
ಹಿಮಾಚಲ ಪ್ರದೇಶ ಚುನಾವಣೆ: ಎರಡು ದಿನದಲ್ಲಿ 6 ರ್‍ಯಾಲಿ ನಡೆಸಲಿರುವ ಅಮಿತ್ ಶಾ
ಶಿಮ್ಲಾ, ಅ. 30: ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದೆ. ಈಗಾಗಲೇ ಹೊಸ ಶಿಮ್ಲಾ ಕಚೇರಿಯನ್ನು ಓಪನ್ ಮಾಡಿರುವ ಬಿಜೆಪಿ, ನೇರವಾಗಿ ಅಮಿತ್ ಶಾರನ್ನು ಕಣಕ್ಕೆ ಇಳಿಸಿದೆ. ನವೆಂಬರ್ 1 ರಿಂದ ಬಿಜೆಪಿ ನಾಯಕ ಅಮಿತ್ ಶಾ ಸರಣಿ ರ್‍ಯಾಲಿಗಳನ್ನು ನಡೆಸಲಿದ್ದಾರೆ.
ನವೆಂಬರ್ 1 ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಮಾಚಲ ಪ್ರದೇಶದಲ್ಲಿ ಎರಡು ದಿನಗಳ ಅವಧಿಯಲ್ಲಿ ಆರು ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎರಡು ದಿನಗಳ ಪ್ರವಾಸದ ವೇಳೆ ಅವರು ಸಾಂಸ್ಥಿಕ ಸಭೆಗಳನ್ನು ಸಹ ನಡೆಸಲಿದ್ದಾರೆ ಎಂದು ಬಿಜೆಪಿ ಕಚೇರಿಯ ಹೇಳಿಕೆ ತಿಳಿಸಿದೆ.
ಹಿಮಾಚಲ ಪ್ರದೇಶ ಚುನಾವಣೆ 2022: ಸಂಭಾವ್ಯ ಸಿಎಂ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ಮೂಲಗಳ ಪ್ರಕಾರ, ನವೆಂಬರ್ 1 ಮತ್ತು 2 ರಂದು ಶಿಮ್ಲಾದಲ್ಲಿ ಅಮಿತ್ ಶಾ, ಬಿಜೆಪಿ ರಾಜ್ಯ ಘಟಕದ ಹಿರಿಯ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ನವೆಂಬರ್ 1 ರಂದು ಅವರು ಕ್ರಮವಾಗಿ ಭಟ್ಟಿಯಾಟ್, ಕರ್ಸೋಗ್ ಮತ್ತು ಕುಸುಂಪಟ್ಟಿ ವಿಧಾನಸಭಾ ಕ್ಷೇತ್ರಗಳಲ್ಲಿ ರ್‍ಯಾಲಿಗಳನ್ನು ನಡೆಸಲಿದ್ದಾರೆ. ಮರುದಿನ ಧರ್ಮಶಾಲಾ, ನಂದನ್ ಮತ್ತು ನಲಗಢದಲ್ಲಿ ರ್‍ಯಾಲಿಗಳನ್ನು ನಡೆಸಲಿದ್ದಾರೆ.

ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿರುವ ಬಿಜೆಪಿ, ಕಾಂಗ್ರೆಸ್
ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12 ರಂದು ಮತದಾನ ನಡೆಯಲಿದ್ದು, ಹೊಸ ಸರ್ಕಾರಕ್ಕೆ ಎಲ್ಲವೂ ಸಿದ್ಧವಾಗಿದೆ. ಸಾಂಪ್ರದಾಯಿಕ ಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ತಮ್ಮ ರಾಜಕೀಯ ಪ್ರಚಾರವನ್ನು ತೀವ್ರಗೊಳಿಸಿವೆ. 68 ಸದಸ್ಯ ಬಲದ ವಿಧಾನಸಭೆಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ.
ಬಿಜೆಪಿಯ ಹಿಮಾಚಲ ಪ್ರದೇಶ ಅಧ್ಯಕ್ಷ ಸುರೇಶ್ ಕುಮಾರ್ ಕಶ್ಯಪ್, "ನಾವು ಅಧಿಕಾರಕ್ಕೆ ಬಂದರೆ ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ರಾಜ್ಯವನ್ನು ಮತ್ತೆ ಮುನ್ನಡೆಸುತ್ತಾರೆ. ಸರ್ಕಾರ ರಚಿಸುವ ಭರವಸೆ ನಮಗಿದೆ. ಟಿಕೆಟ್ ಹಂಚಿಕೆಯ ನಂತರ ನಮ್ಮ ಅನೇಕ ನಾಯಕರು ಅಸಮಾಧಾನಗೊಂಡಿದ್ದರೂ, ಪಕ್ಷವು ಗೆಲುವು ಸಾಧಿಸಲಿದೆ" ಎಂದಿದ್ದಾರೆ.

