300 ವರ್ಷಗಳ ಹಳೆಯ ಜಮಕ್ಕಾಳಂ ನೇಕಾರಿಕೆ ಕಲೆಗೆ ಮರುಜೀವ ನೀಡಿದ 26ರ ಯುವತಿ

ತಮಿಳುನಾಡಿನ ಭವಾನಿ ಎಂಬ ಸಣ್ಣ ಪಟ್ಟಣದಲ್ಲಿ ನೇಕಾರರ ಮಗ್ಗಗಳ ಸದ್ದು ಈಗ ಮತ್ತೆ ಕೇಳಲಾರಂಭಿಸಿದೆ. ಇದಕ್ಕೆ ಮುಖ್ಯ ಕಾರಣ 26 ವರ್ಷದ ಯುವತಿ ವರ್ಷಾ ಶಿವಕುಮಾರ್. ಸುಮಾರು 300 ವರ್ಷಗಳ ಸುದೀರ್ಘ ಇತಿಹಾಸವಿರುವ ಜಮಕ್ಕಾಳಂ (Jamakkalam) ಎಂಬ ವಿಶಿಷ್ಟ ನೇಕಾರಿಕೆ ಕಲೆಗೆ ಅವರು ತಮ್ಮ ಹೌಸ್ ಆಫ್ ಜಮಕ್ಕಾಳಂ ಮೂಲಕ ಹೊಸ ಸ್ಪರ್ಶ ನೀಡಿದ್ದಾರೆ.

ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆಯಲ್ಲಿ (NIFT) ಕಲಿಯುತ್ತಿದ್ದಾಗ, ಹೊರಗಿನಿಂದ ಬಂದ ಅತಿಥಿ ಉಪನ್ಯಾಸಕರೊಬ್ಬರು ಜಮಕ್ಕಾಳಂ ಬಗ್ಗೆ ಬಹಳ ಆಸಕ್ತಿಯಿಂದ ಪಾಠ ಮಾಡಿದರು. "ನನ್ನದೇ ಊರಿನ ಕಲೆಯ ಬಗ್ಗೆ ಹೊರಗಿನವರಿಗೆ ಇರುವಷ್ಟು ಅರಿವು ನನಗಿಲ್ಲವಲ್ಲ" ಎಂಬ ಸತ್ಯ ವರ್ಷಾ ಅವರನ್ನ ಎಚ್ಚರಿಸಿತು. ಈ ಒಂದು ಆಲೋಚನೆ ಅವರನ್ನ ಮತ್ತೆ ಭವಾನಿಯತ್ತ ಮುಖಮಾಡುವಂತೆ ಮಾಡಿತು.

House of Jamakkalam How a 26-Year-Old Revived a 300-Year-Old Tamil Nadu Weaving Craft Market

ತಮಿಳುನಾಡು ಕೈಮಗ್ಗ: ಜಮಕ್ಕಾಳಂ ಕಲೆಯ ಇತಿಹಾಸ

ತಮಿಳುನಾಡಿನ ಕಾವೇರಿ ತೀರದ ಭವಾನಿ ಮತ್ತು ಕುಮಾರಪಾಳ್ಯಂ ಪ್ರದೇಶಗಳಲ್ಲಿ ಜಮಕ್ಕಾಳಂ ನೇಕಾರಿಕೆ ಶತಮಾನಗಳಿಂದ ಬೆಳೆದುಬಂದಿದೆ. ಬ್ರಿಟಿಷರ ಗಿರಣಿ ಬಟ್ಟೆಗಳಿಗೆ ಪೈಪೋಟಿ ನೀಡಲು ಸ್ಥಳೀಯ ನೇಕಾರರು ರೂಪಿಸಿದ ಈ ದಪ್ಪನೆಯ ಹತ್ತಿ ಬಟ್ಟೆಗಳಿಗೆ 2005-06ರಲ್ಲಿ ಭೌಗೋಳಿಕ ಮಾನ್ಯತೆ (GI Tag) ಕೂಡ ದೊರಕಿದೆ.

