Delimitation: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮೇಲೆ ಒಡೆದಾಳುವ ನೀತಿಯ ಛಾಯೆ- ದಕ್ಷಿಣ, ಉತ್ತರ ಭಾರತದ ನಡುವೆ ಕಂದಕ ಸೃಷ್ಟಿ
ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದೆ. ಆದರೆ, ಈ ಮಸೂದೆ ಜಾರಿಯಾಗುವುದಕ್ಕೂ ಮುನ್ನ ಕೇಂದ್ರ ಸರ್ಕಾರ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯಂತಹ ( ಡಿಲಿಮಿಟೇಶನ್ ) ಮಹತ್ವದ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಕ್ಷೇತ್ರ ಮರುವಿಂಗಡಣೆ ಕುರಿತು ವಿರೋಧ ಪಕ್ಷಗಳ ನಾಯಕರು ಕೆಲ ಶಂಕೆಗಳನ್ನು ವ್ಯಕ್ತಪಡಿಸಿರುವುದು ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.
2026 ಕ್ಷೇತ್ರ ಮರುವಿಂಗಡಣೆ ಮಾಡುವ ಮೂಲಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳಿಗೆ ಕಡಿಮೆ ಪ್ರಾತಿನಿಧ್ಯ ನೀಡಲು ಮುಂದಾಗಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.

ಈಗಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯು 543 ಆಗಿದೆ. ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆ ಪ್ರಕಾರ, ಈ ಸ್ಥಾನಗಳನ್ನು 753 ಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ. ಹೆಚ್ಚು ಕ್ಷೇತ್ರಗಳನ್ನು ಹಿಂದಿ ಭಾಷಿಗ ರಾಜ್ಯಗಳಲ್ಲಿ ಏರಿಕೆ ಮಾಡುವ ಸಾಧ್ಯತೆ ಇದೆ. ಆದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಈಗಿರುವ ಸ್ಥಾನಗಳನ್ನು ಕಡಿಮೆ ಮಾಡಬಹುದು ಎಂಬ ಶಂಕೆಗಳನ್ನು ತಮಿಳುನಾಡಿನ ರಾಜಕೀಯ ನಾಯಕರು ವ್ಯಕ್ತಪಡಿಸಿದ್ದಾರೆ.
2026 ರಲ್ಲಿ ಭಾರತದ ಅಂದಾಜು ಜನಸಂಖ್ಯೆಯು 1.42 ಶತಕೋಟಿ ಆಗಿರುತ್ತದೆ. ಈ ಡೇಟಾವು ಡಿಲಿಮಿಟೇಶನ್‌ಗೆ ನಿರ್ಣಾಯಕವಾಗಿರುತ್ತದೆ. ಈ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳ ಗಡಿಗಳನ್ನು ಮರುಹೊಂದಿಸಲಾಗುತ್ತದೆ.
ಅಂಕಿಅಂಶಗಳ ಆಧಾರದ ಮೂಲಕ ನೋಡುವುದಾದರೆ, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳು 36 ಕ್ಕೆ ಹೆಚ್ಚಾಗಬೇಕಿದೆ. ಆಂಧ್ರಪ್ರದೇಶದಲ್ಲಿ 25 ರಿಂದ 28ಕ್ಕೆ ಮತ್ತು ತಮಿಳುನಾಡಿನಲ್ಲಿ 39 ರಿಂದ 41ಕ್ಕೆ ಹೆಚ್ಚಾಗಬೇಕು. ತೆಲಂಗಾಣದಲ್ಲಿ 17 ರಿಂದ 20ಕ್ಕೆ ಏರಿಕೆಯಾಗಬೇಕಿದೆ. ಜನಸಂಖ್ಯೆ ಸ್ಪೋಟಕ್ಕೆ ಕಡಿವಾಣ ಹಾಕಿರುವ ಕೇರಳದಲ್ಲಿ 20 ಕ್ಷೇತ್ರಗಳಿಂದ 19 ಕ್ಷೇತ್ರಗಳಿಗೆ ಕಡಿಮೆ ಆಗಬಹುದು.

