Jharkhand: ಚಂಪೈ ಸೊರೆನ್ ಸಿಎಂ ಸ್ಥಾನಕ್ಕೆ ರಾಜೀನಾಮೆ: ಜೆಎಂಎಂ ನಾಯಕ ಹೇಮಂತ್ ಸೊರೆನ್ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ?
ಜಾರ್ಖಂಡ್ ರಾಜಕಾರಣದಲ್ಲಿ ಹೈಡ್ರಾಮ ನಡೆಯುತ್ತಿದೆ. ಹೇಮಂತ್ ಸೊರೇನ್ ಜೈಲಿನಿಂದ ಹೊರ ಬರುತ್ತಿದ್ದಂತೆ ಮುಖ್ಯಮಂತ್ರಿ ಕುರ್ಚಿ ಏರಲು ಸಿದ್ಧರಾಗಿದ್ದಾರೆ. ಜೈಲಿನಿಂದ ಹೊರಬಂದ ನಂತರ ಹೇಮಂತ್ ಸೊರೇನ್ ಮತ್ತೊಮ್ಮೆ ಜಾರ್ಖಂಡ್ ಮುಖ್ಯಮಂತ್ರಿಯಾಗಲಿದ್ದಾರೆ.
ಬುಧವಾರ ಸಂಜೆ 7.20ಕ್ಕೆ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಜಾರ್ಖಂಡ್ ಸಿಎಂ ಚಂಪೈ ಸೊರೆನ್ ಇಂದುಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು. ಪರ್ಯಾಯ ವ್ಯವಸ್ಥೆ ಮಾಡುವವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯುವಂತೆ ರಾಜ್ಯಪಾಲರು ಸೂಚಿಸಿದರು. ಇದಾದ ನಂತರ, ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ, ಸಿಪಿಐ (ಎಂಎಲ್) ನಾಯಕರು ಮತ್ತು ಶಾಸಕರೊಂದಿಗೆ ಜಾರ್ಖಂಡ್ ರಾಜ್ಯದಲ್ಲಿ ತಮ್ಮ ನೇತೃತ್ವದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲರಿಗೆ ಹಕ್ಕು ಸಲ್ಲಿಸಿದರು.

ಶಾಸಕಾಂಗ ಪಕ್ಷದ ನಾಯಕ ಯಾರು?
ಇದಕ್ಕೂ ಮುನ್ನ ರಾಂಚಿಯ ಸಿಎಂ ಭವನದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಇದರಲ್ಲಿ ಹೇಮಂತ್ ಸೊರೆನ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಎಲ್ಲಾ ಶಾಸಕರಿಗೆ ಸಿಎಂ ಸದನದಲ್ಲಿ ಇರುವಂತೆ ಸೂಚಿಸಲಾಗಿದೆ.
ಮೈತ್ರಿಯ ನಿರ್ಧಾರದಂತೆ ನಾನು ಕೆಲಸ ಮಾಡಿದ್ದೇನೆ ಎಂದು ಚಂಪೈ ಸೊರೆನ್ ಹೇಳಿದ್ದಾರೆ. ಅವರು 2 ಫೆಬ್ರವರಿ 2024 ರಂದು ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಅವರು ಮಹಾಮೈತ್ರಿಕೂಟ ಶಾಸಕಾಂಗ ಪಕ್ಷದ ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಿದರು. ಈಗ ರಾಜ್ಯಪಾಲರು ಹೇಮಂತ್ ಸೊರೆನ್ ಅವರಿಗೆ ಪ್ರಮಾಣ ವಚನಕ್ಕೆ ಬುಲಾವ್ ನೀಡಬಹುದು.
ಹೇಮಂತ್ ಸೋರೆನ್ ಮತ್ತು ಚಂಪೈ ಸೊರೆನ್ ಅವರೊಂದಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಾಜೇಶ್ ಠಾಕೂರ್ ಸಹ ಉಪಸ್ಥಿತರಿದ್ದರು. ಇದಲ್ಲದೆ ಆರ್‌ಜೆಡಿ ಶಾಸಕ ಸತ್ಯಾನಂದ್ ಭೋಕ್ತಾ ಮತ್ತು ಸಿಪಿಐ-ಎಂಎಲ್ ಶಾಸಕ ವಿನೋದ್ ಕುಮಾರ್ ಸಿಂಗ್ ಮತ್ತು ಶಾಸಕ ಪ್ರದೀಪ್ ಯಾದವ್ ಕೂಡ ರಾಜ್ಯಪಾಲರ ಭೇಟಿಯ ವೇಳೆ ಉಪಸ್ಥಿತರಿದ್ದರು.
ಜಾರ್ಖಂಡ್‌ನಲ್ಲಿ ಅಧಿಕಾರ ಬದಲಾವಣೆಯ ಸುದ್ದಿ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸಾ ಟ್ವೀಟ್ ಮಾಡಿದ್ದಾರೆ. ಜೆಎಂಎಂ-ಕಾಂಗ್ರೆಸ್ ಬುಡಕಟ್ಟು ನಾಯಕನನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಿರುವುದು ತುಂಬಾ ದುಃಖಕರವಾಗಿದೆ. ಜಾರ್ಖಂಡ್‌ನ ಜನರು ಈ ಕ್ರಮವನ್ನು ಖಂಡಿಸುತ್ತಾರೆ ಮತ್ತು ತಿರಸ್ಕರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಬರೆದುಕೊಂಡಿದ್ದಾರೆ.












Click it and Unblock the Notifications