2 ಬಾರಿ ಫೇಲ್, 'ಈ ಬಾರಿ ಪಾಸ್ ಆಗದಿದ್ರೆ ಮದುವೆ' ಎಂದ ತಂದೆ: 6 ತಿಂಗಳಲ್ಲೇ ಕೋಚಿಂಗ್ ಇಲ್ಲದೆ IAS ಪಾಸ್ ಮಾಡಿದ ನಿಧಿ
ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡುವುದು ಸುಲಭದ ಮಾತಲ್ಲ. ಸತತ ಪರಿಶ್ರಮ, ಛಲ ಮತ್ತು ತಾಳ್ಮೆ ಇದ್ದರೆ ಮಾತ್ರ ಈ ಕಠಿಣ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಎಷ್ಟೋ ಅಭ್ಯರ್ಥಿಗಳು ಸತತ ವೈಫಲ್ಯಗಳ ನಂತರ ತಮ್ಮ ಕನಸನ್ನೇ ಕೈಬಿಟ್ಟ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಆದರಲ್ಲಿ, ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿ ಗೆದ್ದವರ ಅನೇಕ ಕಥೆಗಳು ನಮಗೆ ಸ್ಫೂರ್ತಿ ನೀಡುತ್ತವೆ. ಅಂತಹ ಒಂದು ಅದ್ಭುತವಾದ ಯುಪಿಎಸ್‌ಸಿ ಯಶಸ್ಸಿನ ಕಥೆ ಎಂದರೆ ಅದು ಐಎಎಸ್ ಅಧಿಕಾರಿ ನಿಧಿ ಸಿವಾಚ್ ಅವರದ್ದು.
ಹರಿಯಾಣ ಮೂಲದ ನಿಧಿ ಸಿವಾಚ್ ಅವರು ಅತ್ಯಂತ ಶ್ರದ್ಧೆ ಮತ್ತು ನಿಷ್ಠಾವಂತ ವಿದ್ಯಾರ್ಥಿನಿಯಾಗಿದ್ದರು. ಅವರು ಸೋನಿಪತ್‌ನ ವಿಶ್ವವಿದ್ಯಾಲಯವೊಂದರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದರು. ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಆಯ್ಕೆಯಾಗಿ, ಹೈದರಾಬಾದ್‌ನ ಟೆಕ್ ಮಹೀಂದ್ರಾದಲ್ಲಿ ಎಂಜಿನಿಯರ್ ಆಗಿ ಉತ್ತಮ ಹುದ್ದೆಯಲ್ಲಿದ್ದರು.

ಕೆಲಸ ಮಾಡುತ್ತಿರುವಾಗಲೇ ಅವರಿಗೆ ದೇಶದ ಅತ್ಯುನ್ನತ ಸಿವಿಲ್ ಸರ್ವೀಸಸ್ ಪರೀಕ್ಷೆ ಬರೆಯುವ ಆಸೆ ಹುಟ್ಟಿಕೊಂಡಿತು. ಆದರೆ, ಬಿಡುವಿಲ್ಲದ ಕಾರ್ಪೊರೇಟ್ ಉದ್ಯೋಗದ ಜೊತೆಗೆ ಪರೀಕ್ಷಾ ತಯಾರಿ ನಡೆಸುವುದು ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಇದರ ಪರಿಣಾಮವಾಗಿ ಅವರು ತಮ್ಮ ಮೊದಲ ಎರಡು ಯುಪಿಎಸ್‌ಸಿ ಪ್ರಯತ್ನಗಳಲ್ಲಿ ಪ್ರಿಲಿಮ್ಸ್ ಹಂತವನ್ನು ದಾಟಲು ವಿಫಲರಾದರು.
ತಂದೆಯ ವಿವಾಹದ ಎಚ್ಚರಿಕೆ
ಎರಡು ಬಾರಿ ಫೇಲ್ ಆದ ನಂತರ ನಿಧಿ ತೀವ್ರ ನಿರಾಸೆಗೊಂಡಿದ್ದರು. ಆ ಸಂದರ್ಭದಲ್ಲಿ, ಅವರಿಗೆ 25 ವರ್ಷ ತುಂಬುವಷ್ಟರಲ್ಲಿ ಮದುವೆ ಮಾಡಬೇಕು ಎಂಬ ಆಲೋಚನೆಯಲ್ಲಿದ್ದ ಅವರ ತಂದೆ ಅವರಿಗೊಂದು ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದರು. "ಇದು ನಿನ್ನ ಮೂರನೇ ಹಾಗೂ ಕೊನೆಯ ಪ್ರಯತ್ನ. ಒಂದು ವೇಳೆ ಈ ಬಾರಿ ನೀನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೆ, ನೀನು ಖಂಡಿತಾ ಮದುವೆಯಾಗಬೇಕು" ಎಂದು ಕಠಿಣ ಷರತ್ತು ವಿಧಿಸಿದರು.
ತಂದೆಯ ಈ ಎಚ್ಚರಿಕೆ ನಿಧಿ ಅವರಲ್ಲಿ ಹೊಸ ಕಿಚ್ಚು ಹೊತ್ತಿಸಿತು. ತಮ್ಮ ಐಎಎಸ್ ಕನಸನ್ನ ಹೇಗಾದರೂ ಸರಿ ನನಸು ಮಾಡಿಕೊಳ್ಳಲೇಬೇಕು ಎಂದು ಅವರು ದಿಟ್ಟ ನಿರ್ಧಾರವೊಂದನ್ನ ತೆಗೆದುಕೊಂಡರು. ಕೈತುಂಬಾ ಸಂಬಳ ಬರುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕೆಲಸಕ್ಕೆ ರಿಸೈನ್ ಮಾಡಿದರು. ತಮ್ಮ ಸಂಪೂರ್ಣ ಸಮಯ ಮತ್ತು ಗಮನವನ್ನ ಕೇವಲ ಪರೀಕ್ಷೆಯತ್ತ ಕೇಂದ್ರೀಕರಿಸಲು ತವರಿಗೆ ಮರಳಿದರು.
ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪಾಸ್ ಮಾಡಿದ ಛಲಗಾತಿ
ಕೆಲಸ ಬಿಟ್ಟು ಮನೆಗೆ ಬಂದ ನಂತರ ನಿಧಿ ಮುಂದಿನ 6 ತಿಂಗಳ ಕಾಲ ತಮ್ಮನ್ನ ತಾವು ಒಂದು ಕೋಣೆಯಲ್ಲಿ ಸಂಪೂರ್ಣವಾಗಿ ಬಂಧಿಯಾಗಿಸಿಕೊಂಡರು. ಹೊರಗಿನ ಪ್ರಪಂಚದ ಸಂಪರ್ಕವನ್ನೇ ಕಡಿತಗೊಳಿಸಿದರು. ತಮ್ಮ ಗುರಿಯತ್ತ ಅವರು ಎಷ್ಟರಮಟ್ಟಿಗೆ ನಿಷ್ಠೆ ಹೊಂದಿದ್ದರೆಂದರೆ:
* ಯಾವುದೇ ದುಬಾರಿ ಕೋಚಿಂಗ್ ಸೆಂಟರ್‌ಗಳ ಮೆಟ್ಟಿಲು ಹತ್ತಲಿಲ್ಲ.
* ಸೋಶಿಯಲ್ ಮೀಡಿಯಾದಿಂದ ಸಂಪೂರ್ಣವಾಗಿ ದೂರ ಉಳಿದರು.
* ಯಾವುದೇ ರೀತಿಯ ಮನರಂಜನೆ, ಸ್ನೇಹಿತರ ಭೇಟಿ ಮತ್ತು ಆಕರ್ಷಣೆಗಳಿಗೆ ಒಳಗಾಗಲಿಲ್ಲ.
ಕೇವಲ ಪುಸ್ತಕಗಳು, ಹಳೆಯ ಪ್ರಶ್ನೆಪತ್ರಿಕೆಗಳು ಮತ್ತು ಸ್ವಯಂ ಅಧ್ಯಯನವೇ ಅವರ ಏಕೈಕ ದಿನಚರಿಯಾಗಿತ್ತು. ಪ್ರತಿದಿನ ಅತ್ಯಂತ ಕಠಿಣ ಅಭ್ಯಾಸ ನಡೆಸಿದರು. ಅವರ ಈ ಸತತ 6 ತಿಂಗಳ ಹೋರಾಟ ಮತ್ತು ಕಠಿಣ ಪರಿಶ್ರಮಕ್ಕೆ ಅಂತಿಮವಾಗಿ ಭರ್ಜರಿ ಫಲ ಸಿಕ್ಕಿತು. 2018ರ ಯುಪಿಎಸ್‌ಸಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ನಿಧಿ ಸಿವಾಚ್ ಅವರು ಅಖಿಲ ಭಾರತ ಮಟ್ಟದಲ್ಲಿ 83ನೇ ರ‍್ಯಾಂಕ್ (AIR 83) ಗಳಿಸುವ ಮೂಲಕ ಹೆಮ್ಮೆಯ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದರು.
ಯಾವುದೇ ಕೋಚಿಂಗ್ ಇಲ್ಲದೆ, ಕೇವಲ ಸ್ವಯಂ ಅಧ್ಯಯನದ ಮೂಲಕ ಇಂತಹದೊಂದು ಸಾಧನೆ ಮಾಡಿದ ನಿಧಿ ಸಿವಾಚ್ ಅವರ ಈ ಸಾಧನೆ, ಇಂದು ಸಾವಿರಾರು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ದೊಡ್ಡ ಸ್ಫೂರ್ತಿ.


Click it and Unblock the Notifications
