Sabarimala Yatra: ಶಬರಿಮಲೆ ಯಾತ್ರಾರ್ಥಿಗಳಿಗೆ ಆರೋಗ್ಯ ಸಲಹೆ.. ಭಕ್ತಾಧಿಗಳು ಇದನ್ನು ತಪ್ಪದೇ ಪಾಲಿಸಿ..
ಪತ್ತನಂತಿಟ್ಟ ನವೆಂಬರ್ 11: ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ಮಾಲೆ ಧರಿಸಿ ಇರುಮುಡಿ ಕಟ್ಟಿಕೊಂಡು ಹೋಗುತ್ತಾರೆ. ಹೀಗೆ ಶಬರಿಮಲೆಯಲ್ಲಿ ವಾರ್ಷಿಕ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರಿಗೆ ಆರೋಗ್ಯ ಸಲಹೆಯನ್ನು ನೀಡಲಾಗಿದೆ. ಈ ಆರೋಗ್ಯ ಸಲಹೆಗಳನ್ನು ಭಕ್ತಾಧಿಗಳು ತಪ್ಪದೇ ಪಾಲಿಸಬೇಕು ಎಂದು ಕೇರಳದ ಪತ್ತನಂತಿಟ್ಟ ಜಿಲ್ಲೆಯ ವೈದ್ಯಕೀಯ ಅಧಿಕಾರಿ ಡಾ.ಎಲ್.ಅನಿತಾಕುಮಾರಿ ಮನವಿ ಮಾಡಿದ್ದಾರೆ.
ಶಬರಿಮಲೆ ಯಾತ್ರಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಮತ್ತು ಬೆಟ್ಟದ ದೇಗುಲಕ್ಕೆ ಭೇಟಿ ನೀಡುವ ಮೊದಲು ದೈಹಿಕ ಹಾಗೂ ಮಾನಸಿಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಶಬರಿಮಲೆ ಇರುವ ಕೇರಳದ ಪತ್ತನಂತಿಟ್ಟ ಜಿಲ್ಲೆಯ ವೈದ್ಯಕೀಯ ಅಧಿಕಾರಿ ಡಾ.ಎಲ್.ಅನಿತಾಕುಮಾರಿ ಹೇಳಿದ್ದಾರೆ.

ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಪೂರ್ವಭಾವಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಮತ್ತು ತಮ್ಮ ವೈದ್ಯಕೀಯ ದಾಖಲೆಗಳು ಹಾಗೂ ವಿಮಾ ದಾಖಲೆಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಬೆಟ್ಟ ಹತ್ತುವಾಗ ಉಂಟಾಗುವ ಆರೋಗ್ಯ ಸಮಸ್ಯೆ ತಪ್ಪಿಸಲು ದರ್ಶನಕ್ಕೆ ಹೊರಡುವ ಕೆಲವು ದಿನಗಳ ಮೊದಲು ಬ್ರಿಸ್ಕ್ ವಾಕಿಂಗ್ ಸೇರಿದಂತೆ ಲಘು ವ್ಯಾಯಾಮ ಮಾಡಬೇಕು, ಉಪವಾಸದ ಸಮಯದಲ್ಲಿ ನಿತ್ಯ ಔಷಧ ಸೇವನೆ ನಿಲ್ಲಿಸಬಾರದು ಎಂದು ಸಲಹೆ ನೀಡಿದ್ದಾರೆ.
ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಅಸ್ತಮಾದಂತಹ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಮೊದಲು ತಮ್ಮ ವೈದ್ಯರಿಂದ ಸಲಹೆ ಪಡೆಯಬೇಕು. ಹೃದಯ ಸಂಬಂಧಿ ಕಾಯಿಲೆಗಳ ಕುಟುಂಬದ ಇತಿಹಾಸ ಹೊಂದಿರುವವರು ತೀರ್ಥಯಾತ್ರೆಗೂ ಮೊದಲು ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು:
* ಪರ್ವತವನ್ನು ಹತ್ತಲು ನಿಮಗೆ ಕಷ್ಟವಾದರೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಆರಿಸಿಕೊಳ್ಳಿ
* ನಿಧಾನವಾಗಿ ಬೆಟ್ಟವನ್ನು ಹತ್ತಿ ಆಗಾಗ ಮಾರ್ಗ ಮಧ್ಯೆ ವಿಶ್ರಾಂತಿ ಪಡೆಯುವುದು ತುಂಬಾ ಮುಖ್ಯ
* ಊಟವಾದ ತಕ್ಷಣ ಬೆಟ್ಟ ಹತ್ತಬೇಡಿ, ಕೆಲ ಹೊತ್ತು ವಿಶ್ರಾಂತಿ ಪಡೆದು ಬಟೆಟ್ ಹತ್ತುವುದು ಒಳ್ಳೆಯದು
* ಹತ್ತುವಾಗ ನೀವು ಆಯಾಸ, ಎದೆ ನೋವು ಅಥವಾ ಉಸಿರಾಟದ ತೊಂದರೆಯನ್ನು ಅನುಭವಿಸಿದರೆ ಬೆಟ್ಟ ಹತ್ತುವುದನ್ನು ನಿಲ್ಲಿಸಿ ಮತ್ತು ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ
* ತುರ್ತು ವೈದ್ಯಕೀಯ ಸಹಾಯಕ್ಕಾಗಿ 04735203232 ಅನ್ನು ಡಯಲ್ ಮಾಡಿ
* ಪಂಬಾ, ನೀಲಿಮಲ, ಅಪಾಚಿಮೇಡು ಮತ್ತು ಸನ್ನಿಧಾನಂ ಆಸ್ಪತ್ರೆಗಳಲ್ಲಿ ಹೃದಯ ತಪಾಸಣೆ ಮತ್ತು ಚಿಕಿತ್ಸೆ ಲಭ್ಯವಿರುತ್ತದೆ. ಅಗತ್ಯ ಎನಿಸಿದರೆ ಅದರ ಪ್ರಯೋಜನವನ್ನು ಭಕ್ತಾಧಿಗಳು ಪಡೆಯಬಹುದು.
* ಹತ್ತುವಾಗ ಯಾವುದೇ ಆರೋಗ್ಯ ಸಮಸ್ಯೆ ಉಂಟಾದರೆ, ಮಾರ್ಗ ಉದ್ದಕ್ಕೂ ಕಾರ್ಯನಿರ್ವಹಿಸುವ ತುರ್ತು ವೈದ್ಯಕೀಯ ಕೇಂದ್ರಗಳಿಂದ ವೈದ್ಯಕೀಯ ನೆರವು ಪಡೆಯಬಹುದು
* ತೀರ್ಥಯಾತ್ರೆಯ ಸಮಯದಲ್ಲಿ ನಿಮ್ಮ ಕಾಯಿಲೆಗಳ ಆಸ್ಪತ್ರೆ ದಾಖಲೆಗಳು, ಔಷಧಿಗಳ ಪ್ರಿಸ್ಕ್ರಿಪ್ಷನ್ಗಳು ಮತ್ತು ಆರೋಗ್ಯ ವಿಮೆ ದಾಖಲೆಗಳನ್ನು ಒಯ್ಯಿರಿ
ಶಬರಿಮಲೆ ಯಾತ್ರೆಗೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ
ಮಕರವಿಳಕ್ಕು ಋತುವಿನ ಪ್ರಕಾರ, ಆನ್‌ಲೈನ್ ಬುಕಿಂಗ್ ಆಧಾರದ ಮೇಲೆ ಪ್ರತಿದಿನ 70,000 ಭಕ್ತರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ತ್ವರಿತ ಬುಕಿಂಗ್ ಆಧಾರದ ಮೇಲೆ ಇನ್ನೂ 10,000 ಜನರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ವಂಡಿಪ್ಪೆರಿಯಾರ್, ಎರುಮೇಲಿ ಮತ್ತು ಬಾಂಬೆಯಲ್ಲಿ ಮೀಸಲಾತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇನ್ಮುಂದೆ ಶಬರಿಮಲೆಗೆ ಬರುವ ಎಲ್ಲಾ ಭಕ್ತರಿಗೆ ಆಧಾರ್ ಕಡ್ಡಾಯವಾಗಿದೆ ಎಂದು ತಿರುವಾಂಕೂರು ದೇವಸ್ಥಾನದ ಅಧ್ಯಕ್ಷ ಪ್ರಶಾಂತ್ ತಿಳಿಸಿದ್ದಾರೆ.
ವಿಮಾನದಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅವಕಾಶ
ನಾಗರಿಕ ವಿಮಾನಯಾನ ಸಂಸ್ಥೆ ಇರುಮುಡಿ ತೆಗೆದುಕೊಂಡು ಶಬರಿಮಲೆಗೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್ ನೀಡಿದ್ದು, ವಿಮಾನದಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗುವಂತಿಲ್ಲ ಎಂಬ ನಿಯಮಕ್ಕೆ ಬ್ರೇಕ್ ಹಾಕಿದೆ. ಆ ಮೂಲಕ ಶಬರಿಮಲೆ ದರ್ಶನಕ್ಕೆ ಪ್ರಯಾಸದಿಂದ ಹೋಗ್ತಾ ಇದ್ದ ಭಕ್ತರು ಇನ್ಮುಂದೆ ಸುಲಭವಾಗಿ ಸ್ವಾಮಿಯ ದರ್ಶನ ಪಡೆಯಬಹುದಾಗಿದೆ.
ಇನ್ನೂ ವಿಮಾನದಲ್ಲಿ ಇರುಮುಡಿ ತೆಗೆದುಕೊಂಡು ಹೋಗಲು ಭಯಸುವ ಭಕ್ತರಿಗೆ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಇರುಮುಡಿಯ ಪರಿಶೀಲನೆ, ಸ್ಕ್ಯಾನಿಂಗ್ ಇರುತ್ತದೆ, ಭದ್ರತಾ ಪರಿಶೀಲನೆ ಒಳಪಟ್ಟು ಇರುಮುಡಿ ಜೊತೆ ಹೋಗಲು ಭಕ್ತರಿಗೆ ಅವಕಾಶ ನೀಡಲಾಗಿದೆ.












Click it and Unblock the Notifications