ಕೊರೊನಾವೈರಸ್ ಜೊತೆ ಬದುಕಲು ಕಲಿಯಿರಿ: ಕೇಂದ್ರ ಸಲಹೆ
ನವದೆಹಲಿ, ಮೇ 9: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಸಾವಿರಕ್ಕೆ ತಲುಪಿದ್ದು, ವೈರಸ್ ಜೊತೆ ಬದುಕಲು ಕಲಿಯಿರಿ ಎಂದು ಕೇಂದ್ರ ಸಲಹೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ನಾವೆಲ್ಲರೂ ವೈರಸ್ ಜೊತೆಗೆ ಬದುಕಬೇಕಾದ ಬಹುದೊಡ್ಡ ಸವಾಲು ಮುಂದಿದೆ. ಈ ರೀತಿ ಮಾಡಲು ಸರ್ಕಾರದ ಮಾರ್ಗಸೂಚಿಗಳನ್ನು ನಡವಳಿಕೆಯಲ್ಲೇ ಬದಲಾವಣೆ ಮಾಡಿಕೊಳ್ಳುವಂತೆ ಅಳವಡಿಸಿಕೊಳ್ಳುವುದು ತುಂಬಾ ಮಹತ್ವವಾದದ್ದು ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ನಿಗ್ರಹಕ್ಕಾಗಿ ಘೋಷಿಸಲಾಗಿರುವ ಲಾಕ್'ಡೌನ್ ಸಡಿಲಗೊಂಡ ಬಳಿಕ ವೈರಸ್ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿರುಾಗಲೇ ವೈರಸ್ ಜೊತೆಗೆ ಬದುಕೋದು ಕಲಿಯಿರಿ ಎಂದು ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಸಲಹೆ ನೀಡಿದೆ.
ಇದು ಅಚ್ಚರಿಗೆ ಕಾರಣವಾಗಿದ್ದು, ಮೇ.17ರ ನಂತರ ಲಾಕ್'ಡೌನ್ ವಿಸ್ತರಣೆಯಾಗುವುದಿಲ್ಲ ಎಂಬ ಸುಳಿವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಕೂಡ ಇದೇ ರೀತಿಯ ಮಾತನ್ನು ಇತ್ತೀಚೆಗೆ ಆಡಿದ್ದರು. ದೆಹಲಿಯನ್ನು ಪುನಃ ತೆರೆಯುವ ಸಮಯ ಬಂದಿದೆ. ಹೀಗಾಗಿ ವೈರಸ್ ಜೊತೆಗೆ ಜನರು ಬದುಕಬೇಕು ಎಂದಿದ್ದರು.
ದೇಶದ 216 ಜಿಲ್ಲೆಗಳಲ್ಲಿ ಈ ವರೆಗೆ ಒಂದೇ ಒಂದು ಕೊರೊನಾ ಕೇಸ್ ಪತ್ತೆಯಾಗಿಲ್ಲ. ಕಳೆದ 28 ದಿನಗಲಿಂದ 48 ಜಿಲ್ಲೆಗಳಲ್ಲಿ ಹೊಸದಾಗಿ ಸೋಂಕು ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.