2000ನೇ ಇಸವಿಯ ಆರಂಭದಲ್ಲಿ ಈ ಭಾಗದಲ್ಲಿ ಸುಮಾರು 20,000 ನೇಕಾರರಿದ್ದರು. ಆದರೆ, ಬದಲಾದ ಕಾಲಘಟ್ಟದಲ್ಲಿ ಮತ್ತು ಸರ್ಕಾರದ ಸಹಕಾರಿ ಸಂಸ್ಥೆಗಳ ಬೇಡಿಕೆ ಕುಸಿದ ಕಾರಣ, ಈ ಸಂಖ್ಯೆ ಕೇವಲ 3,000ಕ್ಕೆ ಇಳಿಯಿತು. ಯುವಜನತೆ ಉತ್ತಮ ಆದಾಯವನ್ನರಸಿ ಈ ವೃತ್ತಿಯಿಂದ ದೂರ ಸರಿಯುತ್ತಿದ್ದರು.

ಹೌಸ್ ಆಫ್ ಜಮಕ್ಕಾಳಂ: ಹೊಸ ಆಲೋಚನೆ, ಆರ್ಥಿಕ ಕ್ರಾಂತಿ

2026ರಲ್ಲಿ ವರ್ಷಾ ಹೌಸ್ ಆಫ್ ಜಮಕ್ಕಾಳಂ ಆರಂಭಿಸಿದರು. ಹಳೆಯ ವಿನ್ಯಾಸಗಳನ್ನ ಕೈಬಿಡದೆ, ಅದಕ್ಕೇ ಹೊಸ ಬಣ್ಣ ಮತ್ತು ಗುಣಮಟ್ಟವನ್ನ ಸೇರಿಸಿದರು. ಸಾಂಪ್ರದಾಯಿಕ ಪಟ್ಟೆ ವಿನ್ಯಾಸವನ್ನೇ ಬಳಸಿದ ಅವರ ಸ್ಮೈಲಿಂಗ್ ಪೌಚ್ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆಯಿತು.

ಕೇವಲ ವ್ಯಾಪಾರವಷ್ಟೇ ಅಲ್ಲದೆ, ನೇಕಾರರ ಆರ್ಥಿಕ ಮಟ್ಟ ಸುಧಾರಿಸುವುದು ವರ್ಷಾ ಅವರ ಪ್ರಮುಖ ಗುರಿಯಾಗಿತ್ತು. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ದಾರಕ್ಕೆ ಕೇವಲ 60-70 ರೂಪಾಯಿ ಇದ್ದರೆ, ವರ್ಷಾ 200 ರಿಂದ 550 ರೂಪಾಯಿ ಬೆಲೆಯ ಅತ್ಯುತ್ತಮ ದಾರವನ್ನ ಸ್ವತಃ ಖರೀದಿಸಿ ನೇಕಾರರಿಗೆ ನೀಡುತ್ತಾರೆ.

ಇನ್ನೂ, ಸ್ವಲ್ಪ ಕಷ್ಟದ ವಿನ್ಯಾಸಗಳಿಗೆ ಶೇ. 30 ರಿಂದ 35ರಷ್ಟು ಹೆಚ್ಚಿನ ಕೂಲಿಯನ್ನ ಮುಂಗಡವಾಗಿಯೇ ಪಾವತಿಸುತ್ತಾರೆ.

ಭವಾನಿ ನೇಕಾರರು: ಮರಳಿ ಬಂದ ನೆಮ್ಮದಿ ಮತ್ತು ಸಮುದಾಯಕ್ಕೆ ಬಲ

ವರ್ಷಾ ಅವರ ಈ ಪ್ರಯತ್ನದಿಂದ ಇಂದು ಸುಮಾರು 30 ರಿಂದ 35 ಭವಾನಿ ನೇಕಾರರು ಮತ್ತೆ ಮಗ್ಗದ ಮುಂದೆ ಉತ್ಸಾಹದಿಂದ ಕುಳಿತಿದ್ದಾರೆ. 56 ವರ್ಷದ ಅಗಿಲಾಂಡಮ್ ಮತ್ತು ಮರಿಯಮ್ಮ ಅವರಂತಹ ಹಿರಿಯ ನೇಕಾರರಿಗೆ ಈ ವೃತ್ತಿ ಈಗ ಕೇವಲ ಆದಾಯದ ಮೂಲವಲ್ಲ, ಬದಲಾಗಿ ಒಂದು ಆಪ್ತ ಸಮುದಾಯ.

