
ರಾಜ್ಯದ ಬಳಿಕ ಬಿಹಾರದಲ್ಲೂ ಹಿಜಾಬ್ ಕಿಡಿ; ಶಿಕ್ಷಕರು, ವಿದ್ಯಾರ್ಥಿನಿಯರ ಆರೋಪಗಳೇನು?
ಪಾಟ್ನಾ, ಅ.17: ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದ ರಾಜ್ಯದ ಹಿಜಾಬ್ ವಿವಾದ ಈಗ ಬಿಹಾರಕ್ಕೂ ತಲುಪಿದೆ. ಬಿಹಾರದ ಮುಜಾಫರ್‌ಪುರದ ಮಹಂತ್ ದರ್ಶನ್ ದಾಸ್ ಮಹಿಳಾ ಕಾಲೇಜಿನಲ್ಲಿ ವಿವಾದದ ಕಿಡಿ ಹೊತ್ತಿದೆ. ಹೀಗಾಗಿ ದೇಶದಲ್ಲಿ ಹಿಜಾಬ್ ಪರ- ವಿರುದ್ಧದ ಗಲಾಟೆ ಸದ್ಯಕ್ಕೆ ಮುಗಿಯುವ ಹಾಗೆ ಕಾಣಿಸುತ್ತಿಲ್ಲ.
ಮುಜಾಫರ್‌ಪುರದ ಮಹಂತ್ ದರ್ಶನ್ ದಾಸ್ ಮಹಿಳಾ ಕಾಲೇಜಿನ (ಎಂಎಂಡಿಎಂ) ವಿದ್ಯಾರ್ಥಿನಿಯೊಬ್ಬರು ಪರೀಕ್ಷೆಯ ವೇಳೆ ಹಿಜಾಬ್ ತೆಗೆಯಲು ನಿರಾಕರಿಸಿದಾಗ ಕೋಪಗೊಂಡ ಶಿಕ್ಷಕರೊಬ್ಬರು ತನ್ನ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಜಾಬ್ ಪ್ರಕರಣ ತೀರ್ಪು ಇಬ್ಬರು ಸುಪ್ರೀಂ ನ್ಯಾಯಾಧೀಶರ ಅಭಿಪ್ರಾಯ ಭಿನ್ನವಾಗಿದ್ದೇಕೆ?
ಭಾನುವಾರ ನಡೆದ ಪರೀಕ್ಷೆಯ ಸಮಯದಲ್ಲಿ ತನ್ನ ಹಿಜಾಬ್ ಅನ್ನು ತೆಗೆಯಲು ನಿರಾಕರಿಸಿದಾಗ ಶಿಕ್ಷಕರು ತನ್ನನ್ನು ನಿಂದಿಸಿದ್ದು, "ದೇಶ ವಿರೋಧಿ" ಎಂದು ಕರೆದಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಮಹಿಳಾ ಕಾಲೇಜು ಆವರಣದಲ್ಲಿ ಈ ಘಟನೆ ನಡೆದಿದೆ.

ವಿದ್ಯಾರ್ಥಿನಿ ಆರೋಪ ತಳ್ಳಿ ಹಾಕಿದ ಕಾಲೇಜು
ವಿದ್ಯಾರ್ಥಿನಿಯ ಆರೋಪಗಳನ್ನು ತಳ್ಳಿಹಾಕಿದ ಕಾಲೇಜು ಪ್ರಾಂಶುಪಾಲರು, ಪರೀಕ್ಷಾ ಕೇಂದ್ರದ ಪರೀಕ್ಷಕರು ಆಕೆಯ ಬಳಿ ಯಾವುದಾದರೂ ಬ್ಲೂಟೂತ್ ಸಾಧನವಿದೆಯೇ ಎಂದು ಪರಿಶೀಲಿಸಲು ವಿದ್ಯಾರ್ಥಿನಿಗೆ ಕಿವಿಯನ್ನು ತೋರಿಸಲು ಮಾತ್ರ ಹೇಳಲಾಗಿತ್ತು ಎಂದಿದ್ದಾರೆ.
"ಆಕೆ ಹಿಜಾಬ್ ಧರಿಸುವುದನ್ನು ನಾವು ತಡೆಯಲಿಲ್ಲ. ಆಕೆ ಬ್ಲೂಟೂತ್ ಸಾಧನವನ್ನು ತೆಗೆದುಕೊಂಡು ಹೋಗಬಹುದು ಎಂಬ ಆತಂಕವಿದ್ದ ಕಾರಣ ಆಕೆಯ ಕಿವಿಗಳನ್ನು ತೊರಿಸುವಂತೆ ಹೇಳಲಾಗಿತ್ತು" ಎಂದು ಕಾಲೇಜು ಪ್ರಾಂಶುಪಾಲೆ ಡಾ.ಕನು ಪ್ರಿಯಾ ತಿಳಿಸಿದ್ದಾರೆ.