ಸಿಎಂ ಅಭ್ಯರ್ಥಿಗಳ ನಡುವೆ ಪ್ರಭಲ ಪೈಪೋಟಿ
ಕಾಂಗ್ರೆಸ್‌ಗೆ ಮೂವರು ಪ್ರಬಲ ಸ್ಪರ್ಧಿಗಳಿದ್ದು, ಅವರು ಸಂಭಾವ್ಯ ಸಿಎಂ ಅಭ್ಯರ್ಥಿಗಳಾಗಿದ್ದಾರೆ. ಆ ಪಟ್ಟಿಯಲ್ಲಿ ಮೊದಲ ಹೆಸರು ಸುಖವಿಂದರ್ ಸಿಂಗ್. ನಡೌನ್ ವಿಧಾನಸಭಾ ಕ್ಷೇತ್ರದಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಆಯ್ಕೆಯಾದರೆ ಸುಖವಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಅವರನ್ನು ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ ನಂತರ, ತುಂಬಾ ಸಕ್ರಿಯರಾಗಿದ್ದಾರೆ. ಮೂರು ಬಾರಿ ಹಿಮಾಚಲ ಪ್ರದೇಶದ ಶಾಸಕರಾಗಿರುವ ಅವರು ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯರಿಂದ ಬೆಂಬಲವನ್ನು ಗಳಿಸಿದ್ದಾರೆ.

ಮಾಜಿ ಸಿಎಂ ವೀರಭದ್ರ ಸಿಂಗ್ ಪತ್ನಿ ಪ್ರತಿಭಾ ಸಿಂಗ್ ಪ್ರಬಲ ಅಭ್ಯರ್ಥಿ
ಮುಖೇಶ್ ಅಗ್ನಿಹೋತ್ರಿ ಕಾಂಗ್ರೆಸ್‌ಗೆ ಸಂಭಾವ್ಯ ಅಭ್ಯರ್ಥಿ. ಹರೋಲಿ ವಿಧಾನಸಭಾ ಕ್ಷೇತ್ರದ ಸದಸ್ಯ ಅಗ್ನಿಹೋತ್ರಿ ಅವರಿಗೆ ಟಿಕೆಟ್ ನೀಡಲಾಗಿದೆ. 2003 ರಲ್ಲಿ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು 2007 ರಲ್ಲಿ ಮರು ಆಯ್ಕೆಯಾಗಿದ್ದರು. 2012 ಮತ್ತು 2017ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಗ್ನಿಹೋತ್ರಿ ಗೆಲುವು ದಾಖಲಿಸಿದ್ದಾರೆ. ಅಗ್ನಿಹೋತ್ರಿ ಅವರು ತಮ್ಮ ತವರು ಜಿಲ್ಲೆಯಿಂದ ನಾಲ್ಕು ಬಾರಿ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೊನೆಯದಾಗಿ, ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಪ್ರತಿಭಾ ಸಿಂಗ್. ಅವರು ದಿವಂಗತ ಕಾಂಗ್ರೆಸ್ ನಾಯಕ ಮತ್ತು ಆರು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಅವರ ಪತ್ನಿ.

ಕಂಗನಾ ಬಗ್ಗೆ ಸಮಾಲೋಚಿಸಿ ನಿರ್ಧಾರ ಎಂದ ಜೆಪಿ ನಡ್ಡಾ
ಇತ್ತೀಚೆಗಷ್ಟೇ ಬಾಲಿವುಡ್ ನಟಿ ಕಂಗನಾ ರಣಾವತ್ ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದಾರೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕಂಗನಾ 2024ರ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಕಂಗನಾ ಹೇಳಿಕೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಇದೇ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ್ದಾರೆ. "ಬಿಜೆಪಿ ಕಂಗನಾ ಅವರನ್ನು ಸ್ವಾಗತಿಸುತ್ತದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಸಮಾಲೋಚಿಸಿದ ನಂತರವೇ ತೆಗೆದುಕೊಳ್ಳಲಾಗುವುದು" ಎಂದು ನಡ್ಡಾ ಹೇಳಿದ್ದಾರೆ.