ಕೇರಳದಲ್ಲಿ ಭಾರೀ ಮಳೆ: ಸಾವಿರಾರು ಜನರ ಸ್ಥಳಾಂತರ, ಅಪಾಯದ ಮಟ್ಟ ದಾಟುತ್ತಿರುವ 2 ನದಿಗಳು
ತಿರುವನಂತಪುರಂ, ಜುಲೈ. 06: ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇಲ್ಲಿಯವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಎರಡು ನದಿಗಳು ಕೂಡ ಅಪಾಯದ ಅಂಚಿನಲ್ಲಿ ಹರಿಯುತ್ತಿದ್ದು, ಬೀಚ್ ಅಥವಾ ಗುಡ್ಡಗಾಡು ಪ್ರದೇಶಗಳಿಗೆ ಹೋಗದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಎರಡನೇ ಹಂತದ ಎಚ್ಚರಿಕೆಯಾಗಿರುವ ಆರೆಂಜ್ ಅಲರ್ಟ್ ಅನ್ನು ಏಳು ಜಿಲ್ಲೆಗಳಿಗೆ ನೀಡಲಾಗಿದೆ. ನದಿ ನೀರಿನಿಂದ ಉಂಟಾದ ಪ್ರವಾಹ, ಹಾಗೆಯೇ ಮರಗಳು ಬಿದ್ದು ಮನೆಗಳು ಹಾಣಿಗೊಳಗಾದ ಕಾರಣ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯದಲ್ಲಿ ಮುನ್ನೆಚ್ಚರಿಕೆಯಾಗಿ ಸ್ಥಾಪಿಸಲಾದ 112 ಪರಿಹಾರ ಶಿಬಿರಗಳಿಗೆ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು ಇದುವರೆಗೆ ಮಳೆಯಿಂದಾಗಿ ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಕಣ್ಣೂರು ಮತ್ತು ಮಲ್ಲಪುರಂ ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, ಕೇಂದ್ರ ಜಲ ಆಯೋಗ ಹಲವು ನದಿಗಳಿಗೆ ಪ್ರವಾಹದ ಎಚ್ಚರಿಕೆ ನೀಡಿದೆ. ಮಧ್ಯ ಮತ್ತು ದಕ್ಷಿಣ ಕೇರಳದ ಮೂಲಕ ಹಾದು ಹೋಗಿರುವ ಪಂಬಾ ಮತ್ತು ಮಣಿಮಾಲಾ ನದಿಗಳು ಅಪಾಯದ ಮಟ್ಟ ದಾಟಿವೆ. ನಾಲ್ಕು ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಆದರೂ, ಕೇರಳದಲ್ಲಿ ಮಳೆಯ ತೀವ್ರತೆಯು ನಾಳೆ ಕಡಿಮೆಯಾಗುವ ನಿರೀಕ್ಷೆಯಿದೆ. ನಾಳೆ ರೆಡ್ ಮತ್ತು ಆರೆಂಜ್ ಎಚ್ಚರಿಕೆಗಳನ್ನು ತೆಗೆದುಹಾಕಬಹುದು ಎಂದು ನಿರೀಕ್ಷಿಸಲಾಗಿದೆ.

ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದ್ದು, ನಾಳೆಯೂ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. ಗೋವಾದಾದ್ಯಂತ ಮಳೆ ಎಚ್ಚರಿಕೆಯನ್ನು ನೀಡಲಾಗಿದೆ ಮತ್ತು ಶಾಲೆಗಳನ್ನು ಮುಚ್ಚಲಾಗಿದೆ. ನಿನ್ನೆ ಸಂಜೆ ದಕ್ಷಿಣ ಗೋವಾದ ನಕೇರಿ ಬೇತುಲ್ ಗ್ರಾಮದಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಗದ್ದೆಗೆ ಹೋದ 56 ವರ್ಷದ ಫ್ಲೋರಿನಾ ಡಿಸೋಜಾ ಎಂಬ ಮಹಿಳೆ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇನ್ನೊಬ್ಬ ಮಹಿಳೆ ತನ್ನ ಜೀವ ಉಳಿಸಿಕೊಳ್ಳಲು ಮರವನ್ನು ಹಿಡಿದು ಬದುಕುಳಿದಿದ್ದಾರೆ.












Click it and Unblock the Notifications