
Breaking: ಸುಪ್ರೀಂಕೋರ್ಟ್ ಹಿಜಾಬ್ ವಿವಾದ ತೀರ್ಪು: ವಿಸ್ತೃತ ಪೀಠಕ್ಕೆ ವರ್ಗಾವಣೆ
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗಿದೆ. ಮುಸ್ಲಿಂ ವಿದ್ಯಾರ್ಥಿನಿಗಳ ಮೇಲ್ಮನವಿ ಅರ್ಜಿ ವಜಾಗೊಳಿಸಿ ಹೈಕೋರ್ಟ್ ತೀರ್ಪನ್ನು ನ್ಯಾ ಹೇಮಂತ್ ಗುಪ್ತಾ ಎತ್ತಿ ಹಿಡಿದರು. ಆದರೆ, ಮುಸ್ಲಿಂ ಮೇಲ್ಮನವಿ ಅರ್ಜಿಯನ್ನು ನ್ಯಾ ಧುಲಿಯಾ ಪುರಸ್ಕರಿಸಲು ಮುಂದಾಗಿದ್ದರಿಂದ ಒಮ್ಮತ ತೀರ್ಪು ಹೊರ ಬಂದಿಲ್ಲ.
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಷ್ಟ್ರ ಅಂತಾರಾಷ್ಟ್ರಿಯ ಮಟ್ಟದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇಂದು ಹಿಜಾಬ್ ಅನ್ನು ಶಾಲಾ ಕಾಲೇಜುಗಳಲ್ಲಿ ಧರಿಸಬೇಕು ಅಥವಾ ಬೇಡ ಎನ್ನುವ ಬಗ್ಗೆ ಸುಪ್ರೀಂಕೋರ್ಟ್ ಭಿನ್ನ ತೀರ್ಪು ನೀಡಿದೆ.
ನ್ಯಾಯಮೂರ್ತಿ ಹೇಮಂತ್ ಹಾಗೂ ನ್ಯಾಯಮೂರ್ತಿ ಧುಲಿಯಾರಿಂದ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಒಮ್ಮತ ಮೂಡದ ಕಾರಣ, ಸಿಜೆಐ ನ್ಯಾಯಪೀಠಕ್ಕೆ ಪ್ರಕರಣ ವರ್ಗಾವಣೆಯಾಗಿದೆ. ವಿಸ್ತೃತ ಪೀಠ ರಚನೆ ಬಗ್ಗೆ ಸಿಜೆಐ ನಿರ್ಧಾರ ಕೈಗೊಳ್ಳಲಿದ್ದಾರೆ.
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಾಗಿ ಮುಸ್ಲಿಂ ವಿದ್ಯಾರ್ಥಿಗಳು ವಾದಿಸಿದರೆ ಹಾಗೂ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಧರಿಸುವ ವಾದಗಳು ಇನ್ನು ಮುಂದುವರೆಯಲಿದೆ.
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಹಿಜಾಬ್ ಮೇಲಿನ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಹು ನಿರೀಕ್ಷಿತ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಅ.13ರಂದು ನೀಡಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು 10 ದಿನಗಳ ವಾದಗಳನ್ನು ಆಲಿಸಿದ ನಂತರ ಸೆಪ್ಟೆಂಬರ್ 22 ರಂದು ತೀರ್ಪನ್ನು ಕಾಯ್ದಿರಿಸಿತ್ತು.
ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಮೇಲೆ ನಿಷೇಧ ಹೇರಿದ್ದು, ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿತ್ತು. ಅರ್ಜಿಗಳ ವಿಚಾರನೆ ನಡೆಸಿದ್ದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಪೀಠದ ನೇತೃತ್ವದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಭಾನುವಾರ ನಿವೃತ್ತರಾಗಲಿರುವ ಕಾರಣ ಈ ವಾರ ಈ ಅರ್ಜಿಗಳ ತೀರ್ಪು ನಿರೀಕ್ಷಿಸಲಾಗಿತ್ತು.