250 ಕಂಪನಿಗಳಿಗೆ ಅರ್ಜಿ ಸಲ್ಲಿಸಿದರೂ ಸಿಗಲಿಲ್ಲ ಉದ್ಯೋಗ: IIM ಪದವೀಧರನಿಗೂ ಸಿಗುತ್ತಿಲ್ಲ ಕೆಲಸ
ಭಾರತದಲ್ಲಿ ಪ್ರತಿಷ್ಠಿತ ಐಐಎಂ ಕ್ಯಾಂಪಸ್‌ಗಳಿಗೆ ಕಾಲಿಡುವುದು ಎಂದರೆ ಅದೊಂದು ದೊಡ್ಡ ಸಾಧನೆ. ಅಲ್ಲಿಂದ ಪದವಿ ಪಡೆದು ಹೊರಬಂದರೆ ಸಾಕು, ಕೈತುಂಬಾ ಸಂಬಳದ ಜೊತೆಗೆ ದೊಡ್ಡ ದೊಡ್ಡ ಕಂಪನಿಗಳು ರೆಡ್ ಕಾರ್ಪೆಟ್ ಸ್ವಾಗತ ಕೋರುತ್ತವೆ ಎಂಬುದು ಸಾಮಾನ್ಯರ ನಂಬಿಕೆ. ಆದರೆ, ಪ್ರಸ್ತುತ ಉದ್ಯೋಗ ಮಾರುಕಟ್ಟೆ ಈ ಎಲ್ಲಾ ಲೆಕ್ಕಾಚಾರಗಳನ್ನ ತಲೆಕೆಳಗಾಗಿಸಿದೆ.
ಹೌದು, ಇತ್ತೀಚೆಗೆ ಐಐಎಂ ಕೋಝಿಕ್ಕೋಡ್ ಪದವೀಧರರೊಬ್ಬರು ತಾವು ಉದ್ಯೋಗದ ಪರದಾಡುತ್ತಿರುವ ಬಗ್ಗೆ ಹಂಚಿಕೊಂಡಿರುವ ಮಾಹಿತಿ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

3 ವರ್ಷಗಳ ಅನುಭವ, 250ಕ್ಕೂ ಹೆಚ್ಚು ಅರ್ಜಿ ಹಾಕಿದರೂ ನೋ ರೆಸ್ಪಾನ್ಸ್
ಉದ್ಯೋಗ ಹುಡುಕುತ್ತಿರುವ ಈ ಯುವಕ, ವೃತ್ತಿಯಲ್ಲಿ ಓರ್ವ ಇಂಜಿನಿಯರ್. ಆತನಿಗೆ ಡೇಟಾ ಅನಾಲಿಟಿಕ್ಸ್ ಕ್ಷೇತ್ರದಲ್ಲಿ ಈಗಾಗಲೇ 3 ವರ್ಷಗಳ ಕಾಲ ಕೆಲಸ ಮಾಡಿದ ಅನುಭವವೂ ಇದೆ. ಆನಂತರ, ತನ್ನ ವೃತ್ತಿಜೀವನಕ್ಕೆ ಮತ್ತಷ್ಟು ಮೆರುಗು ನೀಡುವ ಉದ್ದೇಶದಿಂದ ಪ್ರತಿಷ್ಠಿತ ಐಐಎಂ ಕೋಝಿಕ್ಕೋಡ್‌ನಲ್ಲಿ ಎಂಬಿಎ ಪದವಿಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಜೆನ್‌ಮ್ಯಾನ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅವರಿಗೆ ಅಲ್ಲಿ ಮುಂದುವರೆಯಲು ಇಷ್ಟವಿಲ್ಲ.
ಹೀಗಾಗಿ ಹೊಸ ಉದ್ಯೋಗಕ್ಕಾಗಿ ಲಿಂಕ್ಡ್‌ಇನ್, ನೌಕರಿ, ಐಐಎಂ ಜಾಬ್ಸ್ ಸೇರಿದಂತೆ ವಿವಿಧ ಪೋರ್ಟಲ್‌ಗಳ ಮೂಲಕ 250ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದ್ದಾರೆ. ನೇರವಾಗಿ ಎಚ್‌ಆರ್ ಮ್ಯಾನೇಜರ್‌ಗಳಿಗೂ ಇಮೇಲ್ ಮಾಡಿದ್ದಾರೆ. ಆದರೆ, ಆಶ್ಚರ್ಯ ಎಂದರೆ ಇಷ್ಟೆಲ್ಲಾ ಕಡೆ ಪ್ರಯತ್ನಿಸಿದರೂ ಅವರಿಗೆ ಒಂದೇ ಒಂದು ಕಾಲ್‌ಬ್ಯಾಕ್ ಬಂದಿಲ್ಲ.
