ಹಿಮಾಚಲ ಪ್ರದೇಶ ಚುನಾವಣೆ; ಅಭ್ಯರ್ಥಿಗಳ ಆಯ್ಕೆಗೆ ಶೀಘ್ರದಲ್ಲೇ ಬಿಜೆಪಿ ಸಭೆ
ನವದೆಹಲಿ, ಅ.16: ಹಿಮಾಚಲ ಪ್ರದೇಶದಲ್ಲಿ ಭಾರತೀಯ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಯನ್ನು ಘೋಷಿಸಿದೆ. ನವೆಂಬರ್ 12 ರಂದು ಒಂದು ಸುತ್ತಿನಲ್ಲಿ ಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳು ಚುರುಕಾಗಿ ಅಖಾಡಕ್ಕೆ ಇಳಿಯತೊಡಗಿವೆ.
ಅಕ್ಟೋಬರ್ 17 ರಂದು ಪ್ರಾರಂಭವಾಗುವ ನಾಮನಿರ್ದೇಶನ ಪ್ರಕ್ರಿಯೆಯ ಮೊದಲು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ತಯಾರಾಗುತ್ತಿದೆ. ಹೀಗಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇಂದ್ರ ಚುನಾವಣಾ ಸಮಿತಿಯು (ಸಿಇಸಿ) ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಶೀಘ್ರದಲ್ಲೇ ಸಭೆ ಸೇರುವ ಸಾಧ್ಯತೆಯಿದೆ.
ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಹೊರಬೀಳಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸೋಮವಾರ, ಹಿಮಾಚಲ ಪ್ರದೇಶದಲ್ಲಿನ ಪಕ್ಷದ ಪ್ರಮುಖ ಗುಂಪಿನ ಸಭೆಯನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೆಯಲಾಗುವುದು, ಇದರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಭಾಗವಹಿಸಲಿದ್ದಾರೆ.
ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಪಕ್ಷದ ಸಿಇಸಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ನೀಡಲಿದೆ. ಈ ಬಾರಿಯ ಚುನಾವಣೆಯಲ್ಲಿ ಹಲವು ಹಾಲಿ ಸಚಿವರು ಮತ್ತು ಶಾಸಕರ ಟಿಕೆಟ್ ರದ್ದಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ನಡೆದ ರ್‍ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಧಾನಸಭಾ ಚುನಾವಣೆಯ ಬಿಜೆಪಿಯ ಪ್ರಚಾರ ಗೀತೆ 'ಹಿಮಾಚಲ ಕಿ ಪುಕಾರ್ ಫಿರ್ ಬಿಜೆಪಿ ಸರ್ಕಾರ್' ಅನ್ನು ಬಿಡುಗಡೆ ಮಾಡಿದರು. ಸಿರ್ಮೌರ್‌ನ ಸಾತುವಾನ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಅವರು ಪ್ರದೇಶದ ಪ್ರಭಾವಿ ಹಾಟಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದರು.

ಹಿಮಾಚಲದ ಹಾಟಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ಸಿಕ್ಕಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಅವರು, 'ಬುಡಕಟ್ಟು' ಸ್ಥಾನಮಾನಕ್ಕಾಗಿ ಸಮುದಾಯದ 55 ವರ್ಷಗಳ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಗೊಳಿಸಿದ್ದಾರೆ ಸಮುದಾಯದ ವೇದನೆಯನ್ನು ಅರ್ಥಮಾಡಿಕೊಂಡಿದ್ದಾರೆ" ಎಂದಿದ್ದಾರೆ.
ಜೊತೆಗೆ ಮೂರನೇ ಎರಡರಷ್ಟು ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ 2017ರ ವಿಧಾನಸಭೆ ಚುನಾವಣೆಯಲ್ಲಿ 68 ಸದಸ್ಯ ಬಲದ ಸದನದಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಪೂರ್ಣ ಬಹುಮತ ಪಡೆದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 21 ಸ್ಥಾನಗಳನ್ನು ಮಾತ್ರ ತನ್ನದಾಗಿಸಿಕೊಂಡಿತ್ತು.












Click it and Unblock the Notifications