ಆರ್‌ಬಿಐ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ, ಇವರ ಹಿನ್ನೆಲೆ ಏನು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ( ಆರ್ ಬಿಐ) ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅವರನ್ನು ನೇಮಕ ಮಾಡಲಾಗಿದೆ. ಕ್ಯಾಬಿನೆಟ್ ನೇಮಕಾತಿ ಸಮಿತಿಯು ಕಂದಾಯ ಕಾರ್ಯದರ್ಶಿಯಾಗಿದ್ದ ಸಂಜಯ್ ಮಲ್ಹೋತ್ರಾ ಅವರನ್ನು ಡಿಸೆಂಬರ್ 11ರಿಂದ ಮೂರು ವರ್ಷಗಳ ಅವಧಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಮುಂದಿನ ಗವರ್ನರ್ ಆಗಿ ನೇಮಿಸಿದೆ.
ಸಂಜಯ್ ಮಲ್ಹೋತ್ರಾ ಅವರು ರಾಜಸ್ಥಾನ ಕೇಡರ್‌ನ 1990ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಸದ್ಯ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಆಗಿದ್ದ ಶಕ್ತಿಕಾಂತ ದಾಸ್ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಶಕ್ತಿಕಾಂತ ದಾಸ್ ಅವರ ನಂತರ ಮಲ್ಹೋತ್ರಾ ಅವರು ಆರ್‌ಬಿಐ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸಂಜಯ್ ಮಲ್ಹೋತ್ರಾ ಅವರು ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಂದಾಯ ಕಾರ್ಯದರ್ಶಿಯಾಗಿ ಅಧಿಕಾರಾವಧಿಯ ಮೊದಲು ಮಲ್ಹೋತ್ರಾ ಅವರು ವಿದ್ಯುತ್ ಯೋಜನೆಗಳಿಗೆ ಹಣಕಾಸು ಒದಗಿಸುವಲ್ಲಿ ವಿಶೇಷವಾದ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿದ್ದ REC ಲಿಮಿಟೆಡ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಮಲ್ಹೋತ್ರಾ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರದ ವಿದ್ಯಾರ್ಥಿಯಾಗಿದ್ದರು. ಅಮೇರಿಕಾದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಇನ್ನು ಕಂದಾಯ ಕಾರ್ಯದರ್ಶಿಯಾಗಿದ್ದ ಮಲ್ಹೋತ್ರಾ ಅವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸುಧಾರಣೆಗಳನ್ನು ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.

ಜಿಎಸ್‌ಟಿ ಕೌನ್ಸಿಲ್‌ನ ಪದನಿಮಿತ್ತ ಕಾರ್ಯದರ್ಶಿಯಾಗಿಯೂ ಮಲ್ಹೋತ್ರಾ ಸೇವೆ ಸಲ್ಲಿಸಿದ್ದಾರೆ. ಮಲ್ಹೋತ್ರಾ ಅವರು ಇದೀಗ ಆರ್‌ಬಿಐನ 26ನೇ ಗವರ್ನರ್ ಆಗಿ ನೇಮಕಗೊಂಡಿದ್ದಾರೆ. ಅವರ ಅಧಿಕಾರಾವಧಿ ಮೂರು ವರ್ಷಗಳವರೆಗೆ ಇರುತ್ತದೆ. ಮಲ್ಹೋತ್ರಾ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಹಣಕಾಸು ಮತ್ತು ತೆರಿಗೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಅವರ ಪ್ರಸ್ತುತ ನಿಯೋಜನೆಯ ಭಾಗವಾಗಿ, ಅವರು ನೇರ ಮತ್ತು ಪರೋಕ್ಷ ತೆರಿಗೆಗಳಿಗೆ ಸಂಬಂಧಿಸಿದಂತೆ ತೆರಿಗೆ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎನ್ನಲಾಗಿದೆ.
ಊರ್ಜಿತ್ ಪಟೇಲ್ ಅವರ ಹಠಾತ್ ನಿರ್ಗಮನದ ನಂತರ ಶಕ್ತಿಕಾಂತ ದಾಸ್ ಅವರನ್ನು 2018ರ ಡಿಸೆಂಬರ್ 12ರಂದು ರ್‌ಬಿಐನ 25ನೇ ಗವರ್ನರ್ ಆಗಿ ನೇಮಕವಾಗಿದ್ದರು. ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಅವರಿಗೆ ಅಧಿಕಾರವಧಿ ಮತ್ತೆ ವಿಸ್ತರಣೆ ಮಾಡಲಾಯಿತು. ಅವರು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಚತುರತೆಗಾಗಿ ಜಾಗತಿಕ ವೇದಿಕೆಗಳಲ್ಲಿ ಸತತ ಎರಡು ಅವಧಿಗಳಿಗೆ ವರ್ಷದ ಕೇಂದ್ರ ಬ್ಯಾಂಕರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಆರ್‌ಬಿಐ ಗವರ್ನರ್ ಆಗಿ ಆರು ವರ್ಷಗಳ ಅವಧಿಯಲ್ಲಿ ಶಕ್ತಿಕಾಂತ್ ದಾಸ್ ಅವರು ಕೋವಿಡ್-19 ಹಾಗೂ ಉಕ್ರೇನ್ ಮತ್ತು ಮಧ್ಯಪ್ರಾಚ್ಯದಲ್ಲಿನ ಯುದ್ಧಗಳು ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ. ಸೆಪ್ಟಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯಲ್ಲಿನ ಕುಸಿತ ಹಾಗೂ ಹಣದುಬ್ಬರ ನಿಯಂತ್ರಣದ ಸವಾಲುಗಳನ್ನು ದಾಟಿ ಬಂದಿದ್ದರು.












Click it and Unblock the Notifications