ರಸ್ತೆಯಲ್ಲಿ ಒಂದೇ ಒಂದು ಕಸದ ಬುಟ್ಟಿ ಇಲ್ಲ; ಕಸ ಕಣ್ಣಿಗೆ ಬೀಳುವುದೂ ಇಲ್ಲ, ಅತ್ಯಂತ ಸ್ವಚ್ಛ ಗ್ರಾಮದ ಕತೆ ಇದು
ಈ ಊರು ಸಾಮಾನ್ಯ ಹಳ್ಳಿಯಂತೆ ಕಾಣುತ್ತದೆ. ಆದರೆ ಈ ಊರಿನ ಒಂದು ವಿಶೇಷ ಅಂದ್ರೆ ಈ ಊರಲ್ಲಿ ಹುಡುಕಿದರೂ ಒಂದೇ ಒಂದು ಕಸದ ಬುಟ್ಟಿ ಕಣ್ಣಿಗೆ ಬೀಳುವುದಿಲ್ಲ. ಹಾಗಂತ ಊರು ತುಂಬಾ ಕಸ ತುಂಬಿಕೊಂಡು ಗಲೀಜು ನಾರುತ್ತಿದೆ ಅಂತಾನೂ ಅಲ್ಲ. ಇದು ಅತ್ಯಂತ ಸ್ವಚ್ಛ ನಗರ, ಅದೂ ಕಸದ ಬುಟ್ಟಿಯನ್ನೇ ಬಳಸದೆಯೇ. ಅತ್ಯಂತ ಸ್ವಚ್ಛ ನಗರ ಅಂತ ಹೇಳೋವಾಗ ಯಾವುದೋ ಫಾರಿನ್ ಊರು ಅಂತಂದುಕೊಳ್ಳೊದು ಬೇಕಿಲ್ಲ. ಇದು ನಮ್ಮದೇ ದೇಶದ ಒಂದು ಊರು.
ಕಸದ ಬುಟ್ಟಿಯೇ ಇಡದ ಊರು
ನಾವಿಲ್ಲಿ ಹೇಳುತ್ತಿರುವುದು ಸಿಕ್ಕಿಂನ ಫಡಮ್ಚೆನ್ ಹಳ್ಳಿಯ ಬಗ್ಗೆ. ಇದು ಸಮುದ್ರ ಮಟ್ಟದಿಂದ 8,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಪ್ರದೇಶ. ಸಿಕ್ಕಿಂನ ಹಳೆಯ ರೇಷ್ಮೆ ಮಾರ್ಗದಲ್ಲಿ ಪ್ರಯಾಣಿಸುವ ಪ್ರವಾಸಿಗರನ್ನು ಈ ಹಳ್ಳಿ ಕೈ ಬೀಸಿ ಕರೆಯುತ್ತದೆ. ಪ್ರವಾಸಿಗರು ಇಲ್ಲಿಗೆ ಬರುತ್ತಾರೆಯಾದರೂ ಇಲ್ಲಿ ಸಾರ್ವಜನಿಕ ಕಸದ ಬುಟ್ಟಿಗಳನ್ನು ಬಳಸುವುದೇ ಇಲ್ಲ. ಕಸ ಕೂಡಾ ಕಣ್ಣಿಗೆ ಬೀಳುವುದಿಲ್ಲ. ಕಾರಣ ಇಲ್ಲಿ ರಸ್ತೆಬದಿ ಅಂದ್ರೆ ಕಸ ಎಸೆಯುವ ಜಾಗ ಅಲ್ಲ ಎನ್ನುವ ಪಾಠವನ್ನು ಎಲ್ಲರಿಗೂ ಹೇಳಿಕೊಡಲಾಗುತ್ತದೆ. ಈ ಒಂದು ಅಂಶ ಇಲ್ಲಿನ ಮಕ್ಕಳಿಂದ ಮುದುಕರವರೆಗೆ ಪ್ರತಿಯೊಬ್ಬರಿಗೂ ಮನದಟ್ಟು.

