Jharkhand Chief Minister: ನವೆಂಬರ್ 28 ರಂದು ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣವಚನ ಸ್ವೀಕಾರ
Jharkhand Chief Minister: ಈಗಾಗಲೇ ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ನಡೆದಿದ್ದು, ಫಲಿತಾಂಶ ಕೂಡ ಲಭ್ಯವಾಗಿದೆ. ಜೆಎಂಎಂ ಪಕ್ಷ ಗೆದ್ದು ಬೀಗಿದ್ದು, ನೆವಂಬರ್ 28ರಂದು ರಾಜ್ಯದಲ್ಲಿ ಸಿಎಂ ಆಗಿ 4ನೇ ಅವಧಿಗೆ ಜೆಎಂಎಂ ಪಕ್ಷದ ಹೇಮಂತ್ ಸೊರೇನ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮಾಣ ವಚನ ಕಾರ್ಯಕ್ರಮ ಎಲ್ಲಿ ನಡೆಯಲಿದೆ?: ನವೆಂಬರ್ 28ರಂದು ರಾಂಚಿಯ ಮೊರಾಬಾಡಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇಂಡಿಯಾ ಮೈತ್ರಿಕೂಟದ ಎಲ್ಲ ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿದೆ. ಪ್ರಸ್ತುತ ಉಸ್ತುವಾರಿ ಸಿಎಂ ಆಗಿರುವ ಸೊರೇನ್ ಅವರಿಗೆ ನೂತನ ಸರ್ಕಾರ ರಚಿಸಲು ರಾಜ್ಯಪಾಲರಾದ ಸಂತೋಷ್ ಗಂಗ್ವಾರ್ ಅವರು ಭಾನುವಾರ ಆಹ್ವಾನಿಸಿದ್ದರು.
ಎರಡು ಹಂತಗಳಲ್ಲಿ ಮತದಾನ: ಇದಕ್ಕೂ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದ ಹೇಮಂತ್ ಅವರಿಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ರಾಜ್ಯಪಾಲರು ಸೂಚಿಸಿದ್ದರು. ಜಾರ್ಖಂಡ್‌ನ 81 ವಿಧಾನಸಭೆ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು.
ನವೆಂಬರ್ 13ರಂದು 43 ಸ್ಥಾನಗಳಿಗೆ ಮೊದಲ ಹಂತದಲ್ಲಿ, ನವೆಂಬರ್ 20ರಂದು ಎರಡನೇ ಹಂತದಲ್ಲಿ 38 ಸ್ಥಾನಗಳಿಗೆ ಮತದಾನ ನಡೆದಿತ್ತು. ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಿತ್ತು. ಈ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು 56 ಸ್ಥಾನಗಳಿಸಿ ಜಯಭೇರಿ ಬಾರಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ ಮ್ಯಾಜಿಕ್ ನಂರ್ 41 ಆಗಿತ್ತು.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಪಕ್ಷ 288 ಸ್ಥಾನಗಳ ಪೈಕಿ 234 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದಿದ್ದರೆ, ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ 50 ಸ್ಥಾನಗಳನ್ನಷ್ಟೇ ಗೆದ್ದಿದೆ. ಇನ್ನು ಜಾರ್ಖಂಡ್‌ನಲ್ಲಿ 81 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ 56 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟ 24 ಸ್ಥಾನಗಳನ್ನು ಗೆದ್ದಿದೆ.












Click it and Unblock the Notifications