Himachal Pradesh CM: ಒಂದು ಮುಖ್ಯಮಂತ್ರಿ ಸ್ಥಾನ, ಹಲವು ಆಕಾಂಕ್ಷಿಗಳು: ಹಿಮಾಚಲ ಸಿಎಂ ರೇಸ್‌ನಲ್ಲಿ ಯಾರಿದ್ದಾರೆ?
ಶಿಮ್ಲಾ, ಡಿಸೆಂಬರ್ 9: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯ ಗಳಿಸಿದೆ. ಈಗ ಕಾಂಗ್ರೆಸ್ ಮುಂದಿರುವ ಸವಾಲೆಂದರೆ, ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು. ಈ ಕುರಿತಂತೆ ಚರ್ಚಿಸಲು ಕಾಂಗ್ರೆಸ್ ಪಕ್ಷವು ಶಾಸಕರ ಸಭೆ ಕರೆದಿದೆ. ಆದರೆ, ಇದು ಪಕ್ಷಕ್ಕೆ ಸುಲಭದ ಮಾತಲ್ಲ ಎಂಬ ಮಾತುಗಳು ಕೇಳಬಂದಿವೆ. ಕಾರಣ, ಹಿಮಾಚಲ ಮುಖ್ಯಮಂತ್ರಿ ಸ್ಥಾನಕ್ಕೆ ಕನಿಷ್ಠ ನಾಲ್ಕು ಶಾಸಕರು ಪೈಪೋಟಿ ನಡೆಸಿದ್ದಾರೆ.
ಈ ಕುರಿತಂತೆ ಚರ್ಚೆ ನಡೆಸಲು ಶಿಮ್ಲಾದ ರಾಡಿಸನ್ ಹೋಟೆಲ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ.

ಮುಖ್ಯಮಂತ್ರಿ ರೇಸ್‌ನಲ್ಲಿ ಪ್ರಭಾವಿ ಪ್ರತಿಭಾ ಸಿಂಗ್
ಸಿಎಂ ರೇಸ್‌ನಲ್ಲಿ ಹಲವು ಪ್ರಮುಖರ ಹೆಸರುಗಳು ಕೇಳಿಬಂದಿವೆ. ಕಾಂಗ್ರೆಸ್‌ನ ಹಿಮಾಚಲ ಪ್ರದೇಶ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರು ಹೆಸರು ಪ್ರಮುಖರ ಪಟ್ಟಿಯಲ್ಲಿ ಮೊದಲನೆಯದು. ಕಳೆದ ವರ್ಷ ಮೃತಪಟ್ಟ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್.
ಪ್ರತಿಭಾ ಸಿಂಗ್ ಮಂಡಿ ಲೋಕಸಭಾ ಸಂಸದರಾಗಿದ್ದಾರೆ. ಅವರು ರಾಜಕೀಯ ಕುಟುಂಬಕ್ಕೆ ಸೇರಿದವರು. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲವಾದರೂ, ಕಾಂಗ್ರೆಸ್ ಪ್ರಚಾರವನ್ನು ಸಮರ್ಥವಾಗಿ ಮುನ್ನಡೆಸಿದರು. ಹಿಮಾಚಲ ಪ್ರದೇಶದಲ್ಲಿ ಮೂರು ದಶಕಗಳ ಕಾಲ ಪಕ್ಷವನ್ನು ಮುನ್ನಡೆಸಿದ್ದ ತಮ್ಮ ಪತಿ ವೀರಭದ್ರ ಸಿಂಗ್‌ಗೆ ನಿಷ್ಠರಾಗಿದ್ದ ಕಾಂಗ್ರೆಸ್ ಶಾಸಕರ ಬೆಂಬಲಕ್ಕೆ ಮನವಿ ಮಾಡಿದ್ದಾರೆ.

