ಈ ರಾಜ್ಯಗಳಲ್ಲಿ ಇನ್ನೂ ಕೆಲದಿನ ಮಳೆ ತಗ್ಗಲ್ಲ; ಹವಾಮಾನ ಇಲಾಖೆ ಸೂಚನೆ
ನವದೆಹಲಿ, ಆಗಸ್ಟ್ 04: ಜುಲೈ ಅಂತ್ಯದ ವೇಳೆಗೆ ದೇಶಾದ್ಯಂತ ಮುಂಗಾರು ಕ್ಷೀಣಿಸಿದೆ. ಇನ್ನೂ ಕೆಲವು ದಿನಗಳ ಕಾಲ ದೇಶದ ಕೆಲವು ಭಾಗಗಳಲ್ಲಿ ಮಳೆ ಮುಂದುವರೆಯುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಸದ್ಯ ಹೆಚ್ಚಿನ ಮಳೆಯಾಗುತ್ತಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ರಾಜ್ಯಗಳಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಕ್ಷೀಣಿಸಿದ್ದರೂ ವಾಯವ್ಯ ಮಧ್ಯಪ್ರದೇಶದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಮಳೆ ಪ್ರಮಾಣ ಏರಿಕೆಯಾಗಲಿದೆ. ಕೆಲವು ದಿನಗಳ ನಂತರವಷ್ಟೇ ಮಳೆ ಪ್ರಮಾಣ ತಗ್ಗಲಿದೆ ಎಂದು ಸೂಚನೆ ನೀಡಿದೆ. ಮಂಗಳವಾರ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದ ಬಹುಪಾಲು ರಾಜ್ಯಗಳಲ್ಲಿ ಮಳೆಯಾಗಿದೆ. ದಕ್ಷಿಣ ಭಾರತದಲ್ಲೂ ಚದುರಿದ ಮಳೆಯಾಗಿದ್ದು, ಕೇರಳ, ಕರ್ನಾಟಕದ ಒಳನಾಡು, ತಮಿಳುನಾಡು, ಆಂಧ್ರದಲ್ಲಿ ಮಳೆ ದಾಖಲಾಗಿದೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮಳೆ ನಿಲ್ಲುವುದಿಲ್ಲ ಎಂದು ತಿಳಿಸಿದೆ. ಮುಂದೆ ಓದಿ...

ಮುಂದಿನ ಐದು ದಿನಗಳವರೆಗೆ ಈ ರಾಜ್ಯಗಳಲ್ಲಿ ಮಳೆ
ಮುಂದಿನ ಐದು ದಿನಗಳ ಕಾಲ ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಭಾರೀ ಮಳೆ ಮುಂದುವರೆಯಲಿದೆ. ರಾಜಸ್ಥಾನದ ಪೂರ್ವ ಭಾಗದಲ್ಲಿ ಹಾಗೂ ಮಧ್ಯಪ್ರದೇಶದ ಪಶ್ಚಿಮ ಭಾಗದಲ್ಲಿ ಅತಿ ಹೆಚ್ಚಿನ ಮಳೆಯಾಗುವುದಾಗಿ ಮಾಹಿತಿ ನೀಡಿದೆ. ದೆಹಲಿಯಲ್ಲಿಯೂ ಮುಂದಿನ ಎರಡು ದಿನಗಳ ಕಾಲ ಮಳೆಯಾಗಲಿದೆ. ಮಹಾರಾಷ್ಟ್ರ, ಗುಜರಾತ್‌ನಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸೂಚನೆ ನೀಡಲಾಗಿದೆ.

ಉತ್ತರ ಭಾರತದಲ್ಲಿ ಮಳೆ ಮುಂದುವರಿಕೆ
ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಳೆ ಮುಂದುವರೆಯಲಿದೆ. ಉತ್ತರಾಖಂಡ, ಉತ್ತರ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಲಿದೆ. ಪಂಜಾಬ್‌ನಲ್ಲಿ ಮಧ್ಯಮ ಮಟ್ಟದಲ್ಲಿ ಮಳೆಯಾಗಬಹುದು. ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರೆಯುವುದು ಎಂದು ಇಲಾಖೆ ಮಾಹಿತಿ ಒದಗಿಸಿದೆ. ಇದರೊಂದಿಗೆ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾದಲ್ಲಿ ಮಳೆಯಾಗುವ ಸೂಚನೆ ನೀಡಲಾಗಿದೆ.
ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಆಗಸ್ಟ್ 7ರವರೆಗೂ ಮಳೆ ಮುಂದುವರೆಯುವ ಸೂಚನೆ ನೀಡಿದ್ದು, ದೇಶದ ಮಧ್ಯ ಹಾಗೂ ಉತ್ತರ ಭಾಗಗಳಲ್ಲಿ ಮಳೆ ಹೆಚ್ಚಾಗಲಿದೆ ಎಂದು ತಿಳಿಸಿದೆ.

ಈ ರಾಜ್ಯಗಳಲ್ಲಿ ಆಗಸ್ಟ್ 4ರಂದು ಮಳೆ ಸೂಚನೆ
ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ, ತ್ರಿಪುರಾ, ಜಾರ್ಖಂಡ್, ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ, ಜಮ್ಮು ಕಾಶ್ಮೀರ, ಚಂಡೀಗಢ, ಹರಿಯಾಣ, ಲಡಾಖ್, ಕರ್ನಾಟಕದ ಒಳನಾಡಿನಲ್ಲಿ ಚದುರಿದ ಮಳೆಯಾಗುವುದಾಗಿ ತಿಳಿಸಿದೆ.
ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೊಂಕಣ ಗೋವಾದಲ್ಲಿ ಸಾಧಾರಣ ಮಳೆಯಾಗುವುದಾಗಿ ಮಾಹಿತಿ ನೀಡಿದೆ.
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆ
ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಆಗಸ್ಟ್ 4ರಂದು ಕೂಡ ಚದುರಿದ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉಳಿದೆಡೆ ಒಣಹವೆ ಮುಂದುವರೆಯಲಿದೆ. ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಹೆಚ್ಚಿನ ಮಳೆಯಾಗಿರುವುದಾಗಿ ತಿಳಿದುಬಂದಿದೆ.
ಇದರೊಂದಿಗೆ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ದಾಖಲಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.












Click it and Unblock the Notifications