ಸ್ವಚ್ಛತಾ ಕ್ರಾಂತಿಯ ರೂವಾರಿ
2017 ರಲ್ಲಿ ಲಿಂಗ್ಟಮ್-ಫಡಮ್ಚೆನ್ ಪಂಚಾಯತ್ ಅಧ್ಯಕ್ಷರಾಗಿದ್ದ ದಾವಾ ಚೋಡೆನ್ ಭುಟಿಯಾ ಅವರೇ ಇಲ್ಲಿನ ಸ್ವಚ್ಛತಾ ಕ್ರಾಂತಿಯ ರೂವಾರಿ. 17 ಸ್ಥಳೀಯ ಮಹಿಳೆಯರನ್ನು ಒಟ್ಟುಗೂಡಿಸಿ ಸ್ವಚ್ಛತಾ ಸಹಯೋಗಿ ಗುಂಪನ್ನು ರಚನೆ ಮಾಡುತ್ತಾರೆ. ಈ ಗುಂಪಿನ ರಚನೆ ಮೂಲಕ ಎಲ್ಲವೂ ಬದಲಾಗುತ್ತದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಹಾಗಾಗಿ ಇಲ್ಲಿನ ತ್ಯಾಜ್ಯವನ್ನು ನಿರ್ವಹಿಸುವುದು ಅವರ ಮೊದಲ ಗುರಿಯಾಗಿತ್ತು.
ಪಂಚಾಯತ್ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿದ ನಂತರವೂ ಭುಟಿಯಾ ಗ್ರಾಮದ ತ್ಯಾಜ್ಯ ನಿರ್ವಹಣೆಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ಇವರ ಕಠಿಣ ಪರಿಶಶ್ರಮಕ್ಕಾಗಿ 2023 ರಲ್ಲಿ ಫಡಮ್ಚೆನ್ ಸಿಕ್ಕಿಂನ ಅತ್ಯಂತ ಸ್ವಚ್ಛ ಗ್ರಾಮ ಎಂಬ ಬಿರುದನ್ನು ಪಡೆಯುತ್ತದೆ.
ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ
ಈ ಗ್ರಾಮವು ಪಂಗೋಲಖಾ ವನ್ಯಜೀವಿ ಅಭಯಾರಣ್ಯಕ್ಕೆ ಹತ್ತಿರದಲ್ಲಿದೆ. ಜುಲುಕ್ ಮತ್ತು ಸಿಲ್ಕ್ ಮಾರ್ಗದ ಇತರ ಭಾಗಗಳಿಗೆ ಪ್ರಯಾಣಿಸುವ ಪ್ರವಾಸಿಗರಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಊರು. ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವುದು ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಆಹಾರ ಪ್ಯಾಕೇಜಿಂಗ್ ಮತ್ತು ಇತರ ತ್ಯಾಜ್ಯಗಳನ್ನು ಕೂಡಾ ಎಸೆಯುತ್ತಾರೆ.
ಮನೆಯಲ್ಲಿಯೇ ಕಸ ಬೇರ್ಪಡಿಸುವ ವ್ಯವಸ್ಥೆ
ಕೇವಲ ಕಸವನ್ನು ಸಂಗ್ರಹಿಸುವುದು ಇಲ್ಲಿರುವ ಸವಾಲು ಅಲ್ಲ ಸಂಗ್ರಹಿಸಿದ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕಲ್ಲ. ಇದಕ್ಕಾಗಿ ಈ ಊರಿನ ಜನ ಸ್ವಲ್ಪ ಭಿನ್ನವಾಗಿ ಯೋಚನೆ ಮಾಡಿದ್ದಾರೆ. ಎಲ್ಲಾ ತ್ಯಾಜ್ಯವನ್ನು ಒಟ್ಟಿಗೆ ಸಂಗ್ರಹಿಸಿ ನಂತರ ಅದನ್ನು ನಿರ್ವಹಿಸುವ ಬದಲು ಮನೆಯ ಮಟ್ಟದಲ್ಲಿಯೇ ಕಸ ಬೇರ್ಪಡಿಸುವ ವ್ಯವಸ್ಥೆಯನ್ನು ಬಲಪಡಿಸುತ್ತಾರೆ. ಹಸಿ ಕಸ, ಒಣಕಸವನ್ನು ಚಾಚೂ ತಪ್ಪದಂತೆ ಎಲ್ಲರೂ ಬೇರ್ಪಡಿಸುವುದಕ್ಕೆ ಶುರು ಮಾಡ್ತಾರೆ. ಪ್ಲಾಸ್ಟಿಕ್ ಮತ್ತು ಇತರ ಒಣ ತ್ಯಾಜ್ಯವನ್ನು ಸಂಗ್ರಹಿಸಿ, ವಿಂಗಡಿಸಿ ರಿಸೈಕಲಿಂಗ್‌ಗಾಗಿ ಕಳುಹಿಸಲಾಗುತ್ತಿತ್ತು.
ವ್ಯವಸ್ಥೆಯ ಬೆನ್ನೆಲುಬಾದ 17 ಮಹಿಳೆಯರು
ಫಡಮ್ಚೆನ್ ಹೊಸ ರೂಪ ತಳೆಯುವುದಕ್ಕೆ ಅಸಲಿ ಕಾರಣ ಕರ್ತರೆಂದರೆ ಸ್ವಚ್ಛತಾ ಸಹಯೋಗಿ ಗುಂಪಿನ ಸದಸ್ಯರು. ಗ್ರಾಮದ ತ್ಯಾಜ್ಯ ನಿರ್ವಹಣಾ ಪ್ರಯತ್ನವು ನಂತರ ಹೋಟೆಲ್‌ಗಳು, ಹೋಂಸ್ಟೇಗಳು, ಅಂಗಡಿಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಜನರಿಗೆ ತರಬೇತಿಯನ್ನು ಕೊಡಲಾಯ್ತು. ತ್ಯಾಜ್ಯ ವಿಂಗಡಣೆ ಮತ್ತು ಗೊಬ್ಬರ ತಯಾರಿಕೆಯ ಮೇಲೆ ಗಮನ ಕೇಂದ್ರೀಕರಿಸಲಾಯಿತು.
ಈ ಊರಿನವರು ಪ್ರತಿ ವಾರ ಹಲವಾರು ಕಿಲೋಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಣೆಗಾಗಿ ಕೊಡುತ್ತಾರೆ. ಸಂಗ್ರಹಿಸಿದ ಪ್ಲಾಸ್ಟಿಕ್ ಅನ್ನು ವಿಂಗಡಿಸಿ ಮರುಬಳಕೆ ಮಾಡಲಾಗುತ್ತದೆ ಅಥವಾ ಚೀಲಗಳು ಮತ್ತು ಬುಟ್ಟಿಗಳಂತಹ ಉತ್ಪನ್ನಗಳಾಗಿ ಪರಿವರ್ತಿಸಲಾಗುತ್ತದೆ.
ಲಾಕ್‌ಡೌನ್‌ನಲ್ಲಿಯೂ ನಿಲ್ಲಿಸಲಿಲ್ಲ ಕಸ ವಿಗಂಡಣೆ ಕಾರ್ಯ
ಲಾಕ್‌ಡೌನ್‌ನಲ್ಲಿಯೂ ತಮ್ಮ ಕೆಲಸದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ ಈ ಊರಿನವರು. 2020 ರಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಕಸದ ವಾಹನಕ್ಕೆ ಚಾಲಕ ಇರಲಿಲ್ಲ. ತ್ಯಾಜ್ಯವನ್ನು ಸಂಗ್ರಹಣಾ ಕೇಂದ್ರಕ್ಕೆ ಸಾಗಿಸಲು ಕಸದ ಟ್ರಕ್ ಅನ್ನು ಸ್ವತಃ ಓಡಿಸಬೇಕಾಗಿತ್ತು. ಆದರೂ ಇಲ್ಲಿನ ಜನರು ಕಸದ ವಿಷಯದಲ್ಲಿ ರಾಜಿಯಾಗಲಿಲ್ಲ.
ಇಲ್ಲಿಯವರು ಅಡುಗೆಮನೆಯ ತ್ಯಾಜ್ಯವನ್ನು ಕಸವಾಗಿ ಕಳುಹಿಸುವ ಬದಲು ಗೊಬ್ಬರಕ್ಕಾಗಿ ಬಳಸುತ್ತಾರೆ. ಒಣ ತ್ಯಾಜ್ಯವನ್ನು ಮರುಬಳಕೆ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ.