ಶಾಸಕರಾಗಿ ಆಯ್ಕೆಯಾದ ವಿಕ್ರಮಾದಿತ್ಯ ಸಿಂಗ್
ಶಿಮ್ಲಾ ಗ್ರಾಮಾಂತರದಿಂದ ಗೆದ್ದಿರುವ ಪ್ರತಿಭಾ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರು ತಮ್ಮ ತಾಯಿ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 'ಪ್ರತಿಭಾ ಸಿಂಗ್ ಅವರಿಗೆ ದೊಡ್ಡ ಜವಾಬ್ದಾರಿ ಸಿಗಬೇಕು ಎಂದು ನಾನು(ಮಗನಾಗಿ) ಬಯಸುತ್ತೇನೆ. ಮಗನ ಜೊತೆಗೆ, ನಾನು ಪಕ್ಷದ ಜವಾಬ್ದಾರಿಯುತ ನಾಯಕನೂ ಆಗಿದ್ದೇನೆ' ಎಂದು ಹೇಳಿದ್ದಾರೆ.
ಪಕ್ಷವು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದನ್ನು ಗೌರವಿಸುತ್ತೇವೆ. ಜನರಿಗೆ ಏನು ಬೇಕೋ, ಆ ನಿರ್ಧಾರವನ್ನು ಪಕ್ಷ ಮಾಡುತ್ತದೆ ಎಂಬುದು ನನಗೆ ಖಾತ್ರಿಯಿದೆ ಎಂದು ತಿಳಿಸಿದ್ದಾರೆ.
ನಾವು ವೀರಭದ್ರ ಸಿಂಗ್ ಅವರು ತೋರಿಸಿದ ಹಾದಿಯಲ್ಲಿ ನಡೆಯಬೇಕು. ಸರ್ಕಾರವು 'ವೀರಭದ್ರ ಸಿಂಗ್ ವಿಕಾಸ್ ಮಾದರಿ'ಯಲ್ಲಿ ಕೆಲಸ ಮಾಡುತ್ತದೆ. ಸ್ವರ್ಗದಲ್ಲಿರುವ ಅವರು ಸಂತೋಷವಾಗಿರಬೇಕು ಎಂದು ಹೇಳಿದ್ದಾರೆ.

ಸಿಎಂ ರೇಸ್‌ನಲ್ಲಿ ಇನ್ನೂ ಮೂವರು ಪ್ರಭಾವಿಗಳು
ಪ್ರತಿಭಾ ಸಿಂಗ್ ಹೊರತಾಗಿ ಹಿಮಾಚಲ ಪ್ರದೇಶದ ಸಿಎಂ ರೇಸ್‌ನಲ್ಲಿ ಇನ್ನೂ ಮೂವರು ಇದ್ದಾರೆ. ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸುಖವಿಂದರ್ ಸಿಂಗ್ ಸುಖು ಅವರು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ ಮತ್ತು ಶಾಸಕ ಹರ್ಷವರ್ಧನ್ ಚೌಹಾಣ್ ಕೂಡ ಸಿಎಂ ರೇಸ್‌ನಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.
ಈ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷವು 'ಆಪರೇಷನ್ ಕಮಲ'ದ ಭೀತಿಯಲ್ಲಿದೆ. ಬಿಜೆಪಿಯು ಹಲವು ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರಗಳನ್ನು ಕೆಡವಿತ್ತು. ಶಾಸಕರನ್ನು ಖರೀದಿಸಿದ ನಂತರ ಹೊಸ ಬಿಜೆಪಿ ಸರ್ಕಾರಗಳು ರಚನೆಯಾಗಿದ್ದವು.

ಕಾಂಗ್ರೆಸ್- ಬಿಜೆಪಿ ನಡುವೆ ನೇರ ಹಣಾಹಣಿ
ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ. ಈ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವಿನ ನೇರ ಹಣಾಹಣಿಗೆ ಕಾರಣವಾಗಿತ್ತು. ಹಿಮಾಚಲದ ಒಟ್ಟು 68 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ. ಬಿಜೆಪಿಗೆ 25 ಸ್ಥಾನಗಳು ಲಭಿಸಿವೆ. ಮೂವರು ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.












Click it and Unblock the Notifications