ವಿದ್ಯಾರ್ಥಿನಿ ವಿರುದ್ಧವೇ ಪ್ರಾಶುಂಪಾಲರ ಆರೋಪಗಳು!
"ಹಿಜಾಬ್ ಸಮಸ್ಯೆಯೇ ಅಲ್ಲ. ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಹಾಲ್‌ಗೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುತ್ತಿದ್ದರು, ಅದು ನಿಯಮಗಳಿಗೆ ವಿರುದ್ಧವಾಗಿತ್ತು. ಪರೀಕ್ಷಾ ಹಾಲ್‌ನ ಹೊರಗೆ ತಮ್ಮ ಮೊಬೈಲ್‌ಗಳನ್ನು ಇಡುವಂತೆ ವಿದ್ಯಾರ್ಥಿಗಳಿಗೆ ಹೇಳಲಾಗಿತ್ತು. ಅದರಲ್ಲಿ ಈ ವಿದ್ಯಾರ್ಥಿನಿ ಕೂಡ ಒಬ್ಬರು" ಎಂದಿದ್ದಾರೆ.
"ವಿದ್ಯಾರ್ಥಿನಿಗೆ ಈ ಬಗ್ಗೆ ಸಮಸ್ಯೆ ಇದ್ದರೆ, ಅವರು ನನಗೆ ತಿಳಿಸಬಹುದಿತ್ತು. ಆದರೆ ಆಕೆ ಬೇರೆ ಉದ್ದೇಶಗಳನ್ನು ಹೊಂದಿದ್ದರು. ಆಕೆ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಜೊತೆಗೆ ಆಕೆಗೆ ಕೆಲವು ಸ್ಥಳೀಯ ಸಮಾಜವಿರೋಧಿ ಜನರ ಪರಿಚಯವಿತ್ತು. ಅವರು ಬಂದಾಗ, ಆಕೆ ಗಲಾಟೆಯನ್ನು ಸೃಷ್ಟಿಸಿದರು" ಎಂದು ಪ್ರಾಂಶುಪಾಲರು ಆರೋಪಿಸಿದ್ದಾರೆ.

ದೇಶವಿರೋಧಿ, ಪಾಕಿಸ್ತಾನಕ್ಕೆ ಹೋಗು ಎಂದ ಶಿಕ್ಷಕರು; ಆರೋಪ
"ಶಿಕ್ಷಕರು ತನ್ನನ್ನು ದೇಶವಿರೋಧಿ ಎಂದು ಕರೆದಿದ್ದಾರೆ ಮತ್ತು ಪಾಕಿಸ್ತಾನಕ್ಕೆ ಹೋಗು ಎಂಬ ಟೀಕಿಸಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ನಾನು ಪರೀಕ್ಷಾ ಹಾಲ್‌ನಲ್ಲಿ ಇರಲಿಲ್ಲ. ಆದರೆ, ಅಲ್ಲೇ ಇದ್ದ ಹುಡುಗಿಯರು ಇದು ಸುಳ್ಳು ಎಂದು ಹೇಳಿದ್ದಾರೆ" ಎಂದು ಕಾಲೇಜು ಪ್ರಾಂಶುಪಾಲರು ಹೇಳಿದ್ದಾರೆ.
ಘಟನೆ ಕುರಿತು ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾ. ಪೊಲೀಸರು ಮಧ್ಯಪ್ರವೇಶಿಸಿದ ನಂತರ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲಾಗಿದೆ ಎಂದು ವರದಿಯಾಗಿದೆ.
"ಎರಡೂ ಕಡೆಯವರಿಗೆ ನಾವು ಸಲಹೆ ನೀಡಿ, ಪರೀಕ್ಷೆಗಳನ್ನು ಶಾಂತಿಯುತವಾಗಿ ನಡೆಸಿದ್ದೇವೆ. ಪ್ರಸ್ತುತ, ಪ್ರಕರಣವನ್ನು ದಾಖಲಿಸುವುದು ಅಥವಾ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳ ನಿಯೋಜನೆ ಬೇಕಾಗಿಲ್ಲ. ಆದರೆ ನಾವು ಹೆಚ್ಚಿನ ನಿಗಾ ಇಡುತ್ತೇವೆ" ಎಂದು ಪೊಲೀಸರು ಹೇಳಿದ್ದಾರೆ.

ಹಿಜಾಬ್ ಬಗ್ಗೆ ವಿಭಜಿತ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್
ಇತ್ತ, ರಾಜ್ಯದ ಹಿಜಾಬ್ ನಿಷೇಧ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು ವಿಭಜಿತ ತೀರ್ಪು ನೀಡಿದೆ. ರಾಜ್ಯದಲ್ಲಿ ತರಗತಿ ಕೊಠಡಿಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಬೇಕೇ ಎಂಬುದರ ಕುರಿತು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಶಾಲಾ- ಕಾಲೇಜುಗಳ ತರಗತಿ ಕೊಠಡಿಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿರ್ಬಂಧಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಬೆಂಬಲಿಸುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಎತ್ತಿಹಿಡಿದಿದ್ದಾರೆ. ಆದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಹಿಜಾಬ್ ನಿಷೇಧವನ್ನು ಒಪ್ಪಿಲ್ಲ. ಹೀಗಾಗಿ ಪ್ರಕರಣ ಈಗ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠಕ್ಕೆ ಹೋಗಲಿದೆ.