ಫಡಮ್ಚೆನ್ 8,200 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದೆ ಮತ್ತು ಪಂಗೋಲಖಾ ವನ್ಯಜೀವಿ ಅಭಯಾರಣ್ಯದ ಕಾಡುಗಳಿಂದ ಆವೃತವಾಗಿದೆ. ಹಳೆಯ ಸಿಲ್ಕ್ ಮಾರ್ಗದ ಮೂಲಕ ಪ್ರಯಾಣಿಸುವ ಪ್ರವಾಸಿಗರಿಗೆ ಇದು ಒಂದು ನಿಲುಗಡೆ ಸ್ಥಳವಾಗಿದೆ. ಈ ಗ್ರಾಮದಲ್ಲಿ ಸುಮಾರು 300-350 ಕುಟುಂಬಗಳು ವಾಸಿಸುತ್ತಿವೆ. ಪಕ್ಷಿ ವೀಕ್ಷಕರು ಮತ್ತು ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾ ಇರುತ್ತಾರೆ.
ಅತ್ಯಂತ ಸ್ವಚ್ಛ ಗ್ರಾಮವೆಂಬ ಬಿರುದು
2023 ರಲ್ಲಿ, ಸಿಕ್ಕಿಂ ಸರ್ಕಾರವು ಲಿಂಗ್ಟಮ್ ಫಡಮ್ಚೆನ್ ಗ್ರಾಮ ಪಂಚಾಯತ ಘಟಕವನ್ನು ರಾಜ್ಯದ ಅತ್ಯಂತ ಸ್ವಚ್ಛ ಗ್ರಾಮವೆಂದು ಅಧಿಕೃತವಾಗಿ ಗುರುತಿಸಿತು. ಸರ್ಕಾರಿ ದಾಖಲೆಯ ಪ್ರಕಾರ ಇದು ಸ್ವಚ್ಛ-ಗ್ರಾಮ ವಿಭಾಗದ ಪ್ರಶಸ್ತಿ ಮತ್ತು 5 ಲಕ್ಷ ನಗದು ಬಹುಮಾನವನ್ನು ಗೆದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕಾಗಿ ಸರ್ಕಾರವು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ 16 ಲಕ್ಷ ರೂಪಾಯಿ ನೀಡಿದೆ ಎನ್ನಲಾಗಿದೆ.
ಈ ಸ್ವಚ್ಛ ಅಭಿಯಾನ ಕೇವಲ ಈ ಹಳ್ಳಿಗೆ ಸೀಮಿತವಾಗಿ ಉಳಿದಿದೆ.ಇಲ್ಲಿನ ಜನರು ತಮ್ಮ ಮನೆಯಿಂದಲೇ ಬದಲಾವಣೆಯನ್ನು ಅಳವಡಿಸಿಕೊಂಡರು. ಸಂಗ್ರಹಣೆ ಮತ್ತು ನಿರ್ವಹಣೆ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಂಡರು. ಕೊನೆಗೆ ಗ್ರಾಮವನ್ನು ರಾಜ್ಯದ-ಮಾನ್ಯತೆ ಪಡೆದ ಮಾದರಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡಿದರು. ಪ್ರತಿಯೊಂದು ರಸ್ತೆಯಲ್ಲೂ ಕಸದ ಬುಟ್ಟಿ ಇಡುವುದರಿಂದ ಸ್ವಚ್ಛ ಗ್ರಾಮವನ್ನು ಸ್ವಚ್ಛವಾಗಿಡಲು ಸಾಧ್ಯವಿಲ್ಲ. ಇದರ ಬದಲು ತ್ಯಾಜ್ಯವನ್ನು ರಸ್ತೆಗೆ ಬರುವ ಮೊದಲೇ ವಿಲೇವಾರಿ ಮಾಡುವಿದು ಅನಿವಾರ್ಯವಾಗಿದೆ.


Click it and Unblock the Notifications