"ಹೆಚ್ಚಿನ ಕಡೆಗಳಲ್ಲಿ ನನ್ನ ಅರ್ಜಿಯನ್ನ ನೇರವಾಗಿ ತಿರಸ್ಕರಿಸಲಾಗಿದೆ. ಇನ್ನು ಕೆಲವು ಕಡೆಗಳಿಂದ ಯಾವುದೇ ಪ್ರತಿಕ್ರಿಯೆಯೇ ಬಂದಿಲ್ಲ. 250 ಅರ್ಜಿ ಹಾಕಿದರೂ ಒಂದೇ ಒಂದು ಕಾಲ್‌ಬ್ಯಾಕ್ ಬಂದಿಲ್ಲ ಎಂದರೆ ಏನು ಹೇಳಬೇಕು?" ಎಂದು ಆತ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರೆಡ್ಡಿಟ್ ಪೋಸ್ಟ್ ವೈರಲ್
ತನ್ನ ಈ ಕಥೆಯನ್ನ ಈ ಯುವಕ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವೈರಲ್ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಕೇವಲ ಈ ಯುವಕನಷ್ಟೇ ಅಲ್ಲ, ಉದ್ಯಮದಲ್ಲಿ ಹಲವು ವರ್ಷಗಳ ಕಾಲ ದುಡಿದ ಘಟಾನುಘಟಿಗಳು ಕೂಡ ಇದೇ ರೀತಿಯ ಸಮಸ್ಯೆ ಎದುರಿಸುತ್ತಿರುವುದು ಕಮೆಂಟ್ ಸೆಕ್ಷನ್‌ನಲ್ಲಿ ಬಯಲಾಗಿದೆ.
ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ 8 ವರ್ಷಗಳ ಅನುಭವ ಹೊಂದಿರುವ ಮತ್ತೊಬ್ಬ ಟೈಯರ್-1 ಎಂಬಿಎ ಪದವೀಧರ, "ಕಳೆದ ಒಂದು ವರ್ಷದಿಂದ ನಾನು ಕೆಲಸ ಬದಲಾಯಿಸಲು ಪ್ರಯತ್ನಿಸುತ್ತಿದ್ದೇನೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಸಿದ್ಧನಿದ್ದರೂ ನನಗೆ ಅವಕಾಶ ಸಿಗುತ್ತಿಲ್ಲ. ಈಗ ಎಂಬಿಎ ಪದವಿ ಕೇವಲ ಹೆಸರಿಗೆ ಮಾತ್ರ ಎನ್ನುವಂತಾಗಿದ್ದು, ನಿಮ್ಮ ಬೆಂಬಲಕ್ಕೆ ಯಾರು ನಿಲ್ಲುತ್ತಾರೆ ಎಂಬುದು ಮಾತ್ರ ಇಲ್ಲಿ ಮುಖ್ಯವಾಗುತ್ತದೆ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಪರಿಸ್ಥಿತಿ
ಬರಲಿರುವ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವಾದ ಜಿಪಿಟಿ-6 (GPT6) ಹಾಗೂ ಇತರ ಬೆಳವಣಿಗೆಗಳಿಂದಾಗಿ ಭವಿಷ್ಯದಲ್ಲಿ ಉದ್ಯೋಗ ಮಾರುಕಟ್ಟೆಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಹಿರಿಯ ವೃತ್ತಿಪರರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ದೊಡ್ಡ ದೊಡ್ಡ ಕಂಪನಿಗಳನ್ನೇ ನೆಚ್ಚಿಕೊಳ್ಳುವ ಬದಲು, ಸೀರೀಸ್ ಎ ಮತ್ತು ಬಿ ಹಂತದಲ್ಲಿರುವ ಸ್ಟಾರ್ಟ್‌ಅಪ್ ಕಂಪನಿಗಳಲ್ಲಿ ಫೌಂಡರ್ಸ್ ಆಫೀಸ್ ಅಥವಾ ಇಐಆರ್‌ನಂತಹ ಹುದ್ದೆಗಳಿಗೆ ಪ್ರಯತ್ನಿಸುವುದು ಉತ್ತಮ. ಇದು ಕೇವಲ ಎಂಬಿಎ ಪದವಿ ಮಾತ್ರವಲ್ಲ, ಅನುಭವ ಮತ್ತು ಕಾರ್ಯತಂತ್ರವನ್ನ ಒಟ್ಟಾಗಿ ಬಳಸಲು ನೆರವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಇದಲ್ಲದೆ ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್ ಬಳಸಿಕೊಂಡು ರೆಫರಲ್ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳುವುದು ಪ್ರಸ್ತುತ ಮಾರುಕಟ್ಟೆಯಲ್ಲಿನ ಒಂದು ಒಳ್ಳೆಯ ಮಾರ್ಗವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications
