"ತಮಿಳುನಾಡು ಹೊಸೂರು- ಬೊಮ್ಮಸಂದ್ರ ಅಂತರರಾಜ್ಯ ಮೆಟ್ರೋಗಾಗಿ ಲಾಬಿ ಮಾಡುತ್ತಿದೆ; ಕರ್ನಾಟಕ ಸರ್ಕಾರ ಕಣ್ಮುಚ್ಚಿ ಕುಳಿತಿದೆ"
Hosur-Bommasandra Metro Row: ತಮಿಳುನಾಡು ಸರ್ಕಾರವು ಹೊಸೂರು- ಬೊಮ್ಮಸಂದ್ರ ಅಂತರರಾಜ್ಯ ಮೆಟ್ರೋಗಾಗಿ ಲಾಬಿ ಮಾಡುತ್ತಿದೆಯಾದರೂ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕಣ್ಮುಚ್ಚಿ ಕುಳಿತಿದೆ ಎಂದು ಜೆಡಿಎಸ್ ಪಕ್ಷವು ದೂರಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ಪಕ್ಷವು, ತಮಿಳುನಾಡು ಸರ್ಕಾರ ಹೊಸೂರು- ಬೊಮ್ಮಸಂದ್ರ ಅಂತರರಾಜ್ಯ ಮೆಟ್ರೋಗಾಗಿ ಲಾಬಿ ಮಾಡುತ್ತಿದ್ದರೂ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕಣ್ಮುಚ್ಚಿ ಕುಳಿತಿದೆ.

ಬೆಂಗಳೂರು ಐಟಿ ಪಾರ್ಕ್, ಕೈಗಾರಿಕೆಗಳು, ಹೂಡಿಕೆಗಳು ಹಾಗೂ ಕನ್ನಡಿಗರ ಉದ್ಯೋಗಾವಕಾಶಗಳ ಮೇಲೆ ಈ ಅಂತರ ರಾಜ್ಯ ಮೆಟ್ರೋ ಯೋಜನೆಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಹಾಗೂ ಸುತ್ತಮುತ್ತಲಿನ ಹೂಡಿಕೆಗಳು, ಉತ್ಪಾದನಾ ಘಟಕಗಳು ತಮಿಳುನಾಡಿಗೆ ವಲಸೆ ಹೋಗುವ ಅಪಾಯವಿದ್ದರೂ ಮೈತ್ರಿಕೂಟದ ಓಲೈಕೆಗಾಗಿ ರಾಜ್ಯದ ಹಿತಾಸಕ್ತಿ ಬಲಿಕೊಡುವುದು ನಾಚಿಕೆಗೇಡು.
ಕರ್ನಾಟಕಕ್ಕೆ ಆಗುವ ಆರ್ಥಿಕ ನಷ್ಟ ಮತ್ತು ಉದ್ಯೋಗ ಕಸಿಯುವಿಕೆಯ ಹೊಣೆಯನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೊರುತ್ತಾರೆಯೇ? ಕನ್ನಡಿಗರ ಉದ್ಯೋಗ ಮತ್ತು ರಾಜ್ಯದ ಕೈಗಾರಿಕಾ ಹಿತಾಸಕ್ತಿ ರಕ್ಷಣೆಗೆ ನಿಮ್ಮ ಸರ್ಕಾರದ ನಿಲುವೇನು? ಮುಖ್ಯಮಂತ್ರಿಗಳೇ ಮೌನ ಮುರಿದು ಉತ್ತರಿಸಿ.
