ಭಾರತದಲ್ಲಿ ಕೋವಿಡ್ ವೇಗವಾಗಿ ಹರಡಲು ಮೂರು ಕಾರಣ ನೀಡಿದ ಐಸಿಎಂಆರ್
ನವದೆಹಲಿ, ಏಪ್ರಿಲ್ 19: ಭಾರತದಲ್ಲಿ ಒಂದೇ ದಿನದಲ್ಲಿ ದಾಖಲೆಯ 2.73 ಲಕ್ಷದಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.50 ಕೋಟಿಯನ್ನು ದಾಟಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಜತೆಗೆ ಸಾವಿನ ಪ್ರಮಾಣವೂ ಆಘಾತಕಾರಿ ರೀತಿಯಲ್ಲಿ ಏರಿಕೆಯಾಗುತ್ತಿದೆ.
ಕೋವಿಡ್ ಮೊದಲ ಹಂತ ಮತ್ತು ಎರಡನೆಯ ಹಂತಗಳಲ್ಲಿನ ಸಾವಿನ ಪ್ರಮಾಣದ ಸರಾಸರಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಪ್ರಧಾನ ನಿರ್ದೇಶಕ ಡಾ. ಬಲರಾಮ್ ಭಾರ್ಗವ ತಿಳಿಸಿದ್ದಾರೆ.
ಭಾರತದಲ್ಲಿ ವೇಗವಾಗಿ ಕೋವಿಡ್ ಪ್ರಸರಣವಾಗುತ್ತಿರುವುದಕ್ಕೆ ಅಜಾಗರೂಕತೆ, ಅಸಮರ್ಪಕ ನಡವಳಿಕೆ ಮತ್ತು ಗುರುತಿಸಲಾಗದ ವಿವಿಧ ರೂಪಾಂತರಗಳು ಕಾರಣ ಎಂದು ಅವರು ಮೂರು ಪ್ರಮುಖ ಕಾರಣಗಳನ್ನು ತಿಳಿಸಿದ್ದಾರೆ.

'ನಮ್ಮಲ್ಲಿ ವಿಪರೀತ ಅಜಾಗರೂಕತೆ ಇದೆ. ಜತೆಗೆ ಕೋವಿಡ್ ಎಚ್ಚರಿಕೆಗಳನ್ನು ಸರಿಯಾಗಿ ಪಾಲಿಸದೆ ಇರುವಿಕೆ ಹಾಗೂ ವಿವಿಧ ಗುರುತಿಸಲಾಗದ ರೂಪಾಂತರಗಳು ಹೆಚ್ಚು ಆತಂಕಕಾರಿಯಾಗಿವೆ. ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ರೂಪಾಂತರಗಳು ಅಧಿಕ ಪ್ರಸರಣದ ಗುಣವನ್ನು ತೋರಿಸಿವೆ' ಎಂದು ಬಲರಾಮ್ ಭಾರ್ಗವ ಹೇಳಿದ್ದಾರೆ.
ಭಾರತದಲ್ಲಿ ಅವಳಿ ರೂಪಾಂತರವನ್ನು ಕೂಡ ಪತ್ತೆ ಮಾಡಲಾಗಿದೆ. ಆದರೆ ಅವುಗಳಲ್ಲಿ ಅಧಿಕ ಪ್ರಸರಣ ಸಾಮರ್ಥ್ಯ ಇನ್ನೂ ದೃಢಪಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications