HSRP: ವಾಹನ ಸವಾರರೇ ಚಿಂತೆ ಬಿಡಿ... ಮತ್ತೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕ ವಿಸ್ತರಣೆ
ಬೆಂಗಳೂರು, ಜೂನ್. 19: ರಾಜ್ಯದಲ್ಲಿ ವಾಹನ ಸವಾರರು ತಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಬಗ್ಗೆ ಕೊಂಚ ನಿಟ್ಟುಸಿರು ಬಿಡಬಹುದಾಗಿದೆ. ಕರ್ನಾಟಕ ಸಾರಿಗೆ ಇಲಾಖೆಯು ವಾಹನ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ್ದು, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ಡೆಡ್‌ಲೈನ್ ಅನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.
2019ರ ಏಪ್ರಿಲ್ 1ನೇ ತಾರೀಖಿಗೆ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಕೊನೆಯ ದಿನಾಂಕವನ್ನು ಮತ್ತೊಮ್ಮೆ ಸೆಪ್ಟೆಂಬರ್ 15, 2024 ರವರೆಗೆ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ ಡೆಡ್‌ಲೈನ್ ಬಳಿಕ ಈ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಇದೇ ಕೊನೆ ಮತ್ತೆ ವಿಸ್ತರಣೆ ಮಾಡಲ್ಲ!
ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು ವಿಸ್ತರಿಸಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಸೆಪ್ಟೆಂಬರ್ 15ರ ವರೆಗೆ ಕಾಲಾವಕಾಶ ನೀಡಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಸೆಪ್ಟೆಂಬರ್15 ವರಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಡೆಡ್‌ಲೈನ್ ನೀಡಲಾಗಿದೆ. ಸೆಪ್ಟೆಂಬರ್ 15 ಬಳಿಕ ಅವಧಿ ವಿಸ್ತರಣೆ ಇಲ್ಲ. ಈಗಾಗಲೇ ಹಲವು ಬಾರಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಆಳವಡಿಕೆ ಗಡುವು ವಿಸ್ತರಣೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ದ್ವಿಚಕ್ರ ವಾಹನಗಳು, ಆಟೋ ಮತ್ತು ನಾಲ್ಕು ಚಕ್ರಗಳ ವಾಹನಗಳು ಸೇರಿದಂತೆ ರಾಜ್ಯದ ಎಲ್ಲಾ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಬೇಜಯ. ವಂಚನೆ ಮತ್ತು ಕಳ್ಳತನದಿಂದ ರಕ್ಷಿಸಲು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಒಳಗೊಂಡಿರುವ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವುದು ರಾಜ್ಯದಲ್ಲಿ ಕಡ್ಡಾಯಾವಾಗಿದೆ. ತಮ್ಮ ಹಳೆಯ ನಂಬರ್ ಪ್ಲೇಟ್‌ಗಳನ್ನು ತೆಗೆಸಿ ಹೊಸ ನಂಬರ್ ಪ್ಲೇಟ್‌ಗಳನ್ನು ಅಳವಡಿಸಬೇಕಿದೆ.
ಇನ್ನು, ಎಚ್‌ಎಸ್‌ಆರ್‌ಪಿ (HSRP) ಪ್ಲೇಟ್ ಅಳವಡಿಕೆಗೆ ಇದೇ ಮೊದಲ ಬಾರಿ ಗಡುವು ವಿಸ್ತರಣೆ ಮಾಡುತ್ತಿಲ್ಲ. ಆಗಸ್ಟ್ 2023 ರಲ್ಲಿ ಮೊದಲ ಬಾರಿಗೆ ದಿನಾಂಕವನ್ನು ಮುಂದೂಡಲಾಗಿತ್ತು. ಆದಾದ ಬಳಿಕ ಸರ್ಕಾರವು ಪದೇ ಪದೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕವನ್ನು ಮುಂದೂಡುತ್ತಿದೆ.
ರಾಜ್ಯ ಸರ್ಕಾರವು ಈಗಾಗಲೇ ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವನ್ನು ಫೆಬ್ರವರಿ 17 ರಿಂದ ಮೇ 31, 2024 ರವರೆಗೆ ವಿಸ್ತರಿಸಿದೆ. ಬಳಿಕ ಜುಲೈ ನಾಲ್ಕವರ ವರೆಗೂ ವಿಸ್ತರಣೆ ಮಾಡಿ ಇತ್ತೀಚೆಗೆ ಆದೇಶಿಸಿತ್ತು. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕಾರು ಮಾಲೀಕರಲ್ಲಿ ನಿರಾಸಕ್ತಿ ಉಂಟಾಗಿದ್ದು, ಯಾರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಇನ್ನು, ಏಪ್ರಿಲ್ 1, 2019 ರ ಮೊದಲು ಖರೀದಿಸಲಾದ ಸುಮಾರು 2 ಕೋಟಿ ವಾಹನಗಳಿಗೆ ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಆದರೆ, ಎಚ್‌ಎಸ್‌ಆರ್‌ಪಿ ಅಳವಡಿಕೆಯಲ್ಲಿ ಹಲವು ತೊಮದರೆಗಳಿವೆ ಎಂದು ವಾಹನ ಮಾಲೀಕರು ಆರೋಪಿಸಿದ್ದಾರೆ.
ಸಾರಿಗೆ ಚಿವ ರಾಮಲಿಂಗಾ ರೆಡ್ಡಿ ಕೂಡ ಸೆಪ್ಟೆಂಬರ್ 15 ಕೊನೆಯ ದಿನಾಂಕ, ಇದಾದ ನಂತರ ಮತ್ತೆ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸದಿದ್ದರೇ ದಂಡ ವಿಧಿಸುವುದು ಅನಿವಾರ್ಯ. ಆರಂಭಿಕ ದಂಡವು 500 ರೂಪಾಯಿಗಳಿದ್ದು, ಮತ್ತೆ ಸಿಕ್ಕಿಬಿದ್ದರೇ 1000 ರೂಪಾಯಿ ದಂಡ ವಿಧಿಸಲಾಗುತ್ತದೆ.












Click it and Unblock the Notifications