ಎನ್‌ಡಿಎ ಮಿತ್ರಪಕ್ಷವಾಗಿ ಜೆಡಿಎಸ್ ವತಿಯಿಂದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಮ್ಮ ಕಳಕಳಿಯ ಮನವಿ: ಕರ್ನಾಟಕದ ಆರ್ಥಿಕತೆ, ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಸಂಪೂರ್ಣವಾಗಿ ಪರಿಶೀಲಿಸದೆ ತಮಿಳುನಾಡಿನ ಹೊಸೂರು-ಬೊಮ್ಮಸಂದ್ರ ಅಂತರರಾಜ್ಯ ಮೆಟ್ರೋ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ರಾಜ್ಯಗಳ ಅಭಿವೃದ್ಧಿಯ ಹೆಸರಿನಲ್ಲಿ ಕರ್ನಾಟಕದ ಹಿತಾಸಕ್ತಿ ಬಲಿಯಾಗಬಾರದು. ಕನ್ನಡಿಗರ ಉದ್ಯೋಗ, ರಾಜ್ಯದ ಕೈಗಾರಿಕೆಗಳ ಬೆಳವಣಿಗೆ ಮತ್ತು ರಾಜ್ಯದ ಆರ್ಥಿಕ ಭವಿಷ್ಯವೇ ನಮಗೆ ಮೊದಲ ಆದ್ಯತೆ. ಜೆಡಿಎಸ್ ಕನ್ನಡಿಗರ ಉದ್ಯೋಗ ರಕ್ಷಣೆಗೆ ಸದಾ ಬದ್ಧವಾಗಿದೆ ಎಂದೂ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ತಮಿಳುನಾಡು ವಿಜಯ್ ಹೇಳಿದ್ದೇನು ?
ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡಿನ ಹೊಸೂರು ಹಾಗೂ ಕರ್ನಾಟಕದ ಬೊಮ್ಮಸಂದ್ರ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ಯೋಜನೆಗೆ ಅನುಮೋದನೆ ಕೊಡುವಂತೆ ಕೋರಿದ್ದರು. ಇದೀಗ ಈ ವಿಚಾರಕ್ಕೆ ಕನ್ನಡಿಗರು, ವಿರೋಧ ಪಕ್ಷದಿಂದ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಹೊಸೂರು-ಬೊಮ್ಮಸಂದ್ರ ಮೆಟ್ರೋ ಮಾರ್ಗಕ್ಕೆ ಅನುಮೋದನೆ ನೀಡುವಂತೆ ಕೋರಿ ಅವರದ್ದೇ ಕಾರಣ ಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 11ರ ಭಾನುವಾರದಂದು ಚೆನ್ನೈ ಮೆಟ್ರೋ ರೈಲು ಹಂತ II ರ 15 ಕಿ.ಮೀ. ಪೂನಮಲ್ಲಿ ಬೈಪಾಸ್-ವಡಪಳನಿ ಮಾರ್ಗವನ್ನು ಉದ್ಘಾಟಿಸಿದರು ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ರೈಲು ಪ್ರಯಾಣ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು, 2026ರ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಡುವೆ ಎರಡು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದರು.
ಅಲ್ಲದೆ, ಈ ಯೋಜನೆಗಳು ಖಂಡಿತವಾಗಿಯೂ ಈ ಪ್ರದೇಶಕ್ಕೆ ಪ್ರಯೋಜನವನ್ನು ನೀಡುತ್ತವೆ. ಗೋದಾವರಿ-ಕಾವೇರಿ ಸಂಪರ್ಕ ಯೋಜನೆಯು ದಕ್ಷಿಣ ರಾಜ್ಯಗಳಲ್ಲಿ ಜಲಸಂಪನ್ಮೂಲಗಳನ್ನು ವೃದ್ಧಿಸುವ ಪ್ರಮುಖ ಅವಕಾಶವನ್ನು ಕಲ್ಪಿಸಲಿದೆ. ಭಾರತ ಸರ್ಕಾರವು ಆದ್ಯತೆ ನೀಡಿ ಅದನ್ನು ರಾಷ್ಟ್ರೀಯ ಯೋಜನೆಯಾಗಿ ಕೈಗೆತ್ತಿಕೊಳ್ಳಬೇಕೆಂದೂ ವಿಜಯ್ ಅವರು ಮನವಿ ಮಾಡಿದ್ದರು. ಆದರೆ, ಇದೀಗ ತಮಿಳುನಾಡು ಹೊಸೂರು ಹಾಗೂ ಕರ್ನಾಟಕದ ಬೊಮ್ಮಸಂದ್ರ ಅಂತರರಾಜ್ಯ ಮೆಟ್ರೋಗಾಗಿ ಲಾಬಿ ಮಾಡುತ್ತಿದೆ ಎನ್ನುವ ಆಕ್ಷೇಪ ವ್ಯಕ್ತವಾಗಿದೆ.


Click it and Unblock the Notifications
