ಪ್ರತಿಯೊಬ್ಬ ಸೋಂಕಿತನಿಂದ ಇಬ್ಬರಿಗೆ ಹರಡುವುದು ಹೇಗೆ ಕೊರೊನಾವೈರಸ್!?
ನವದೆಹಲಿ, ಏಪ್ರಿಲ್ 23: ಭಾರತದಲ್ಲಿ ವರದಿಯಾಗುತ್ತಿರುವ ಕೊರೊನಾವೈರಸ್ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸೋಂಕಿತರು ದೆಹಲಿಯಲ್ಲೇ ಪತ್ತೆಯಾಗುತ್ತಿವೆ. ಸೋಂಕಿತ ವ್ಯಕ್ತಿಗಳ ಸಂಖ್ಯೆ ಹೆಚ್ಚುವುದರ ಹಿಂದೆ ಒಂದು ವಿಶೇಷ ಲೆಕ್ಕಾಚಾರವೇ ಅಡಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಅಪಾಯ ಹೆಚ್ಚಾಗಲು ಕಾರಣವೇನು ಎಂಬುದನ್ನು ಮದ್ರಾಸ್ ಐಐಟಿ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಕೋವಿಡ್-19 ಸೋಂಕಿನ ಹರಡುವಿಕೆಯನ್ನು ಸೂಚಿಸುವ ಆರ್ ಮೌಲ್ಯವು ಈ ವಾರ 2.1ರಷ್ಟು ದಾಖಲಾಗಿದೆ. ಇದರಿಂದಾಗಿ ಪ್ರತಿಯೊಬ್ಬ ಕೊರೊನಾವೈರಸ್ ಸೋಂಕಿತನಿಂದ ಇತರೆ ಇಬ್ಬರಿಗೆ ಸೋಂಕು ಅಂಟಿಕೊಳ್ಳುತ್ತದೆ.
'R' ಅಥವಾ ಸಂತಾನೋತ್ಪತ್ತಿ ಮೌಲ್ಯದಿಂದ ಸೋಂಕಿತ ವ್ಯಕ್ತಿಯು ಎಷ್ಟು ಜನರಿಗೆ ಸೋಂಕು ಹರಡಬಹುದು ಎಂಬುದರ ಸಂಖ್ಯೆಯನ್ನು ಸೂಚಿಸುತ್ತದೆ. ಈ ಮೌಲ್ಯವು ಒಂದಕ್ಕಿಂತ ಕಡಿಮೆಯಾದರೆ ಸಾಂಕ್ರಾಮಿಕ ರೋಗ ಕೊನೆಗೊಳ್ಳುತ್ತದೆ ಎಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ ದೆಹಲಿಯಲ್ಲಿ ಸೋಂಕಿತ ಪ್ರಕರಣಗಳ ಏರಿಕೆಗೆ ಕಾರಣ ಮತ್ತು ಅದರ ಮೂಲದ ಬಗ್ಗೆ ಮದ್ರಾಸ್ ಐಐಟಿ ಅಧ್ಯಯನ ಏನು ಹೇಳುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.