"ಕುಳಿತು ಕೆಲಸ ಮಾಡುವುದರಿಂದ ಬೆನ್ನುನೋವು ಬರುತ್ತದೆ, ಆದರೆ ಇತರ ಮಹಿಳೆಯರೊಂದಿಗೆ ಸೇರಿ ನಗುತ್ತಾ, ಕಷ್ಟ-ಸುಖ ಹಂಚಿಕೊಳ್ಳುವಾಗ ಆ ನೋವು ಮರೆತುಹೋಗುತ್ತದೆ" ಎನ್ನುತ್ತಾರೆ ಅಗಿಲಾಂಡಮ್. ತಿಂಗಳಿಗೆ 2,000 ದಿಂದ 6,000 ರೂಪಾಯಿ ಸಂಪಾದಿಸುವ ಅವರು ಈಗ ಆರ್ಥಿಕವಾಗಿ ಸ್ವತಂತ್ರರು.

ವರ್ಷಾ ಶಿವಕುಮಾರ್ ಅವರ ಕನಸು

ಇಂದು ಹೌಸ್ ಆಫ್ ಜಮಕ್ಕಾಳಂ ಇನ್‌ಸ್ಟಾಗ್ರಾಮ್ ಮೂಲಕ ಜಗತ್ತಿನಾದ್ಯಂತ ಗ್ರಾಹಕರನ್ನ ತಲುಪುತ್ತಿದೆ. ವಿಶೇಷವಾಗಿ ಶ್ರೀಲಂಕಾದ ತಮಿಳು ವಲಸಿಗರು ತಮ್ಮ ಮದುವೆ ಹಾಗೂ ಇತರ ಶುಭಕಾರ್ಯಗಳಿಗೆ ಜಮಕ್ಕಾಳಂ ಬಟ್ಟೆಗಳನ್ನ ವಿಶೇಷವಾಗಿ ಆರ್ಡರ್ ಮಾಡುತ್ತಿದ್ದಾರೆ.

10,000 ದಿಂದ 30,000 ರೂಪಾಯಿ ಬೆಲೆಬಾಳುವ ಕಸ್ಟಮೈಸ್ಡ್ ವಿನ್ಯಾಸಗಳನ್ನ ಇಬ್ಬರು ನೇಕಾರರು ಸೇರಿ ನಾಲ್ಕು ದಿನಗಳಲ್ಲಿ ಸಿದ್ಧಪಡಿಸುತ್ತಾರೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ನೇಕಾರರ ಕಾರ್ಡ್ ಪಡೆದ ಅತ್ಯಂತ ಕಿರಿಯ ನೇಕಾರ ಮಹಿಳೆ ಎಂಬ ಹೆಗ್ಗಳಿಕೆಗೆ ವರ್ಷಾ ಪಾತ್ರರಾಗಿದ್ದಾರೆ. 300 ವರ್ಷಗಳ ಹಳೆಯ ಕಲೆಯನ್ನ ಉಳಿಸುವುದರ ಜೊತೆಗೆ, ಭವಿಷ್ಯದ ಪೀಳಿಗೆಗೆ ಅದನ್ನ ಕೊಂಡೊಯ್ಯುವ ಅವರ ಶ್ರಮ ನಿಜಕ್ಕೂ ಶ್ಲಾಘನೀಯ.

(ನೀವು ಹೌಸ್ ಆಫ್ ಜಮಕ್ಕಾಳಂ ಉತ್ಪನ್ನಗಳನ್ನ ಖರೀದಿಸಲು ಅಥವಾ ಅವರನ್ನ ಫಾಲೋ ಮಾಡಲು ಬಯಸಿದರೆ, ವಾಟ್ಸಾಪ್: +91 77083 73775 ಅಥವಾ ಇನ್‌ಸ್ಟಾಗ್ರಾಮ್ @hoj_india ಮೂಲಕ ಸಂಪರ್ಕಿಸಬಹುದು.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+