ಕೇಂದ್ರ ಸರ್ಕಾರವು ಉದ್ದೇಶಿಸಲಾಗಿರುವ ಕ್ಷೇತ್ರಗಳ ಮರುವಿಂಗಡಣೆ ಪ್ರಕಾರ, ತಮಿಳುನಾಡಿನಲ್ಲಿರುವ 39 ಕ್ಷೇತ್ರಗಳನ್ನು 31 ಕ್ಕೆ ಕಡಿಮೆ ಮಾಡಬಹುದು ಎಂದು ವರದಿಯಾಗಿದೆ. ಆಂದ್ರ ಹಾಗೂ ತೆಲಂಗಾಣಗಳ 42 ಕ್ಷೇತ್ರಗಳನ್ನು 34 ಕ್ಕೆ ಇಳಿಸಬಹುದು. ಕೇರಳದ 20 ಕ್ಷೇತ್ರಗಳನ್ನು 12 ಕ್ಕೆ ಇಳಿಕೆ ಮಾಡಬಹುದು ಎಂಬ ಮಾಹಿತಿ ಹೊರಬಿದ್ದಿದೆ.
ಆದರೆ, ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್‌ಗಳಲ್ಲಿ ಕ್ಷೇತ್ರಗಳನ್ನು ಹೆಚ್ಚು ಮಾಡಬಹುದು ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ 80 ಕ್ಷೇತ್ರಗಳನ್ನು 91 ಕ್ಷೇತ್ರಗಳಿಗೆ ಏರಿಕೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ದಕ್ಷಿಣಕ್ಕೆ ಕಡಿಮೆ ಪ್ರಾತಿನಿಧ್ಯ
ಈ ಅಂಕಿಅಂಶಗಳನ್ನು ಗಮನಿಸಿದರೆ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ದಕ್ಷಿಣ ರಾಜ್ಯಗಳಿಗೆ ಕಡಿಮೆ ಪ್ರಾತಿನಿಧ್ಯ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದು ದಕ್ಷಿಣ ರಾಜ್ಯಗಳ ನಾಯಕರನ್ನು ಕೆರಳಿಸಿದೆ. 'ದಕ್ಷಿಣ ಭಾರತದ ಮೇಲೆ ತೂಗುಕತ್ತಿ ನೇತಾಡುತ್ತಿದೆ' ಎಂದು ಡಿಎಂಕೆ ಹರಿಹಾಯ್ದಿದೆ.
ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮೊದಲಿನಿಂದಲೂ ಇದೇ ರೀತಿಯ ತಾರತಮ್ಯವನ್ನು ಅನುಸರಿಸುತ್ತ ಬಂದಿವೆ ಎಂಬುದು ದಕ್ಷಿಣ ರಾಜ್ಯಗಳ ನಾಯಕರ ಆರೋಪವಾಗಿದೆ.
ಹಿಂದಿ ಭಾಷಿಗರನ್ನು ಓಲೈಸುವುದು ದಕ್ಷಿಣ ಭಾರತದ ರಾಜ್ಯಗಳನ್ನು ನಿರ್ಲಕ್ಷಿಸುವುದು ರಾಷ್ಟ್ರೀಯ ಪಕ್ಷಗಳ ನೀತಿಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಗಿಲ್ಲ ಮನ್ನಣೆ
ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಲ್ಲಿ ಬಿಜೆಪಿ ನೆಲೆಯನ್ನು ಕಂಡುಕೊಂಡಿಲ್ಲ. ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಲಾಭ-ನಷ್ಟಗಳ ಲೆಕ್ಕಾಚಾರವನ್ನು ಮಾಡುತ್ತಿದೆ ಎನ್ನಲಾಗುತ್ತಿದೆ. ಒಂದು ವೇಳೆ, ಬಿಜೆಪಿ ಪ್ರಕಾರ, ಕ್ಷೇತ್ರ ಮರುವಿಂಗಡಣೆಯಾದರೆ ಇದು ದಕ್ಷಿಣ ಹಾಗೂ ಉತ್ತರ ಭಾರತದ ನಡುವೆ ದೊಡ್ಡ ಮಟ್ಟದ ಕಂದಕವನ್ನು ನಿರ್ಮಿಸಬಹುದು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.












Click it and Unblock the Notifications