ಭಾರತದಲ್ಲಿ ಮತ್ತು ದೆಹಲಿಯಾಗಿ ಎಷ್ಟಿರಬೇಕು ಆರ್ ಮೌಲ್ಯ?
ಕಂಪ್ಯೂಟೇಶನಲ್ ಮಾಡೆಲಿಂಗ್‌ನ ಪ್ರಾಥಮಿಕ ವಿಶ್ಲೇಷಣೆಯನ್ನು ಐಐಟಿ-ಮದ್ರಾಸ್‌ನ ಗಣಿತಶಾಸ್ತ್ರ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಕಂಪ್ಯೂಟೇಶನಲ್ ಮ್ಯಾಥಮ್ಯಾಟಿಕ್ಸ್ ಮತ್ತು ಡಾಟಾ ಸೈನ್ಸ್‌ನ ಪ್ರೊ.ನೀಲೇಶ್ ಎಸ್ ಉಪಾಧ್ಯೆ ಮತ್ತು ಪ್ರೊ.ಎಸ್ ಸುಂದರ್ ನೇತೃತ್ವ ವಹಿಸಿದ್ದಾರೆ. ಇದೇ ತಜ್ಞರು ಅಧ್ಯಯನದ ಕುರಿತು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ, ದೆಹಲಿಯಲ್ಲಿ ಆರ್ ಮೌಲ್ಯವು 2.1ರಷ್ಟಿದ್ದರೆ, ಭಾರತದಲ್ಲಿ ಪ್ರಸ್ತುತ ಆರ್ ಮೌಲ್ಯವು 1.3ರಷ್ಟಿದೆ ಎಂದು ವಿಶ್ಲೇಷಣೆಯಿಂದ ತಿಳಿದು ಬಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ನಾಲ್ಕನೇ ಅಲೆ ಶುರುವಾಯ್ತಾ?
ದೆಹಲಿಯಲ್ಲಿ ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ನಾಲ್ಕನೇ ಅಲೆ ಶುರುವಾಯಿತೇ ಎಂಬ ಕುರಿತು ಪ್ರಶ್ನೆ ಮಾಡಲಾಯಿತು. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಐಐಟಿ-ಮದ್ರಾಸ್‌ನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಯಂತ್ ಝಾ ಈಗಲೇ ನಾಲ್ಕನೇ ಅಲೆಯ ಬಗ್ಗೆ ಘೋಷಿಸುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. "ಪ್ರತಿಯೊಬ್ಬ ಸೋಂಕಿತ ವ್ಯಕ್ತಿಯು ಇತರ ಇಬ್ಬರ ಮೇಲೆ ಪರಿಣಾಮ ಬೀರುತ್ತಿದ್ದಾರೆ ಎಂದು ನಾವು ಹೇಳಬಹುದು. ಆದರೆ ನಾಲ್ಕನೇ ಅಲೆಯ ಬಗ್ಗೆ ಘೋಷಿಸಲು ಸ್ವಲ್ಪ ಕಾಯಬೇಕಾಗಿದೆ. ಪ್ರತಿರಕ್ಷೆಯ ಸ್ಥಿತಿ ಮತ್ತು ಮೂರನೇ ಅಲೆಯ ವೇಳೆ ಪರಿಣಾಮ ಬೀರುವ ಜನರ ಬಗ್ಗೆ ನಮಗೆ ತಿಳಿದಿಲ್ಲ. ಜನವರಿಯಲ್ಲಿನ ಅಲೆಗಳು ಪರಿಣಾಮ ಬೀರುತ್ತವೆ,"ಎಂದು ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತ್ರ ಕೊವಿಡ್-19 ಸಂಖ್ಯೆ ಏರಿಕೆ
ಕೊರೊನಾವೈರಸ್ ಸೋಂಕಿತ ಪ್ರಕರಮಗಳ ಸಂಖ್ಯೆಯು ಇತರ ಮೆಟ್ರೋ ನಗರಗಳಾದ ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳಲ್ಲಿ ತೀರಾ ಕಡಿಮೆಯಾಗಿದೆ. ಆದರೆ ಕೋವಿಡ್-19 ಪ್ರಕರಣ ಸಂಖ್ಯೆಯಲ್ಲಿ ದೆಹಲಿ ಏರಿಕೆ ಕಾಣುತ್ತಿದೆ. ನಗರದಲ್ಲಿ ಶುಕ್ರವಾರ 1,042 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಪಾಸಿಟಿವಿಟಿ ದರವು ಶೇ. 4.64ರಷ್ಟಿದೆ ಎಂದು ಝಾ ಹೇಳಿದ್ದಾರೆ.

ಕೊರೊನಾವೈರಸ್ ಪ್ರಕರಣ ಹೆಚ್ಚಾಗಲು ಕಾರಣವೇನು?
ನವದೆಹಲಿಯಲ್ಲಿ ಏಪ್ರಿಲ್ ಮೊದಲ ಹದಿನೈದು ದಿನಗಳಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಹೆಚ್ಚಿನ ಮಾದರಿಗಳಲ್ಲಿ ಓಮಿಕ್ರಾನ್ ಉಪ-ವಂಶಾವಳಿಯ BA.2.12 ಪತ್ತೆಯಾಗಿದೆ. ಇದು ನಗರದಲ್ಲಿ ಇತ್ತೀಚಿನ ಕೋವಿಡ್ -19 ಪ್ರಕರಣಗಳ ಉಲ್ಬಣದ ಹಿಂದಿನ ಕಾರಣ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಮೂಲವು ದೆಹಲಿಯ ಕೆಲವು ಮಾದರಿಗಳಲ್ಲಿ Omicron ರೂಪಾಂತರದ ತಳಿ BA.2.12.1 ಸಹ ಕಂಡುಬಂದಿದೆ. ಇದು ಇತ್ತೀಚಿನ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಆದರೆ ದೆಹಲಿಯ ಕೆಲವು ಮಾದರಿಗಳಲ್ಲಿ ಇದು ನಿಜವಾಗಿಯೂ ಕಂಡುಬಂದಿದೆ ಎಂದು ಅಧಿಕಾರಿಗಳು ಖಚಿತಪಡಿಸಿಲ್ಲ.

ದೇಶದಲ್ಲಿ ಒಂದೇ ದಿನ 2,451 ಮಂದಿಗೆ ಕೊವಿಡ್
ಭಾರತದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಹೊಸ ರೂಪಾಂತರಿ ಎಕ್ಸ್ಇ ತಳಿಯ ಭೀತಿ ಹೆಚ್ಚಾಗಿದೆ. ಇದರ ಮಧ್ಯೆ ದೇಶದಲ್ಲಿ ಮತ್ತೊಮ್ಮೆ ಸೋಂಕಿತ ಪ್ರಕರಣಗಳ ಸಂಖ್ಯೆ ಎರಡು ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 2527 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 33 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 1656 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 43,054,952ಕ್ಕೆ ಏರಿಕೆಯಾಗಿದೆ. ಈ ಪೈಕಿ 42,517,724 ಸೋಂಕಿತರು ಗುಣಮುಖರಾಗಿದ್ದರೆ, 522,149 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 15,079 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
Recommended Video












Click it and Unblock the Notifications