅವರ ಮಾತು ಎಲ್ಲರಿಗೂ ಮಾದರಿ.


Click it and Unblock the Notifications
